ದಾವಣಗೆರೆ: ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀಸಲಾತಿ ಹೆಚ್ಚು ಮಾಡಿ, ಆ ಸಮುದಾಯಕ್ಕೆ ಮೀಸಲಾತಿ ನೀಡುತ್ತಾರೆಯೇ ಹೊರತು ಯಾವುದೇ ಸಮುದಾಯದ ಮೀಸಲಾತಿಯನ್ನು ಕಡಿಮೆ ಮಾಡಿ, ಕಿತ್ತುಕೊಂಡು ನೀಡುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.
ಚನ್ನಗಿರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಪಂಗಡದ ನಾಯಕ ಸಮುದಾಯಕ್ಕೆ ಶೇ.7.5 ಮೀಲಾತಿ ಇದ್ದೇ ಇರುತ್ತದೆ. ಕುರುಬ ಸಮುದಾಯಕ್ಕೆ ನೀಡುವ ಮೀಸಲಾತಿ ಹೆಚ್ಚಿಸಿ, ಕುರುಬ ಸಮುದಾಯದವರಿಗೆ ನೀಡುತ್ತಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡದಂತೆ ನಮ್ಮ ಪಕ್ಷದ ಹೈಕಮಾಂಡ್ ಹೇಳಿದೆ. ಹಾಗಾಗಿ ಅಂತಹ ವಿಚಾರದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಅವರು ಹೇಳಿದರು.
ಬಿಗ್ ಬಾಸ್ ಮನೆಗೆ ಬಿಗ: ಕಿರುತೆರೆಯ ಬಿಗ್ ಬಾಸ್ ಮನೆಯಲ್ಲಿದ್ದ ಅನೇಕ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದ್ದರೂ ಅದನ್ನು ಸರಿಪಡಿಸಿಕೊಳ್ಳದ ಕಾರಣಕ್ಕೆ ಬಿಗ್ ಬಾಸ್ ಮನೆಗೆ ಬೀಗ ಹಾಕಿಸಲಾಗಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಮಾಲಿನ್ಯ ನಿಯಂತ್ರಣ ಮಂಡಳಿ ಸಾಕಷ್ಟು ಸಲ ಬಿಗ್ ಬಾಸ್ ಮನೆಯಲ್ಲಿನ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಸೂಚನೆ ನೀಡಿತ್ತು. ಅದಕ್ಕೆ ಕಿವಿಗೊಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬೀಗ ಹಾಕಿಸಿದ್ದಾರೆ ಎಂದರು.
ನಟ್ಟು ಬೋಲ್ಟ್ ಟೈಟ್: ಈ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಟ್ಟು ಬೋಲ್ಟ್ ಟೈಟ್ ಮಾಡುವುದಾಗಿ ಹೇಳಿಕೆ ನೀಡಿದ್ದು ಚಿತ್ರರಂಗಕ್ಕೆ ಸಂಬಂಧಿಸಿದಂತೆ. ಬಿಗ್ ಬಾಸ್ ಮನೆಗೆ ಬೀಗ ಹಾಕಿಸಿದ್ದಕ್ಕೂ, ಹಿಂದೆ ಡಿ.ಕೆ.ಶಿವಕುಮಾರ ಆಡಿದ್ದ ಹೇಳಿಕೆಗೂ ಯಾವುದೇ ಸಂಬಂಧವೂ ಇಲ್ಲ. ಬಿಗ್ ಬಾಸ್ ಮನೆಯಲ್ಲಿ ಕೇವಲ ಇಬ್ಬರು ಅಥವಾ ಮೂವರು ನಟರು ಇರಬಹುದಷ್ಟೇ. ಅದಕ್ಕೆ ಮಾಡಿದ್ದಾರೆಂದು ಹೇಳುವುದು ತಪ್ಪಾಗುತ್ತದೆ ಎಂದು ಅವರು ತಿಳಿಸಿದರು.
ಸುಪ್ರೀಂ ನ್ಯಾಯಮೂರ್ತಿಗೆ ಶೂ ಎಸೆತ – ಬಿಜೆಪಿ ಖಂಡಿಸದಿರುವುದು ದುರಂತ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆತ ಪ್ರಕರಣವನ್ನು ಖಂಡಿಸಲು ಪ್ರಧಾನಿ ನರೇಂದ್ರ ಮೋದಿಗೆ 9 ಗಂಟೆ ಕಾಯಬೇಕಾಯಿತು. ಇದೊಂದು ದುರಂತ ಆದರೆ ಮುಖ್ಯ ನ್ಯಾಯಮೂರ್ತಿಗಳೇ ದೊಡ್ಡ ಮನುಷ್ಯರು ಹೋಗಲಿ ಬಿಡಿ ಅಂದಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿಯನ್ನು ಹೊರತುಪಡಿಸಿ, ಬಿಜೆಪಿಯವರಾಗಲೀ, ಕೇಂದ್ರದ ಸಚಿವರಾಗಲೀ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಿಲ್ಲ ಎಂದು ಅವರು ಟೀಕಿಸಿದರು.
ಶೂ ಎಸೆದ ಪ್ರಕರಣವನ್ನು ಬೆಂಬಲಿಸುವ ಜನರು ಈ ದೇಶದಲ್ಲಿದ್ದಾರೆಂದರೆ ಎಂತಹ ವಿಪರ್ಯಾಸ ಅಲ್ಲವೇ? ನಿಜವಾಗಲೂ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಮೇಲೆ ಈ ರೀತಿ ಶೂ ಎಸೆದಿದ್ದು ಖಂಡನೀಯ ಎಂದು ರಾಮಲಿಂಗಾರೆಡ್ಡಿ ಆಕ್ರೋಶ ಹೊರ ಹಾಕಿದರು.