ಭಾನುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾದ ಲೇಖನ
– ಸುಮನಾ ಲಕ್ಷ್ಮೀಶ
ಸ್ಮಾರ್ಟ್ ಫೋನ್, ಸೋಷಿಯಲ್ ಮೀಡಿಯಾ ಥರದ ಆಕರ್ಷಣೆಗಳಿಗೆ ಮನಸ್ಸನ್ನು ನೀಡಿದ ಮಕ್ಕಳು ಓದಿನಲ್ಲಿ ಹಿಂದುಳಿಯುವುದು, ಆಟೋಟಗಳನ್ನು ಬಿಡುವುದು, ಮನೆಯಲ್ಲಿ ಕೋಪತಾಪ ಪ್ರದರ್ಶಿಸುವುದು, ಹಠಮಾರಿಯಾಗುವುದು, ಆತಂಕದಲ್ಲಿರುವುದು ಇತ್ಯಾದಿ ಲಕ್ಷಣಗಳು ಕಂಡುಬರುತ್ತಿದೆ. ಇವೆಲ್ಲ ವ್ಯಸನದ ಲಕ್ಷಣಗಳೂ ಹೌದು. ಇವು ಬೆಳೆಯುತ್ತಿರುವ ಮಕ್ಕಳಲ್ಲಿ ವ್ಯಸನದ ರೂಪಕ್ಕೆ ತಿರುಗದಂತೆ ನೋಡಿಕೊಳ್ಳಬೇಕಿದೆ.
ಆರನೇ ತರಗತಿಯ ವಿದ್ಯಾರ್ಥಿಯೊಬ್ಬ ಮೊಬೈಲ್ ಗೇಮ್‌ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಇತ್ತೀಚಿನ ಘಟನೆ ಮನಕಲಕುವಂಥದ್ದು. ಮೊಬೈಲ್ ಗೇಮ್‌ನಲ್ಲಿ ಆತ ಕಳೆದುಕೊಂಡ ಹಣ ಬರೋಬ್ಬರಿ 13 ಲಕ್ಷ ರೂ. ಅಷ್ಟು ಹಣವೇನೂ ಒಮ್ಮೆಲೇ ಹೋಗಿಬಿಡುವುದಿಲ್ಲ. ಹಂತಹಂತವಾಗಿ ಕಳೆದುಕೊಂಡಿರುತ್ತಾನೆ. ಆದರೆ, ಅಷ್ಟೆಲ್ಲ ಹಣ ಕಳೆಯುತ್ತಿದ್ದರೂ ಆತನಿಗೆ ವಾಸ್ತವದ ಅರಿವೇ ಆಗಲಿಲ್ಲವೇ? ದೊಡ್ಡ ಮೊತ್ತದ ಹಣ ಸುಲಭವಾಗಿ ದೊರೆಯಿತೇ? ತಂದೆಯ ಹಣ ಪಡೆದುಕೊಳ್ಳಲು ಆತ ಸಂಚು ಮಾಡಿರಬಹುದೇ? ಅಷ್ಟು ಸಮಯ ಆತ ಮೊಬೈಲ್‌ನಲ್ಲಿರಲು ಪಾಲಕರು ಹೇಗೆ ಬಿಟ್ಟರು? ಹೀಗೆ ಎದುರಾಗುವ ಪ್ರಶ್ನೆಗಳು ಒಂದೆರಡಲ್ಲ. ಒಟ್ಟಿನಲ್ಲಿ, ದೊಡ್ಡವರದ್ದು ಎಂದುಕೊಂಡ ಅನೇಕ ಸಮಸ್ಯೆಗಳು ಇಂದಿನ ಮಕ್ಕಳನ್ನೂ ಕಾಡುತ್ತಿರುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾಗಿಲ್ಲ. ಈ ಘಟನೆ ನಡೆದದ್ದು ಉತ್ತರ ಪ್ರದೇಶದ ಲಖನೌದಲ್ಲಿ.
