ದಸರಾ-2025ಕ್ಕೆ ಕನ್ನಡಿಗರಿಗೆ ಬಂಪರ್ ಕೊಡುಗೆ ಸಿಕ್ಕಿದೆ. Kantara: Chapter 1 ಚಿತ್ರ ತೆರೆಗೆ ಬಂದಿದೆ. ಬಹು ನಿರೀಕ್ಷಿತ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದೆ. ಮೊದಲ ದಿನವೇ ಸುಮಾರು 55 ಕೋಟಿ ಕಲೆಕ್ಷನ್ ಮಾಡಿದೆ. ರಿಷಬ್ ಶೆಟ್ಟಿ ನಿರ್ದೇಶನ, ನಟನೆಗೆ ಜನರು ಬಹುಪರಾಕ್ ಹೇಳುತ್ತಿದ್ದಾರೆ.
‘ಕಾಂತಾರಾ’ ಚಿತ್ರದಲ್ಲಿ ನಾಯಕಿಯಾಗಿದ್ದು ಸಪ್ತಮಿ ಗೌಡ. ಆದರೆ Kantara: Chapter 1 ನಲ್ಲಿ ರುಕ್ಮಿಣಿ ವಸಂತ್ ನಾಯಕಿ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ‘ಪುಟ್ಟಿ’ ಕಾಂತಾರಾ ಚಾಪ್ಟರ್-1 ಚಿತ್ರದಲ್ಲಿ ‘ಕನಕವತಿ’ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ರುಕ್ಮಿಣಿ ಹೊಸ ನ್ಯಾಷನಲ್ ಕ್ರಶ್ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ನಟನೆ, ಸೌಂದರ್ಯದ ಮೂಲಕ ಕನ್ನಡಿಗರ ಮನೆ, ಮನಕ್ಕೆ ಮತ್ತೆ ಲಗ್ಗೆ ಇಟ್ಟಿರುವ ಕನ್ನಡಿಗರ ಪಾಲಿನ ‘ಪುಟ್ಟಿ’ ಕಾಂತಾರಾ ಚಿತ್ರದ ಕುರಿತು ಪೋಸ್ಟ್ ಒಂದನ್ನು ಹಾಕಿದ್ದಾರೆ. ‘ಕನಕವತಿ’ ಚಿತ್ರದ ಕುರಿತು ಹಾಕಿರುವ ಭಾವನಾತ್ಮಕ ಪೋಸ್ಟ್ ಈಗ ವೈರಲ್ ಆಗುತ್ತಿದೆ.
ಕನಕವತಿ ಪೋಸ್ಟ್: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ತಂಡವನ್ನು ಸೇರಿ ಒಂದು ವರ್ಷ ಕಳೆದ ಸಂಭ್ರಮದಲ್ಲಿ, ನಾಯಕಿ ರುಕ್ಮಿಣಿ ವಸಂತ್ ತಮ್ಮ ಅನುಭವಗಳನ್ನು ಹಂಚಿಕೊಂಡು ಹೃತ್ಪೂರ್ವಕ ಪತ್ರವೊಂದನ್ನು ಬರೆದು ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಂಡಿದ್ದಾರೆ . ಈ ಚಿತ್ರತಂಡದ ಭಾಗವಾಗಿದ್ದು ತಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿದೆ ಎಂದಿದ್ದಾರೆ.
“ಒಂದು ವರ್ಷದ ಹಿಂದೆ, ಕನ್ನಡದ ಹೆಮ್ಮೆ ಎನಿಸಿರೋ, ಕಾಂತಾರ ಚಾಪ್ಟರ್ 1 ತಂಡ ಸೇರೋ ಅವಕಾಶ ನಂಗೆ ಸಿಕ್ಕಿತು. ಈ ಚಿತ್ರದಲ್ಲಿ ಕೆಲಸ ಮಾಡೋದು ಒಂದು ದೊಡ್ಡ ಜವಾಬ್ದಾರಿಯೂ ಹೌದು, ಸಾಹಸವೂ ಹೌದು. ಈ ಚಿತ್ರ ನನ್ನ ಜೀವನವನ್ನೇ ಬದಲಾಯಿಸಿದೆ, ನಾನು ತುಂಬಾ ಕಲಿತಿದ್ದೀನಿ ಮತ್ತು ಅದಕ್ಕಾಗಿ ನಾನು ಬಹಳ ಕೃತಜ್ಞಳಾಗಿದ್ದೇನೆ” ಎಂದು ರುಕ್ಮಿಣಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ನಿರ್ದೇಶಕ ರಿಷಬ್ ಶೆಟ್ಟಿಗೆ ವಿಶೇಷ ಧನ್ಯವಾದ ಅರ್ಪಿಸಿರುವ ನಾಯಕಿ, “ನಮ್ಮ ತಂಡದ ನಾಯಕರೂ, ನಿರ್ದೇಶಕರೂ ಆದ ರಿಷಬ್ ಸರ್ಗೆ ತುಂಬಾ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಕಠಿಣ ಪರಿಶ್ರಮ, ದಯೆ ಮತ್ತು ಛಲ ಈ ಚಿತ್ರವನ್ನು ತುಂಬಾ ವಿಶೇಷವಾಗಿಸಿದೆ. ನನ್ನನ್ನು ನಂಬಿದ್ದಕ್ಕೆ ಮತ್ತು ನಾನು ಬೆಳೆಯಲು ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು” ಎಂದಿದ್ದಾರೆ.
