ಕೊಪ್ಪಳ: ಸೀಗೆ ಹುಣ್ಣಿಮೆ ಹಿನ್ನೆಲೆ ನಾಡಿನ ಶಕ್ತಿದೇವತೆಗಳಲ್ಲಿ ಒಂದಾಗಿರುವ ತಾಲ್ಲೂಕಿನ ಹುಲಿಗಿ ಗ್ರಾಮದ ಆರಾಧ್ಯದೇವಿ ಶ್ರೀಹುಲಿಗೆಮ್ಮ ದೇವಿಯ ದರ್ಶನ ಪಡೆಯಲು ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯ ಭಕ್ತರ ಸಾಗರ ಹರಿದುಬಂದಿದೆ. ಇದರಿಂದಾಗಿ ನೂಕುನುಗ್ಗಲಾಗಿ ಮಕ್ಕಳು ಮತ್ತು ವೃದ್ಧರು ಕಾಲ್ತುಳಿತಕ್ಕೂ ಒಳಗಾಗಿ, ಉಸಿರುಗಟ್ಟಿಸುವ ವಾತವಾರಣ ನಿರ್ಮಾಣವಾಯಿತು.
ತಾಯಿಯ ವಾರವಾದ ಮಂಗಳವಾರವೇ ಸೀಗೆ ಹುಣ್ಣಿಮೆ ಬಂದಿದ್ದು, ಪ್ರತಿವರ್ಷಕ್ಕಿಂತಲೂ ಹೆಚ್ಚಿನ ಭಕ್ತರು ನೆರೆಯ ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ೪ ಲಕ್ಷಕ್ಕೂ ಹೆಚ್ಚಿನ ಭಕ್ತರು ಬೆಳ್ಳಂ ಬೆಳಿಗ್ಗೆಯಿಂದಲೇ ರೈಲು, ಟ್ಯಾಕ್ಟರ್, ಬಸ್, ಬೈಕ್ ಮೂಲಕ ಆಗಮಿಸಿದ್ದರು. ಸೀಗೆ ಹುಣ್ಣಿಗೆ ನಿಮಿತ್ತ ಕೆಲವು ಭಕ್ತರು ಒಂದು ದಿನ ಮುಂಚಿತವಾಗಿಯೇ ಬಂದು, ಕ್ಷೇತ್ರದಲ್ಲಿ ತಂಗಿದ್ದರು. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು.
ಹುಲಿಗೆಮ್ಮ ದೇವಿಯ ದೇವಸ್ಥಾನದಿಂದ ಮುಖ್ಯಧ್ವಾರದ ವರೆಗೂ ಸುಮಾರು ಎರಡು ಕಿಲೋ ಮೀಟರ್ ಭಕ್ತರು ನೂಕುತ್ತಲ್ಲೇ ದೇವಸ್ಥಾನ ತಲುಪಿದರು. ಮುಖ್ಯಧ್ವಾರದ ಬಳಿಯ ವಾಹನಗಳನ್ನು ನಿಲುಗಡೆ ಮಾಡಿ, ಭಕ್ತರು ಜನಜಂಗುಳಿ ಮಧ್ಯೆಯೇ ಬಂದರು. ದೇವಸ್ಥಾನ ತಲುಪಿದ ಭಕ್ತರು, ಸೋಮವಾರ ರಾತ್ರಿಯಿಂದಲೇ ಸರತಿ ನಿಂತಿದ್ದನ್ನು ನೋಡಿ, ಗೋಪುರದ ಮುಂದೆಯೇ ಪೂಜೆ ಸಲ್ಲಿಸಿ, ತೆರಳಿದರು.
ಮಂಗಳವಾರವೇ ಸೀಗೆ ಹುಣ್ಣಿಮೆ ಬಂದಿದ್ದು, ಇದರಿಂದಾಗಿ ಪ್ರತಿವರ್ಷಕ್ಕಿಂತಲೂ ಅಧಿಕ ಭಕ್ತರು ಆಗಮಿಸಿದ್ದರು. ಇದರಿಂದ ಸಂಚಾರ ದಟ್ಟಣೆ ಉಂಟಾಯಿತು. ವೃದ್ಧರು ಮತ್ತು ಮಕ್ಕಳು ನೂಕುನುಗ್ಗಲಾಗಿದ್ದಕ್ಕೆ ಕಾಲ್ತುಳಿತಕ್ಕೆ ಒಳಗಾಗಿ ಪರದಾಡಿದರು. ಮಾಹಿತಿ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ವಾಹನಗಳ ದಟ್ಟಣೆಯನ್ನು ನಿಯಂತ್ರಣ ಮಾಡಿದರು. ಲಾಠಿ ಹಿಡಿದ ಅವರು ನಿಲ್ಲಿಸಿದ ವಾಹನಗಳಿಗೆ ಎಚ್ಚರಿಕೆ ನೀಡಿ ಮುಂದಕ್ಕೆ ಸಾಗಿಸುವಂತೆ ಸೂಚಿಸಿದರು..
ಇನ್ನು ಪ್ರತಿ ಹುಣ್ಣಿಮೆ, ಮಂಗಳವಾರ, ಶುಕ್ರವಾರ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಕರ್ನಾಟಕದಿಂದ ಲಕ್ಷಾಂತರ ಭಕ್ತರು ಹುಲಿಗೆಮ್ಮ ದೇವಸ್ಥಾನಕ್ಕೆ ಹರಿದು ಬರುತ್ತಾರೆ. ಪ್ರಮುಖವಾಗಿ ರೈಲ್ವೆ ಮೇಲ್ಸೆತುವೆ ನಿರ್ಮಾಣ ಆಗುತ್ತಿದ್ದು, ಸಾಕಷ್ಟು ವಿಳಂಬವಾಗುತ್ತಿದೆ. ಇದರಿಂದ ಸಾಕಷ್ಟು ಸಂಚಾರ ದಟ್ಟಣೆ ಉಂಟಾಗುತ್ತಿದೆ. ಕೋಟಿ ಆದಾಯವಿದ್ದರೂ, ಮೂಲಸೌಕರ್ಯಗಳ ಕೊರತೆಯಿಂದಾಗಿ ಭಕ್ತರು ಪರದಾಡುವ ಪರಿಸ್ಥಿತಿ ಇದೆ. ಹಾಗಾಗಿ ಭಕ್ತರು ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.