ಭಾರತೀಯ ಕ್ರಿಕೆಟ್‌ನ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಕುಟುಂಬದಿಂದ ಮತ್ತೊಬ್ಬ ಪ್ರತಿಭಾವಂತ ಕ್ರಿಕೆಟಿಗ ಕಣಕ್ಕಿಳಿದಿದ್ದಾರೆ. ಹಿರಿಯ ಪುತ್ರ ಸಮಿತ್ ದ್ರಾವಿಡ್ ಈಗಾಗಲೇ ಕರ್ನಾಟಕ ಅಂಡರ್-19 ತಂಡದಲ್ಲಿ ಮಿಂಚಿದ್ದರೆ, ಈಗ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಕೂಡ ಅಂಡರ್-19 ತಂಡಕ್ಕೆ ನಾಯಕರಾಗಿ ಆಯ್ಕೆಯಾಗುವ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ.
ಭಾನುವಾರವಷ್ಟೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಅತ್ಯುತ್ತಮ ಕಿರಿಯ ಬ್ಯಾಟರ್ ಪ್ರಶಸ್ತಿ ಪಡೆದಿದ್ದ ಅನ್ವಯ್‌ಗೆ, ಇದೀಗ ನಾಯಕತ್ವದ ಜವಾಬ್ದಾರಿಯೂ ಸಿಕ್ಕಿದೆ. ಅಕ್ಟೋಬರ್ 9 ರಿಂದ 17 ರವರೆಗೆ ಡೆಹ್ರಾಡೂನ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ವಿನೂ ಮಂಕಡ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿ ಹೆಗಲೇರಿದೆ.
ಅನ್ವಯ್ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದು, ಕೀಪಿಂಗ್ ಜವಾಬ್ದಾರಿಯ ಜೊತೆಗೆ ನಾಯಕನಾಗಿಯೂ ತಂಡಕ್ಕೆ ಕೊಡುಗೆ ನೀಡಲಿದ್ದಾರೆ. ಅನ್ವಯ್ ಪ್ರದರ್ಶನವು ಸ್ಥಿರವಾಗಿದೆ. ಈ ಬಾರಿಯ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಕರ್ನಾಟಕ ಅಂಡರ್-16 ತಂಡದ ಪರ ಆಡಿದ್ದ ಅನ್ವಯ್, ಎಂಟು ಇನ್ನಿಂಗ್ಸ್‌ಗಳಿಂದ ಒಟ್ಟು 459 ರನ್ ಗಳಿಸಿ ಮಿಂಚಿದ್ದರು.
ಈ ವೇಳೆ ಎರಡು ಭರ್ಜರಿ ಶತಕಗಳು ಮತ್ತು 48 ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸಿದ್ದರು. 91.80 ಸರಾಸರಿಯಲ್ಲಿ ರನ್ ಗಳಿಸಿ, ಈ ಟೂರ್ನಿಯಲ್ಲಿ ಕರ್ನಾಟಕ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದರು. ಈ ಅದ್ಭುತ ಪ್ರದರ್ಶನಕ್ಕಾಗಿ ಅನ್ವಯ್‌ಗೆ ಕರ್ನಾಟಕದ ಅತ್ಯುತ್ತಮ ಕಿರಿಯ ಬ್ಯಾಟರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಕಳೆದ ವರ್ಷವೂ ಇದೇ ಪ್ರಶಸ್ತಿಯನ್ನು ಅನ್ವಯ್ ಪಡೆದುಕೊಂಡಿದ್ದರು. ಈ ಯುವ ನಾಯಕನ ಮೇಲೆ ಕರ್ನಾಟಕ ಕ್ರಿಕೆಟ್ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ವಿನೂ ಮಂಕಡ್ ಟೂರ್ನಿಯಲ್ಲಿ ಅನ್ವಯ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರೆ, ಮುಂದಿನ ಕೆಲ ವರ್ಷಗಳ ಕಾಲ ಅವರೇ ನಾಯಕನಾಗಿ ಮುಂದುವರೆಯುವ ಸಾಧ್ಯತೆಯಿದೆ. ಅಂಡರ್-19 ತಂಡದಲ್ಲಿನ ಪ್ರದರ್ಶನವು ರಣಜಿ ತಂಡಕ್ಕೆ ಆಯ್ಕೆಯಾಗುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ವಿನೂ ಮಂಕಡ್ ಟೂರ್ನಿಗೆ ಕರ್ನಾಟಕ ಅಂಡರ್-19 ತಂಡ: ಅನ್ವಯ್ ದ್ರಾವಿಡ್ (ನಾಯಕ, ವಿಕೆಟ್ ಕೀಪರ್), ನಿತೀಶ್ ಆರ್ಯ, ಆದರ್ಶ್ ಡಿ ಅರಸ್ , ಎಸ್ ಮಣಿಕಾಂತ್ (ಉಪನಾಯಕ), ಪ್ರಣೀತ್ ಶೆಟ್ಟಿ , ವಾಸವ್ ವೆಂಕಟೇಶ್, ಅಕ್ಷತ್ ಪ್ರಭಾಕರ್, ಸಿ ವೈಭವ್, ಕುಲದೀಪ್ ಸಿಂಗ್ ಪುರೋಹಿತ್, ರತನ್ ಬಿಆರ್, ವೈಭವ್ ಶರ್ಮಾ, ಕೆಎ ತೇಜಸ್ , ಅಥರ್ವ್ ಮಾಳವಿಯಾ, ಸನ್ನಿ ಕಾಂಚಿ, ರೆಹಾನ್ ಮೊಹಮ್ಮದ್ (ವಿಕೆಟ್ ಕೀಪರ್).