ಹೊಂಬಾಳೆ ಫಿಲ್ಮ್ಸ್, ನಿರ್ಮಾಪಕರಾದ ವಿಜಯ್ ಸರ್, ಚಲುವೆ ಸರ್, ಆದರ್ಶ್ ಮತ್ತು ತೆರೆಮರೆಯಲ್ಲಿ ದುಡಿದ ಎಲ್ಲರಿಗೂ ರುಕ್ಮಿಣಿ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, “ನಮ್ಮ ಸೂಪರ್ ಕೂಲ್ ಕ್ಯಾಮೆರಮ್ಯಾನ್ ಅರವಿಂದ್ ಮತ್ತು ಬೆಸ್ಟ್ ಆಫ್ ದಿ ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್ ಪ್ರಗತಿ. ನೀವು ನನಗೆ ಸಂಪೂರ್ಣ ಹೊಸ ಲುಕ್ ಕೊಟ್ಟಿದ್ದೀರಿ ಮತ್ತು ನಾನು ಸುಂದರವಾಗಿ ಕಾಣ್ತದ್ದೀನಿ ಅಂತ ಕಾಂಪ್ಲಿಮೆಂಟ್ಸ್ ಬರ್ತಿದ್ರೆ, ಅದಕ್ಕೆ ಪ್ರಮುಖ ಕಾರಣ ನೀವೇ ನಿಮಗೆ ವಿಶೇಷವಾದ ಧನ್ಯವಾದಗಳು” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಂತಾರದ ಅದ್ಭುತ ಲೋಕವನ್ನು ಸೃಷ್ಟಿಸಿದ ಕಲಾ ನಿರ್ದೇಶಕ ಬಾಂಗ್ಲಾನ್, ರೋಮಾಂಚಕ ಸಂಗೀತ ನೀಡಿದ ಅಜನೀಶ್ ಲೋಕನಾಥ್, ನೃತ್ಯ ನಿರ್ದೇಶಕ ಭೂಷಣ್ ಮಾಸ್ಟರ್, ಫೈಟ್ ಮಾಸ್ಟರ್ಸ್ ಜೂಜಿ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್‌ಗೂ ರುಕ್ಮಿಣಿ ಧನ್ಯವಾದ ಹೇಳಿದ್ದಾರೆ. ನಿರ್ದೇಶನ ತಂಡ, ಮೇಕಪ್ ಮತ್ತು ಹೇರ್ ಡ್ರೆಸ್ಸರ್‌ಗಳು ಹಾಗೂ ಶುಚಿರುಚಿಯಾದ ಆಹಾರ ನೀಡಿದ ಕೇಟರಿಂಗ್ ತಂಡದ ಸಹಕಾರವನ್ನೂ ಸ್ಮರಿಸಿದ್ದಾರೆ.
ಕನ್ನಡ ಚಲನಚಿತ್ರ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿರುವ ರುಕ್ಮಿಣಿ, “ನೀವು ನಾನು ಸಿಕ್ಕಾಗೆಲ್ಲ, ‘ಕನ್ನಡ ಫಿಲಂ ಯಾವಾಗ?’ ಅಂತ ಕೇಳ್ತಾ ಇದ್ರಿ! ಇಲ್ಲಿದೆ ಉತ್ತರ! ಅಕ್ಟೋಬರ್ 2ರಂದು ಚಿತ್ರಮಂದಿರದಲ್ಲಿ ನಿಮ್ಮನ್ನು ನೋಡಲು ಕಾಯ್ತಾ ಇರ್ತೀನಿ!” ಎಂದು ತಿಳಿಸಿದ್ದಾರೆ.