ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 2004ರಲ್ಲಿ ಆರತಿ ಅಹ್ಲಾವತ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಸೆಹ್ವಾಗ್, ಇಬ್ಬರು ಪುತ್ರರ ತಂದೆ.
ಆದರೆ ಇತ್ತೀಚಿನ ವರದಿಗಳ ಪ್ರಕಾರ, ಸೆಹ್ವಾಗ್ ಮತ್ತು ಆರತಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದ್ದು, ವಿಚ್ಛೇದನದ ಮಾತುಗಳು ಕೇಳಿಬರುತ್ತಿವೆ. ಈ ಅನಿರೀಕ್ಷಿತ ಬೆಳವಣಿಗೆಗೆ ಬಿಸಿಸಿಐನ ನೂತನ ಅಧ್ಯಕ್ಷ ಮಿಥುನ್ ಮನ್ಹಾಸ್ ಹೆಸರು ತಳುಕು ಹಾಕಿಕೊಂಡಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.
ಏನಿದು ಆರೋಪ?: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ಸೆಹ್ವಾಗ್ ಪತ್ನಿ ಆರತಿ ಅಹ್ಲಾವತ್ ಮತ್ತು ಮಿಥುನ್ ಮನ್ಹಾಸ್ ನಡುವೆ ನಿಕಟ ಸಂಬಂಧವಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದಾಗಿ ಸೆಹ್ವಾಗ್ ತಮ್ಮ ಪತ್ನಿಯಿಂದ ದೂರವಾಗಿದ್ದಾರೆ ಎಂಬ ಆರೋಪಗಳು ಹರಡುತ್ತಿವೆ.
ಈ ಸುದ್ದಿಗಳು ಹೊರಬೀಳುವ ಮುನ್ನ, ಖ್ಯಾತ ಪತ್ರಕರ್ತರೊಬ್ಬರು ಕ್ರಿಕೆಟ್ ಲೋಕದಲ್ಲಿ ಹಿಂದೆ ನಡೆದಿದ್ದ ಮುರಳಿ ವಿಜಯ್ ಮತ್ತು ದಿನೇಶ್ ಕಾರ್ತಿಕ್ ವಿವಾದವನ್ನು ನೆನಪಿಸಿ, ಇದೇ ರೀತಿಯ ಪರಿಸ್ಥಿತಿ ಮತ್ತೆ ಪುನರಾವರ್ತನೆಯಾಗಬಹುದು ಎಂದು ಪರೋಕ್ಷವಾಗಿ ಸುಳಿವು ನೀಡಿದ್ದರು. ಆ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ, ಆರತಿ ಅಹ್ಲಾವತ್ ಮತ್ತು ಮಿಥುನ್ ಮನ್ಹಾಸ್ ಒಟ್ಟಿಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿವೆ.
ಹಿನ್ನಲೆ ಮತ್ತು ಹೋಲಿಕೆ: ಮುರಳಿ ವಿಜಯ್ ಮತ್ತು ದಿನೇಶ್ ಕಾರ್ತಿಕ್ ಒಂದು ಕಾಲದ ಆತ್ಮೀಯ ಸ್ನೇಹಿತರು. ಆದರೆ ದಿನೇಶ್ ಕಾರ್ತಿಕ್ ಮಾಜಿ ಪತ್ನಿಯೊಂದಿಗೆ ಮುರಳಿ ವಿಜಯ್ ಅಕ್ರಮ ಸಂಬಂಧ ಹೊಂದಿದ್ದರು ಎಂಬ ವಿಷಯ ಬಹಿರಂಗವಾದಾಗ, ಕಾರ್ತಿಕ್ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು.
ಇದೇ ವಿಚಾರವನ್ನು ಪ್ರಸ್ತಾಪಿಸಿ ಪತ್ರಕರ್ತರು ಪೋಸ್ಟ್ ಹಂಚಿಕೊಂಡ ನಂತರ, ಸೆಹ್ವಾಗ್ ಮತ್ತು ಆರತಿ ವಿಚಾರ ಮುನ್ನಲೆಗೆ ಬಂದಿದೆ. ಸೆಹ್ವಾಗ್ ಮತ್ತು ಮಿಥುನ್ ಮನ್ಹಾಸ್ ಕೂಡ ಉತ್ತಮ ಸ್ನೇಹಿತರಾಗಿದ್ದು, ದೆಹಲಿ ಪರ ಒಟ್ಟಿಗೆ ಆಡಿದ್ದರು. ಈಗ ಅದೇ ಸ್ನೇಹಿತನ ಪತ್ನಿ ಜೊತೆ ಮಿಥುನ್ ಮನ್ಹಾಸ್ ಹೆಸರು ಕೇಳಿಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಿಥುನ್ ಮನ್ಹಾಸ್ ತಮ್ಮ ಸ್ನೇಹಿತನಾದ ಸೆಹ್ವಾಗ್‌ಗೆ ನಂಬಿಕೆ ದ್ರೋಹ ಎಸಗಿದರೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ಆರೋಪಗಳ ನಡುವೆಯೇ, ಸೆಹ್ವಾಗ್ ಪತ್ನಿ ಆರತಿ ಜೊತೆಗಿನ ಮಿಥುನ್ ಮನ್ಹಾಸ್ ವೈರಲ್ ಫೋಟೋಗಳು ಈ ಚರ್ಚೆಗೆ ಮತ್ತಷ್ಟು ಇಂಬು ನೀಡಿವೆ.
21 ವರ್ಷಗಳ ದಾಂಪತ್ಯ ಜೀವನ ನಡೆಸಿದ ಸೆಹ್ವಾಗ್ ಮತ್ತು ಆರತಿ ಸದ್ಯ ಬೇರೆ ಬೇರೆ ವಾಸಿಸುತ್ತಿದ್ದು, ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಈ ಸೂಕ್ಷ್ಮ ವಿಚಾರದಲ್ಲಿ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಹೆಸರು ಕೇಳಿಬಂದಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ. ಈ ಆರೋಪಗಳ ಸತ್ಯಾಸತ್ಯತೆ ಕಾಲವೇ ನಿರ್ಣಯಿಸಬೇಕಿದೆ.