ಉತ್ತರ ಕನ್ನಡ ಜಿಲ್ಲೆಯ ಅರಬೀ ಸಮುದ್ರದ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಗೋಕರ್ಣ ತನ್ನ ಸುಂದರ ಕಡಲ ತೀರಗಳು, ಪ್ರಾಚೀನ ದೇವಾಲಯಗಳು, ಪ್ರವಾಸಿ ತಾಣಗಳಿಂದ ಪ್ರಸಿದ್ಧವಾಗಿದ್ದರೂ ಅಗತ್ಯ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಪಟ್ಟಣವಾಗಿದೆ.
ಜಿಲ್ಲೆಯಲ್ಲಿ ಅತಿ ದೊಡ್ಡ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆ ಹೊಂದಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ. ಒಂದು ಮಳೆ ಬಂತೆಂದರೆ ಚರಂಡಿ ನೀರೆಲ್ಲ ರಸ್ತೆಯ ಮೇಲೆ ಹರಿದು ವಾಹನಗಳು ಸಂಚರಿಸದಷ್ಟು ಅವ್ಯವಸ್ಥೆ, ಗಲೀಜು ಕೊಂಪೆಯಾಗಿ ಮಾರ್ಪಡುತ್ತದೆ. ತ್ಯಾಜ್ಯ ವಿಲೇವಾರಿ ಕೂಡ ಮಾಡುತ್ತಿಲ್ಲ.
ಇಲ್ಲೊಂದು ಗ್ರಾಮ ಪಂಚಾಯತಿ ಇದ್ದರೂ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿಸುವಲ್ಲಿ ವಿಫಲವಾಗಿದೆ. ಧಾರ್ಮಿಕ, ಸಾಂಸ್ಕೃತಿಕ, ಪರಿಸರ ಪ್ರವಾಸೋದ್ಯಮಕ್ಕೆ ಪ್ರಾಮುಖ್ಯತೆ ಪಡೆದಿರುವ ಗೋಕರ್ಣದಲ್ಲಿ ಪ್ರವಾಸಿಗರು ಲಗ್ಗೆ ಇಡುತ್ತಿದ್ದು, ಪರದಾಡುವಂತಾಗಿದೆ.
ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ ಪಾತ್ರ ಮಹತ್ವದ್ದು. ಆದರೆ ಇಲ್ಲಿಯ ಪಂಚಾಯ್ತಿಯಲ್ಲಿ ಯಾವುದೇ ಕೆಲಸ ಆಗುತ್ತಿಲ್ಲವಂತೆ. ಪಂಚಾಯ್ತಿಯ ನಿಷ್ಟ್ರೀಯತಿಯಿಂದ ಗೋಕರ್ಣದಲ್ಲಿ ಎಲ್ಲೆಂದರಲ್ಲಿ ಕಸ, ಕಡ್ಡಿ ತ್ಯಾಜ್ಯಗಳು ವಿಲೇವಾರಿಯಾಗದೆ ಬಿದ್ದಿದೆ.
ಈ ಕುರಿತಂತೆ ಇಲ್ಲಿಯ ಜನರು ಮತ್ತು ಜನಪ್ರತಿನಿಧಿಗಳನ್ನು ಪ್ರಶ್ನಿಸಿದರೆ, ಪ್ರತಿ ದಿನ ಇಲ್ಲಿಗೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾದ ಪಂಚಾಯತಿಯಲ್ಲಿ ಖಾಯಂ ಪಿಡಿಓ ಇಲ್ಲ. ಹೀಗಿರುವಾಗ ಯಾರಿಗೆ ಹೇಳಬೇಕು.
ಇನ್ ಚಾರ್ಜ ಪಿಡಿಓ ವಾರಕ್ಕೆ ಮೂರು ದಿನ ಬಂದು ಹೋಗುತ್ತಾರೆ. ಜನರ ಕೆಲಸ ಮಾಡುವಷ್ಟರಲ್ಲೆ ಮೂರು ದಿನ ಕಳೆದು ಹೋಗುತ್ತದೆ. ಹೀಗಿರುವಾಗ ಅಭಿವೃದ್ಧಿ ಕೆಲಸಗಳಿಗೆ ಗಮನ ಕೊಡಲು ಆಗುವುದಿಲ್ಲ. ಈ ಹಿನ್ನಲೆಯಲ್ಲಿ ಖಾಯಂ ಪಿಡಿಓ ಒಬ್ಬರನ್ನು ನೇಮಿಸುವಂತೆ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಈ ಅವ್ಯವಸ್ಥೆಗಳನ್ನೆಲ್ಲ ಕಣ್ಣಾರೆ ಕಂಡು ಕಾಣದಂತಿರುವ ಜನಪ್ರತಿನಿಧಿಗಳ ನಡೆಯ ಕುರಿತು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಪಂಚಾಯ್ತಿ ಆಡಳಿತ ನಿಯಂತ್ರಿಸಲು ಖಾಯಂ ಪಿಡಿಓ ನೇಮಕ ಮಾಡಲಾರದಷ್ಟು ಅಸಹಾಯಕರಾಗಿದ್ದಾರೆಯೇ ಇಲ್ಲಿಯ ಜನಪ್ರತಿನಿಧಿಗಳು ಎಂದು ಜನ ಪ್ರಶ್ನಿಸುತ್ತಿದ್ದು, ಕೂಡಲೇ ಖಾಯಂ ಪಿಡಿಓ ನೇಮಕ ಮಾಡುವಂತೆ ಆಗ್ರಹಿಸಿದ್ದಾರೆ.