ಕ್ರಿಕೆಟ್ ಜಗತ್ತಿನಲ್ಲಿ ಗುರು-ಶಿಷ್ಯರ ಬಾಂಧವ್ಯ ಯಾವಾಗಲೂ ವಿಶೇಷ. ಯುವರಾಜ್ ಸಿಂಗ್ ಮತ್ತು ಅಭಿಷೇಕ್ ಶರ್ಮಾ ನಡುವಿನ ಈ ಬಾಂಧವ್ಯ ಈಗ ಮನೆಮಾತಾಗಿದೆ. ಐಪಿಎಲ್‌ನಲ್ಲಿ ಸ್ಥಾನ ಪಡೆಯಲು ಹೆಣಗಾಡುತ್ತಿದ್ದ ಅಭಿಷೇಕ್ ಶರ್ಮಾ ಇಂದು ಭಾರತ ತಂಡದ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿರುವುದರ ಹಿಂದೆ ಯುವಿ ಪರಿಶ್ರಮ ಅಡಗಿದೆ. ಈ ಬಗ್ಗೆ ಅಭಿಷೇಕ್ ಶರ್ಮಾ ಅವರೇ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಕರೋನಾ ಲಾಕ್‌ಡೌನ್ ಸಮಯದಲ್ಲಿ, ಯುವರಾಜ್ ಸಿಂಗ್ ತಮ್ಮ ಮನೆಯನ್ನೇ ಕ್ರಿಕೆಟ್ ಅಕಾಡೆಮಿಯನ್ನಾಗಿ ಮಾಡಿಕೊಂಡಿದ್ದರು. ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಪ್ರಭಸಿಮ್ರನ್ ಸಿಂಗ್ ಮತ್ತು ಅನ್ಮೋಲ್‌ಪ್ರೀತ್ ಸಿಂಗ್ ಅವರಂತಹ ಯುವ ಪ್ರತಿಭೆಗಳಿಗೆ ಯುವಿ ತರಬೇತಿ ನೀಡಿದರು. “ನಾನು ಆ ಸಮಯದಲ್ಲಿ ಬಹಳ ಕಷ್ಟಪಡುತ್ತಿದ್ದೆ ಮತ್ತು ತರಬೇತಿಯ ಅವಶ್ಯಕತೆ ಇತ್ತು. ಯುವಿ ಪಾಜಿ ತಕ್ಷಣವೇ ನನ್ನ ಕೋರಿಕೆಯನ್ನು ಒಪ್ಪಿಕೊಂಡರು. ಆ ಕ್ಯಾಂಪ್‌ಗಳು ನನಗೆ ನಿಜವಾಗಿಯೂ ಸಹಾಯಕವಾದವು” ಎಂದು ಅಭಿಷೇಕ್ ಹೇಳುತ್ತಾರೆ.
ಯುವಿ ಭವಿಷ್ಯವಾಣಿ: ಹಿಂದಿನ ದಿನಗಳ ಬಗ್ಗೆ ಮಾತನಾಡುತ್ತಾ, ಅಭಿಷೇಕ್ ಒಂದು ಪ್ರಮುಖ ಘಟನೆಯನ್ನು ನೆನಪಿಸಿಕೊಂಡರು. “ಒಂದು ದಿನ ಊಟ ಮಾಡುವಾಗ ಯುವಿ ಪಾಜಿ ನನ್ನನ್ನು ಕರೆದು ಹೇಳಿದರು, ‘ನಾನು ನಿನ್ನನ್ನು ರಾಜ್ಯ ತಂಡಕ್ಕಾಗಲಿ, ಐಪಿಎಲ್ ತಂಡಕ್ಕಾಗಲಿ ಅಥವಾ ಭಾರತಕ್ಕಾಗಿ ಕ್ಯಾಪ್ ಪಡೆಯಲು ಸಿದ್ಧಪಡಿಸುತ್ತಿಲ್ಲ. ನಾನು ನಿನ್ನನ್ನು ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲಲು ಸಿದ್ಧಪಡಿಸುತ್ತಿದ್ದೇನೆ. ಇದನ್ನು ಬರೆದಿಟ್ಟುಕೋ. ಇದು ಮುಂದಿನ ಎರಡು-ಮೂರು ವರ್ಷಗಳಲ್ಲಿ ನಡೆಯುತ್ತದೆ.’ ಆ ಕ್ಷಣ ನನ್ನ ಗುರಿ ಸಂಪೂರ್ಣವಾಗಿ ಬದಲಾಯಿತು” ಎಂದು ಅಭಿಷೇಕ್ ಹೇಳಿದರು.
ತಂತ್ರ ಮತ್ತು ಆತ್ಮವಿಶ್ವಾಸ: ಯುವರಾಜ್ ಸಿಂಗ್ ತಮ್ಮ ಆಟಗಾರರ ಬ್ಯಾಟಿಂಗ್ ವೀಡಿಯೊಗಳನ್ನು ವಿಶ್ಲೇಷಿಸಿ, ತಂತ್ರಗಳನ್ನು ಸುಧಾರಿಸಲು ಸಹಾಯ ಮಾಡಿದರು. ಪವರ್ ಹಿಟ್ಟಿಂಗ್ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿಯೂ ಗಮನಹರಿಸಿದರು. ಯುವಿ ಈ ವೈಯಕ್ತಿಕ ಮಾರ್ಗದರ್ಶನ ಅಭಿಷೇಕ್ ಆಟದಲ್ಲಿ ಮಹತ್ವದ ಬದಲಾವಣೆ ತಂದಿತು. ಅದು ಅಭಿಗೆ ಆತ್ಮವಿಶ್ವಾಸದಿಂದ ಆಡಲು ನೆರವಾಯಿತು.
ಏಷ್ಯಾ ಕಪ್‌ನಲ್ಲಿ ಮಿಂಚು: ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿದ ಅಭಿಷೇಕ್ ಶರ್ಮಾ, ಇತ್ತೀಚೆಗೆ ನಡೆದ ಏಷ್ಯಾ ಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಮ್ಯಾಚ್ ವಿನ್ನಿಂಗ್ ಪ್ರದರ್ಶನಗಳು ಯುವಿ ಭವಿಷ್ಯವಾಣಿಯನ್ನು ನಿಜವಾಗಿಸಿದೆ. ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಅವರಂತಹ ಯುವ ಆಟಗಾರರು ಯುವರಾಜ್ ಸಿಂಗ್ ಮಾರ್ಗದರ್ಶನದಲ್ಲಿ ಭಾರತೀಯ ಕ್ರಿಕೆಟ್‌ನ ಭವಿಷ್ಯವನ್ನು ರೂಪಿಸುತ್ತಿದ್ದಾರೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.