ಆನ್‌ಲೈನ್ ಕ್ಲಾಸುಗಳು, ಟೀಚರ್ ಕಳಿಸುವ ಹೋಂ ವರ್ಕ್, ಸ್ನೇಹಿತರ ನಡುವೆ ಓಡಾಡುವ ನೋಟ್ಸ್ ಎಲ್ಲವೂ ಇಂದು ಮೊಬೈಲ್‌ನಲ್ಲಿಯೇ ಸಾಗುತ್ತಿರುವಾಗ ಮಕ್ಕಳು ಸಹಜವಾಗಿಯೇ ಹೆಚ್ಚು ಸ್ಕ್ರೀನ್ ಟೈಮ್‌ಗೆ ಒಳಗಾಗುತ್ತಿದ್ದಾರೆ. ಸಮಸ್ಯೆ ಎಂದರೆ, ಅವರು ನಿಜವಾಗಿಯೂ ಹೋಂ ವರ್ಕ್‌ಗಾಗಿ ಮೊಬೈಲ್ ಬಳಸುತ್ತಿದ್ದಾರೋ, ಆಟವಾಡುತ್ತಿದ್ದಾರೋ ಅಥವಾ ರೀಲ್ಸ್ ನೋಡುತ್ತಿದ್ದಾರೋ ಎಂದು ಪಾಲಕರಿಗೆ ಗೊತ್ತಾಗುವುದು ಕಡಿಮೆ. ಒಂದುವೇಳೆ ಗೊತ್ತಾದರೂ ಪಾಲಕರ ಸಲಹೆಗಳನ್ನು ಅವರು ಸ್ವೀಕರಿಸುವುದೂ ಕಡಿಮೆ. ಅಷ್ಟೇ ಅಲ್ಲ, ಪಾಲಕರಿಂದ ಮರೆಮಾಚುವ ತಂತ್ರಗಳನ್ನೂ ಬಹುಬೇಗ ಕಲಿತುಬಿಟ್ಟಿರುತ್ತಾರೆ. ಹೀಗಾಗಿ, ಸ್ಮಾರ್ಟ್ ಫೋನ್‌ಗಳು, ಸಾಮಾಜಿಕ ಜಾಲತಾಣಗಳು ನೀಡುವ ಅಸಂಖ್ಯ ಅವಕಾಶಗಳು ನಮ್ಮ ಮಕ್ಕಳನ್ನು ಎಲ್ಲಿಗೆ ಕರೆದೊಯ್ಯುತ್ತಿವೆ ಎನ್ನುವ ಆತಂಕ ಮೂಡಿಸಿವೆ.
ಆಕರ್ಷಕ ಲೋಕ: ಮೊಬೈಲ್ ಹುಚ್ಚು ಇಂದು ಯಾರನ್ನೂ ಬಿಟ್ಟಿಲ್ಲ. ‘ಯಾರದ್ದೋ ಮೆಸೇಜ್ ಬರುವುದಿದೆ, ಚೆಕ್ ಮಾಡಿಬಿಡೋಣ’ ಎಂದುಕೊಂಡು ಸ್ಮಾರ್ಟ್ ಫೋನ್ ಎತ್ತಿಕೊಂಡರೆ ಗೊತ್ತೇ ಆಗದಂತೆ ಅಲ್ಲೇ ಹತ್ತು ನಿಮಿಷ ಕಳೆದಿರುತ್ತೇವೆ. ಅಂಥದ್ದರಲ್ಲಿ ಮೊದಲೇ ಮಾನಸಿಕ ಬದಲಾವಣೆಯ ಹೊಸ್ತಿಲಲ್ಲಿರುವ ಹದಿಹರೆಯದ ಮಕ್ಕಳು, ಪಾಲಕರ ಅರಿವಿಗೂ ಬಾರದಂತೆ ಮೊಬೈಲ್ ಮೂಲಕ ಲೆಕ್ಕವಿಲ್ಲದಷ್ಟು ಆಕರ್ಷಣೆಗಳನ್ನು ಮನದೊಳಕ್ಕೆ ಸ್ಥಾಪಿಸಿಕೊಂಡುಬಿಟ್ಟರೆ ಅಚ್ಚರಿಯೇನಿಲ್ಲ. ಅವರನ್ನು ಅಂತಹ ಆಕರ್ಷಣೆಗಳಲ್ಲಿ ಸಿಲುಕಲು ಬಿಡದೆ, ವಾಸ್ತವ ಜೀವನದತ್ತ ಮುಖ ಮಾಡಿಸುವುದು ಇಂದಿನ ಪಾಲಕರ ಅತಿ ದೊಡ್ಡ ಸವಾಲು. ಹದಿಹರೆಯದವರಲ್ಲಿ ಸ್ಮಾರ್ಟ್ ಫೋನ್ ಅಡಿಕ್ಷನ್ ಹೆಚ್ಚಾಗಿದೆ ಎನ್ನುವುದನ್ನು ನಿತ್ಯವೂ ಹಲವು ರೂಪಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ, ಅದು ಯಾವ ಮಟ್ಟದಲ್ಲಿದೆ ಎನ್ನುವುದನ್ನು ಗುರುತಿಸುವುದು ಈಗಿನ ತುರ್ತು.
ನಿಮ್ಮ ಮಗು ವ್ಯಸನಿಯೇ? ಚೆಕ್ ಮಾಡಿ: ಬೇರೆ ಯಾವುದೇ ರೀತಿಯ ಅಡಿಕ್ಷನ್ ಅಥವಾ ವ್ಯಸನದಿಂದ ಉಂಟಾಗುವಷ್ಟೇ ಅಥವಾ ಇನ್ನೂ ಭೀಕರ ಪರಿಣಾಮಗಳನ್ನು ಸ್ಮಾರ್ಟ್ ಫೋನ್ ವ್ಯಸನದಲ್ಲೂ ಕಾಣಬಹುದು. ಯಾವುದೇ ವ್ಯಸನದಲ್ಲಾದರೂ ಸಾಮಾನ್ಯವಾಗಿ ಕೆಲವು ಲಕ್ಷಣಗಳು ಕಂಡುಬರುತ್ತವೆ. ಪ್ರಾಥಮಿಕ ಲಕ್ಷಣಗಳೆಂದರೆ – ಒಂಟಿತನ, ನಿದ್ರಾಹೀನತೆ, ಯಾರೊಂದಿಗೂ ಬೆರೆಯದೆ ಇರುವುದು, ಇತರ ಚಟುವಟಿಕೆಗಳು ಗಮನಾರ್ಹವಾಗಿ ಕಡಿಮೆಯಾಗುವುದು, ಅತಿ ಆತಂಕ, ಸದಾ ಕಾಲ ಚಡಪಡಿಕೆ ಇತ್ಯಾದಿ. ಮೊದಲನೆಯದಾಗಿ, ಚಟ ಮಾಡುವವರಿಗೆ ಒಂಟಿಯಾಗಿರುವುದೆಂದರೆ ಭಾರೀ ಇಷ್ಟ.
ನಿಮ್ಮ ಮಕ್ಕಳು ಸಹ ಸ್ಮಾರ್ಟ್ ಫೋನ್ ಒಂದಿದ್ದರೆ ಸಾಕು, ಬೇರೆ ಯಾರೂ ಬೇಡ ಎನ್ನುವ ಮನಃಸ್ಥಿತಿಯಲ್ಲಿದ್ದಾರೆಯೇ? ಮನೆಗೆ ಯಾರಾದರೂ ಬಂದರೆ ಅವರೊಂದಿಗೆ ಮಾತುಕತೆಯಲ್ಲಿ ತೊಡಗುವುದನ್ನು ಬಿಟ್ಟು ಮೊಬೈಲ್‌ನಲ್ಲಿ ಮುಳುಗಲು ಯತ್ನಿಸುತ್ತಾರೆಯೇ? ಗುರುತಿಸಿ. ಅವರ ಸ್ಕ್ರೀನ್ ಟೈಮ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ? ಅವರ ನಿದ್ರೆ ಕಡಿಮೆಯಾಗಿದೆಯೇ? ಕುಟುಂಬದೊಂದಿಗೆ ಬೆರೆಯುವುದಿಲ್ಲವೇ? ಬೆರೆತರೂ ಅನ್ಯಮನಸ್ಕರಾಗಿ ಇರುತ್ತಾರೆಯೇ? ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಅವರ ಮೊಬೈಲ್ ಚಾರ್ಜ್ ಮಾಡುತ್ತಾರೆಯೇ? ಊಟ-ತಿಂಡಿ ಮಾಡುವಾಗಲೂ ಮೊಬೈಲ್ ಹಿಡಿದಿರುತ್ತಾರೆಯೇ? ನಿಮ್ಮ ಸಲಹೆಗೆ ಅವರಲ್ಲಿ ಕಿರಿಕಿರಿ, ಕೋಪ ಹೆಚ್ಚುತ್ತಿದೆಯೇ? ತೆಗೆದು ಬಿಸಾಕುವಂತಹ ಹಿಂಸಾತ್ಮಕ ನಡವಳಿಕೆ ತೋರುತ್ತಿದ್ದಾರೆಯೇ?
