ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ ಅಧ್ಯಾಯ-1’ ಸಿನಿಮಾ ಭಾರಿ ಸದ್ದು ಮಾಡುತ್ತಿದ್ದು ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ಅನೇಕ ಸಿನಿ ತಾರೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರ ಇದೀಗ ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕಾಂತಾರ ತಂಡವನ್ನು ಭೇಟಿ ಮಾಡಿ ಸಿನಿಮಾದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ದೆಹಲಿಯ ಮುಖ್ಯಮಂತ್ರಿ ಜನಸೇವಾ ಸದನದಲ್ಲಿ ನಡೆದ ಈ ಭೇಟಿಯಲ್ಲಿ, ಸಿಎಂ ರೇಖಾ ಗುಪ್ತಾ ನಿರ್ದೇಶಕ ಮತ್ತು ನಾಯಕ ನಟ ರಿಷಬ್ ಶೆಟ್ಟಿ ಹಾಗೂ ತಂಡವನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾಂತಾರ ಅಧ್ಯಾಯ-1ರ ಕುರಿತು ಮಾತನಾಡಿ, “ಈ ಚಿತ್ರ ಭಾರತದ ಆಧ್ಯಾತ್ಮಿಕ ಆಳ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅತ್ಯಂತ ಸುಂದರವಾಗಿ ತೆರೆದಿಟ್ಟಿದೆ. ನಮ್ಮ ದೇಶದ ಪುರಾತನ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ತೆರೆಯ ಮೇಲೆ ಜೀವಂತಗೊಳಿಸುವಲ್ಲಿ ಸಿನಿಮಾ ಯಶಸ್ವಿಯಾಗಿದೆ” ಎಂದು ಪ್ರಶಂಸಿಸಿದರು.
ಸಮಾಜಿಕ ಮಾಧ್ಯಮದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ರೇಖಾ ಗುಪ್ತಾ, “ಕಾಂತಾರದಂತಹ ಚಲನಚಿತ್ರಗಳು ನಮ್ಮ ಭವ್ಯ ಪರಂಪರೆಯ ಚೈತನ್ಯವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುತ್ತವೆ. ಇದು ಕೇವಲ ಒಂದು ಸಿನಿಮಾ ಅಲ್ಲ, ಬದಲಿಗೆ ನಮ್ಮ ಸಂಸ್ಕೃತಿಯ ಹೆಮ್ಮೆಯ ಪ್ರತೀಕ. ಈ ಗಮನಾರ್ಹ ಸಿನಿ ಪ್ರಯಾಣದಲ್ಲಿ ಇಡೀ ತಂಡಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಕಾಂತಾರ ಅಧ್ಯಾಯ 1 ಚಿತ್ರವು ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಕರುನಾಡಿನ ಕಥೆಯೊಂದು ರಾಷ್ಟ್ರಮಟ್ಟದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಪ್ರಶಂಸೆ ಪಡೆಯುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯ.