ಜೋಯಿಡಾ: ಜಾತಿಗಣತಿ ಎಡವಟ್ಟು, ಅರಣ್ಯವಾಸಿಗಳಿಗೆ ಅಲೆದಾಟ

0
37

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವಿಭಿನ್ನ ರೀತಿಯಲ್ಲಿ ನಡೆಯುತ್ತಿದೆ. ರಾಜ್ಯದಲ್ಲೇ ವಿಸ್ತಾರ ಹೊಂದಿದ ಮತ್ತು ದಟ್ಟ ಅರಣ್ಯದಿಂದ ಕೂಡಿದ ಈ ತಾಲೂಕಿನಲ್ಲಿ ಸಮೀಕ್ಷಕರು ಮನೆ ಮನೆಗೆ ತೆರಳುವ ಬದಲು, ಗ್ರಾಮಸ್ಥರನ್ನೇ ಗ್ರಾಮ ಪಂಚಾಯತ್ ಕಚೇರಿಗಳಿಗೆ ಕರೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ದಟ್ಟ ಅರಣ್ಯ, ಮೊಬೈಲ್ ನೆಟ್‌ವರ್ಕ್ ಸಮಸ್ಯೆ, ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಕಾಡುಪ್ರಾಣಿಗಳ ಭೀತಿಯಿಂದ ಸಮೀಕ್ಷಕರು ಕುಗ್ರಾಮಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಪರಿಣಾಮವಾಗಿ, ಅನೇಕ ಅರಣ್ಯವಾಸಿಗಳು ಮತ್ತು ಕುಟುಂಬ ನಿರ್ವಹಣೆಗಾಗಿ ಗೋವಾ ಮತ್ತಿತರ ಪ್ರದೇಶಗಳಿಗೆ ವಲಸೆ ಹೋಗಿರುವವರು ಪಂಚಾಯತ್ ಕಚೇರಿಗೆ ಬಂದು ಮಾಹಿತಿ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಇದರಿಂದ ಗ್ರಾಮಸ್ಥರಿಗೆ ಅನಗತ್ಯ ಅಲೆದಾಟ ಮತ್ತು ಒತ್ತಡಕ್ಕೆ ಕಾರಣವಾಗಿದೆ. ಕೆಲವು ಕಡೆಗಳಲ್ಲಿ, ಕುಟುಂಬ ನಿರ್ವಹಣೆಗಾಗಿ ವಲಸೆ ಹೋದವರನ್ನು ಸಹ ಪಂಚಾಯಿತಿ ಕಚೇರಿಗೆ ಬಂದು ಮಾಹಿತಿ ನೀಡುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸಲು ಮತ್ತು ಸರ್ಕಾರಿ ನೀತಿಗಳನ್ನು ರೂಪಿಸಲು ಈ ಸಮೀಕ್ಷೆ ಅತ್ಯಗತ್ಯ ಎಂದು ಹೇಳಲಾಗುತ್ತಿದೆ.

ಆದರೆ ಜೋಯಿಡಾದಂತಹ ಹಿಂದುಳಿದ ತಾಲೂಕಿನಲ್ಲಿಯೇ ಹಿಂದುಳಿದ ವರ್ಗದವರ ಸಮೀಕ್ಷೆಯಲ್ಲಿ ಇಂತಹ ಎಡವಟ್ಟುಗಳು ನಡೆಯುತ್ತಿರುವುದು ಸಮೀಕ್ಷೆಯ ಉದ್ದೇಶವನ್ನೇ ಹಾಳುಮಾಡಬಹುದು ಎಂಬ ಕಳವಳ ವ್ಯಕ್ತವಾಗಿದೆ. ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಇಂತಹ ಲೋಪದೋಷಗಳನ್ನು ಕೂಡಲೇ ಸರಿಪಡಿಸಿ, ಸಮೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ಸಮರ್ಪಕವಾಗಿ ನಡೆಸುವಂತೆ ಆಗ್ರಹ ಕೇಳಿಬಂದಿದೆ. ಅಧಿಕಾರಿಗಳು ಮತ್ತು ಸಮೀಕ್ಷಕರು ಸಮೀಕ್ಷಾ ಕಾರ್ಯ ಮುಗಿದರೆ ಸಾಕು ಎನ್ನುವ ಮನಸ್ಥಿತಿಯಲ್ಲಿರುವುದು ಕಂಡುಬಂದಿದೆ.

Previous articleಮಹರ್ಷಿ ವಾಲ್ಮೀಕಿ: ದೇಶ ಕಂಡ ಅಪರೂಪದ ಸಾಹಿತಿ- ಸಿದ್ದರಾಮಯ್ಯ
Next articleಮಹೀಂದ್ರಾ ಫಾರ್ಮುಲಾ ಇ ಕಾರ್‌ನೊಂದಿಗೆ ನಟ ಅಜಿತ್ ಕುಮಾರ್

LEAVE A REPLY

Please enter your comment!
Please enter your name here