ಇವೆಲ್ಲವುಗಳನ್ನು ಕೂಲಂಕಷವಾಗಿ ಗಮನಿಸಿ. ಅಗತ್ಯವಿದ್ದರೆ ತಜ್ಞರ ಸಹಾಯ ಪಡೆಯಲು ಹಿಂದೇಟು ಹಾಕಬೇಡಿ. ಯಾರು ಏನು ಅಂದುಕೊಳ್ಳುತ್ತಾರೋ, ಇಂದಲ್ಲ ನಾಳೆ ಸರಿಹೋಗುತ್ತಾರೆ ಎನ್ನುವಂಥ ಭಾವನೆಗಳನ್ನು ಬಿಟ್ಟುಬಿಡಿ. ಏಕೆಂದರೆ, ಅದು ವ್ಯಸನ. ಸುಲಭವಾಗಿ ಬಿಟ್ಟುಬಿಡಲು ಸಾಧ್ಯವಿಲ್ಲ. ಆದಷ್ಟು ಬೇಗ ಕ್ರಮ ಕೈಗೊಳ್ಳಿ.
ಮೊಬೈಲ್ ರೇಡಿಯೇಷನ್: ಮಕ್ಕಳ ಮೇಲೆ ತಂತ್ರಜ್ಞಾನದಿಂದ ಉಂಟಾಗುತ್ತಿರುವ ಹಲವು ಪರಿಣಾಮಗಳನ್ನು ಊಹಿಸಲೂ ಸಾಧ್ಯವಿಲ್ಲ. ವಿಜ್ಞಾನಿಗಳ ಆವಿಷ್ಕಾರದ ಪ್ರಕಾರ, ಮಕ್ಕಳ ಮಿದುಳು ವಯಸ್ಕರಿಗಿಂತ ತೆಳುವಾಗಿರುತ್ತದೆ. ಸರಿಸುಮಾರು ಶೇ. ೫೦ರಷ್ಟು ಕಡಿಮೆ ದಪ್ಪ ಹೊಂದಿರುತ್ತದೆ. ಪರಿಣಾಮವಾಗಿ, ಈ ಮಿದುಳು ವಿಕಿರಣವನ್ನು ಹೀರಿಕೊಳ್ಳುವ ಪ್ರಮಾಣ ಹೆಚ್ಚು. ಇತ್ತೀಚಿನ ಸಂಶೋಧನೆಯಂತೆ, ತೆಳುವಾಗಿರುವ ಮಕ್ಕಳ ಮಿದುಳು ಮೊಬೈಲ್ ಫೋನ್‌ಗಳಿಂದ ಶೇ. ೮೦ರಷ್ಟು ವಿಕಿರಣ ಹೀರಿಕೊಳ್ಳುತ್ತವೆ, ವಯಸ್ಕರಲ್ಲಿ ಈ ಪ್ರಮಾಣ ಶೇ. ೨೫ರಷ್ಟಿದೆ. ತೆಳುವಾಗಿರುವ ಮಿದುಳಿನಲ್ಲಿ ವಿಕಿರಣ ಅತ್ಯಂತ ಒಳಭಾಗಕ್ಕೆ ನುಸುಳಿ, ಮಿದುಳಿನ ಕೋಶಗಳನ್ನು ಪ್ರವೇಶಿಸುತ್ತದೆ. ಇನ್ನೂ ಬೆಳವಣಿಗೆ ಹೊಂದುತ್ತಿರುವ, ಕ್ಲಿಷ್ಟಕರ ಸಂಪರ್ಕ ವ್ಯವಸ್ಥೆಯನ್ನು ರೂಪಿಸುತ್ತಿರುವ ಮಿದುಳು ದೀರ್ಘಕಾಲ ವಿಕಿರಣದ ಪ್ರಭಾವಕ್ಕೆ ತುತ್ತಾದರೆ ನೆನಪಿನ ಶಕ್ತಿ, ಏಕಾಗ್ರತೆ, ಕಲಿಕೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ದೀರ್ಘಕಾಲದ ಪರಿಣಾಮಗಳ ಕುರಿತು ವಿಜ್ಞಾನಿಗಳು ಇನ್ನೂ ಅಧ್ಯಯನ ಮಾಡುತ್ತಿದ್ದಾರೆ.
