ಹುಬ್ಬಳ್ಳಿ: ಕೇಂದ್ರ ಸರಕಾರ ತಾನೇ ಜಿಎಸ್‌ಟಿ ಹೆಚ್ಚು ಮಾಡಿ, ಈಗ ತಾನೇ ಜಿಎಸ್‌ಟಿ ಕಡಿಮೆ ಮಾಡಿದೆ. ಕಡಿಮೆ ಮಾಡಿದ್ದನ್ನೇ ದೇಶದ ಜನರಿಗೆ ದೊಡ್ಡ ಕೊಡುಗೆ ಕೊಟ್ಟಿರುವ ರೀತಿ ಉತ್ಸವ ಮಾಡುತ್ತಿರುವ ಬಿಜೆಪಿಗೆ ನಾಚಿಕೆಯಾಗಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಚ್ಚಾವಸ್ತುಗಳ ಮೇಲೆ ಜಿಎಸ್‌ಟಿ ಹೆಚ್ಚಿದೆ. ಇದನ್ನು ಪೂರ್ತಿಯಾಗಿ ಜನರ ಮುಂದೆ ಇಡಬೇಕಿದೆ. ಬಿಹಾರ ಚುನಾವಣೆಗಾಗಿ ಇಂತಹ ಗಿಮಿಕ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಭಿವೃದ್ಧಿ ವಿಷಯ ಇಲ್ಲದೇ ವಿಶ್ವಗುರು ಆದವರು ಮನೆ ಮನೆಗೆ ಹೋಗಿ ಮತ ಕೇಳುತ್ತಿದ್ದಾರೆ. ಅಭಿವೃದ್ಧಿ ಮಾಡಿದ್ದರೆ ಇದರ ಅವಶ್ಯಕತೆ ಇತ್ತಾ?. ಕಾಂಗ್ರೆಸ್ ಸರಕಾರ ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ಟೀಕೆ ಮಾಡಿದ್ದರು. ಗ್ಯಾರಂಟಿಯಿಂದ ರಾಜ್ಯದ ಬೊಕ್ಕಸ ಖಾಲಿಯಾಗುತ್ತದೆ ಎಂದು ಟೀಕಿಸಿದ್ದರು. ಆದರೆ, ಬಿಹಾರ ಚುನಾವಣೆಯಲ್ಲಿ ಮತ ಸೆಳೆಯಲು 7.5 ಸಾವಿರ ಕೋಟಿ ಮಹಿಳೆಯರಿಗೆ ಉಚಿತ ಕೊಡುತ್ತಿದ್ದಾರೆ. ಇದ್ಯಾವ ಧರ್ಮ ಎಂದು ಪ್ರಶ್ನಿಸಿದರು? ಇದೆಲ್ಲ ಚುನಾವಣೆಯಲ್ಲಿ ಮತ ಸೆಳೆಯಲು ಹಾಗೂ ರಾಹುಲ್ ಗಾಂಧಿ ಅವರು ಪ್ರಸ್ತಾಪ ಮಾಡಿರುವ ಮತಗಳ್ಳತನ ಮುಚ್ಚಿ ಹಾಕುವ ತಂತ್ರವಾಗಿದೆ ಎಂದು ಲಾಡ್ ಆರೋಪಿಸಿದರು.
ಕರ್ನಾಟಕ ತಲಾ ಆದಾಯದಲ್ಲಿ ವಾರ್ಷಿಕ 2 ಲಕ್ಷ ಇದೆ. ಬಿಹಾರದ ತಲಾ ಆದಾಯ 43 ಸಾವಿರ ಆಗಿದೆ. ಪಹಲ್ಗಾಮ್ ಘಟನೆ ನಡೆದು ಮೂರು ತಿಂಗಳು ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಾಕ್ ಜೊತೆ ಕ್ರಿಕೆಟ್ ಮ್ಯಾಚ್ ಆಡಿಸುವ ಅವಶ್ಯಕತೆ ಏನಿತ್ತು? ಬಿಜೆಪಿಯವರು ಪಾಕಿಸ್ತಾನದವರ ಜೊತೆ ಕುಳಿತು ಕ್ರಿಕೆಟ್ ಆಡುತ್ತಾರೆ. ಬಿಜೆಪಿ ಅವರ ಆಡಳಿತದಲ್ಲಿ ಏನು ಬೇಕಾದರು ಮಾಡಬಹುದು ಎನ್ನುವಂತಾಗಿದೆ. ದೇಶದ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.