ವೈದ್ಯರ ಸಲಹೆ ಇದ್ದರೆ ಮಾತ್ರ ಕೆಮ್ಮಿನ ಔಷಧಿ ಬಳಸಿ

0
80

ಜನರು ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಕೆಮ್ಮಿನ ಔಷಧಿಗಳನ್ನು ಬಳಸಿ ಎಂದು ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಹೇಳಿದ್ದಾರೆ.

ಎರಡು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕೆಮ್ಮಿನ ಸೀರಪ್ ನೀಡಬಾರದು ಹಾಗೂ 2 ರಿಂದ 5 ವರ್ಷದೊಳಗಿನ ಮಕ್ಕಳಿಗೆ ತಜ್ಞ ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಕೆಮ್ಮಿನ ಔಷಧಿಗಳನ್ನು ನೀಡಬೇಕು ಎಂದು ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ನಿವಾರಣೆಗಾಗಿ ನೀಡಿದ ಕೋಲ್ಡ್ರಿಫ್ ಸಿರಫ್ ಸೇವನೆಯಿಂದ ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಮಕ್ಕಳು ಮೃತಪಟ್ಟ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಬಳ್ಳಾರಿ ಜಿಲ್ಲೆಯಲ್ಲೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಈ ಔಷಧಿ ಕುರಿತು ನಿಗಾವಹಿಸುವಂತೆ ಮತ್ತು ಔಷಧಿ ಅಂಗಡಿಗಳ ಮಾರಾಟಗಾರರು ತಮ್ಮ ಬಳಿ ಇದ್ದಲ್ಲಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಮುಂಜಾಗ್ರತೆ ವಹಿಸಬೇಕು ಎಂದು ಔಷಧ ಆಡಳಿತ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿಪಂ ಸಿಇಒ ಅವರು ಸೂಚಿಸಿದ್ದಾರೆ.

ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಈ ದಿಶೆಯಲ್ಲಿ ತೀವ್ರ ನಿಗಾವಹಿಸಲು ನೀಡಿರುವ ನಿರ್ದೇಶನ ಮತ್ತು ಸರ್ಕಾರದ ಆದೇಶದಂತೆ ಸೆಕ್ಷನ್ 26(ಎ) ನ ಡ್ರಗ್ ಮತ್ತು ಕಾಸ್ಮೇಟಿಕ್ಸ್ ಆಕ್ಟ್ 1940 (23 ಆಪ್ 1940)ರ ಅನ್ವಯ 4 ವರ್ಷದೊಳಗಿನ ಮಕ್ಕಳಿಗೆ ಕ್ಲೋರೊಫೆನಿರಮೈನ್ ಮಲೇಟ್ ಹಾಗೂ ಫಿನೈಲ್‌ಫ್ರೀನೆ ಹೈಡ್ರೋಕ್ಲೋರೈಡ್ ಸಂಯೊಜಿತ ಸೀರಫ್‌ ಅನ್ನು ನೀಡದಂತೆ ಹಾಗೂ ವಿತರಿಸದಂತೆ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಹಾಗಾಗಿ ಸಾರ್ವಜನಿಕರು ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಕೆಮ್ಮಿನ ಔಷಧಿಗಳನ್ನು ಬಳಸಬೇಕು ಎಂದು ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕೋಲ್ಡ್ರಿಫ್ ಸಿರಫ್ ಔಷಧಿ ಸರಬರಾಜು ಆಗಿರುವುದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಕೆಮ್ಮಿನ ಸೀರಫ್ ಕುರಿತು ಇಲಾಖೆಯ ಸಿಬ್ಬಂದಿಯವರಿಂದ ಸಾರ್ವಜನಿಕರಿಗೆ ಜಿಲ್ಲೆಯಾದ್ಯಂತ ಜಾಗೃತಿ ನೀಡಲಾಗುತ್ತಿದ್ದು, ಆಸ್ಪತ್ರೆಗೆ ಬರುವ ಸಾರ್ವಜನಿಕರು ವೈದ್ಯರು ತಿಳಿಸುವ ಸಲಹೆಗಳಂತೆ ಔಷಧಿಗಳನ್ನು ಬಳಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ ಬಾಬು ಮನವಿ ಮಾಡಿದ್ದಾರೆ.

Previous articleZoho: ಪಾವತಿ ಲೋಕದತ್ತ ಹೊಸ ಹೆಜ್ಜೆ
Next articleಪ್ರಧಾನಿ ಮೋದಿ: ಸಾರ್ವಜನಿಕ ಹುದ್ದೆಯಲ್ಲಿ 24 ವರ್ಷ ಪೂರ್ಣ

LEAVE A REPLY

Please enter your comment!
Please enter your name here