ಇದು ಖಂಡಿತ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾದ ಸಮಯ. ಮಕ್ಕಳು ಇನ್ನೂ ಬೆಳವಣಿಗೆಯ ಹಾದಿಯಲ್ಲಿರುವವರು, ಹೊಂದಿಕೊಳ್ಳುತ್ತಿರುವವರಷ್ಟೇ ಅಲ್ಲ, ತಮ್ಮ ಪರಿಸರದ ಕುರಿತು ಅತ್ಯಂತ ಸೂಕ್ಷ್ಮತೆ ಹೊಂದಿರುವವರು ಎನ್ನುವುದನ್ನು ಈ ಅಧ್ಯಯನ ದೊಡ್ಡವರಿಗೆ ನೆನಪಿಸಿಕೊಡುವಂತಿದೆ. ತಂತ್ರಜ್ಞಾನ ಆಧಾರಿತ ಜಗತ್ತಿನಲ್ಲಿ ಯುವ ಮನಸ್ಸುಗಳನ್ನು ರಕ್ಷಿಸಿಕೊಳ್ಳುವ ಬಗ್ಗೆ ಪಾಲಕರು ಕೆಲಸ ಮಾಡಬೇಕಾದ ಅಗತ್ಯವನ್ನೂ ಇದು ಸೃಷ್ಟಿಸಿದೆ.
ಮಾನಸಿಕ ಸಮಸ್ಯೆಗಳು ಒಂದೆರಡಲ್ಲ: ಮಕ್ಕಳಲ್ಲಿ ಆತಂಕ, ಒತ್ತಡ, ಚಡಪಡಿಕೆ, ಏಕಾಗ್ರತೆಯ ಸಮಸ್ಯೆ ಉಂಟುಮಾಡುವಲ್ಲಿ ಮೊಬೈಲ್ ಪಾತ್ರ ದೊಡ್ಡದು. ಆನ್‌ಲೈನ್ ಗೇಮ್, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಮಕ್ಕಳಲ್ಲಿ ಇವು ಜಾಸ್ತಿ. ಸ್ವಪ್ರತಿಷ್ಠೆಯ ಭಾವನೆ ಹೆಚ್ಚಾಗಿರುವ ಮಕ್ಕಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಲೇ ಇರುವುದು, ಆತಂಕದಲ್ಲಿದ್ದರೆ ಸೆಲ್ಫಿಗಳನ್ನು ತೆಗೆಯುತ್ತಿರುವುದು, ಏಕಾಗ್ರತೆಯ ಕೊರತೆ ಇರುವವರು ಪದೇಪದೆ ಫೋನ್ ಚೆಕ್ ಮಾಡುತ್ತಲೇ ಇರುವುದು ಕಂಡುಬಂದಿದೆ. ಅಕಸ್ಮಾತ್ತಾಗಿ ಅಶ್ಲೀಲ ವಿಡಿಯೋ ನೋಡಿದ ಎಂಟು ವರ್ಷದ ಹೆಣ್ಣುಮಗುವೊಂದು, ಇದ್ದಕ್ಕಿದ್ದ ಹಾಗೆ ಮೌನಿಯಾಗಿ, ಮಾನಸಿಕ ಯಾತನೆ ಅನುಭವಿಸಿದ ಘಟನೆಗಳೂ ಜರುಗಿವೆ. ಹೀಗಾಗಿ, ಇಂತಹ ವರ್ತನೆಗಳು ಅಸಹಜ ಎನ್ನುವುದನ್ನು ಪಾಲಕರು ಮೊದಲು ಅರ್ಥೈಸಿಕೊಳ್ಳಬೇಕಿದೆ.
ಮೊಬೈಲ್ ಬಳಕೆ ಹೇಗಿದ್ದರೆ ಹಾನಿಯಿಲ್ಲ?: ಮೊದಲನೆಯದಾಗಿ, ಪಾಲಕರು ಮಕ್ಕಳಿಗೆ ನಿರ್ದಿಷ್ಟ ಸ್ಕ್ರೀನ್ ಟೈಮ್ ನಿಗದಿಪಡಿಸಬೇಕು. ಅದಕ್ಕಿಂತ ಹೊರತಾಗಿ, ಎಷ್ಟೇ ಗೋಳಾಡಿದರೂ, ಅತ್ತು-ಕರೆದರೂ ಮೊಬೈಲ್ ನೀಡಬಾರದು. ಸಾಧ್ಯವಾದಷ್ಟು ದೊಡ್ಡವರ ಮೊಬೈಲ್ ಮೂಲಕವೇ ಅವರ ಶಾಲೆ-ಕಾಲೇಜು, ಶಿಕ್ಷಣದ ಚಟುವಟಿಕೆಗಳನ್ನು ನಡೆಯುವಂತೆ ಮಾಡುವುದು ಉತ್ತಮ. ಒಂದೊಮ್ಮೆ ಸಾಧ್ಯವಿಲ್ಲ ಎಂದಾದರೆ, ಅವರು ಸ್ಮಾರ್ಟ್ ಫೋನ್‌ನಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎಂದು ಗಮನ ಇಡಲೇಬೇಕು. ಇದಕ್ಕೂ ತಂತ್ರಜ್ಞಾನದ ನೆರವು ಪಡೆದುಕೊಂಡು ಸಮಯ ನಿಗದಿ ಮಾಡಿಕೊಳ್ಳಬಹುದು.
ಸಿಗರೇಟ್-ಆಲ್ಕೋಹಾಲ್‌ಗಿಂತ ಕಡಿಮೆಯಲ್ಲ!: ಹದಿಹರೆಯದ ಮಕ್ಕಳು ಸಿಗರೇಟ್ ಸೇದುವುದನ್ನು ಗಂಭೀರವಾಗಿ ಪರಿಗಣಿಸಿ ಆತಂಕಕ್ಕೆ ಒಳಗಾಗುವ ಪಾಲಕರು, ಅವರು ಹೆಚ್ಚು ಸ್ಮಾರ್ಟ್ ಫೋನ್ ಬಳಸುತ್ತಿದ್ದರೆ ಅಷ್ಟಾಗಿ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಆದರೆ, ಮನಃಶಾಸ್ತ್ರಜ್ಞರ ಪ್ರಕಾರ, ಮೊಬೈಲ್ ಗೀಳು ಸಹ ಸಿಗರೇಟ್, ಆಲ್ಕೋಹಾಲ್‌ನಷ್ಟೇ ವ್ಯಸನಕಾರಿ. ಮನಸ್ಸಿಗೆ ಅಷ್ಟೇ ಪ್ರಮಾಣದ ರೋಮಾಂಚನ, ಉತ್ತೇಜನವನ್ನು ಮೊಬೈಲ್ ನೀಡುತ್ತದೆ. ಹೀಗಾಗಿ, ಅದು ಚಟವಾಗಿ ಬೆಳೆಯದಂತೆ ಮಾಡುವುದು ಪಾಲಕರ ಕೈಯಲ್ಲೇ ಇದೆ.
(ಲೇಖಕರು ಪತ್ರಕರ್ತರು, ಹವ್ಯಾಸಿ ಬರಹಗಾರರು)