ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ವಕ್ತಾರರೊಬ್ಬರು “ಎದೆಗೆ ಗುಂಡು ಹೊಡೆಯುತ್ತೇವೆ” ಎಂದು ಬಹಿರಂಗವಾಗಿ ಬೆದರಿಕೆ ಹಾಕಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯು ದೇಶದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಒಬ್ಬಂಟಿಯಲ್ಲ, ಬೆಂಬಲಕ್ಕೆ ಕೋಟ್ಯಂತರ ಕಾರ್ಯಕರ್ತರಿದ್ದಾರೆ. ಇಂತಹ ಕೊಲೆಗಡುಕರಿಂದಲೇ ರಾಹುಲ್ ತಮ್ಮ ಅಜ್ಜಿ ಮತ್ತು ತಂದೆಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿರುವ ರಾಹುಲ್ ಗಾಂಧಿಗೆ ಇಂತಹ ಬೆದರಿಕೆ ಹಾಕಿರುವುದು ಖಂಡನೀಯ. ಈ ಹೇಳಿಕೆಯ ಬಗ್ಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮೌನವು ಹೇಳಿಕೆಗೆ ಸಮ್ಮತಿಯಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ ಎಂದು ಸಿದ್ದರಾಮಯ್ಯ ದೂರಿದರು.
ಸೈದ್ಧಾಂತಿಕ ವಿರೋಧಿಗಳ ಧ್ವನಿಯನ್ನು ಅಡಗಿಸಲು ಬೆದರಿಕೆ ಹಾಕುವುದು ಮತ್ತು ಅವರನ್ನು ಇಲ್ಲವಾಗಿಸುವುದು ಬಿಜೆಪಿ ಮತ್ತು ಸಂಘಪರಿವಾರಕ್ಕೆ ಹೊಸತಲ್ಲ. ಮೊದಲೆಲ್ಲಾ ತೆರೆಮರೆಯಲ್ಲಿ ನಿಂತು ಹತ್ಯೆಗಳಿಗೆ ಬೆಂಬಲ ನೀಡುತ್ತಾ ಬಂದವರು, ಈಗ ನೇರವಾಗಿಯೇ ಅಖಾಡಕ್ಕೆ ಇಳಿದಿದ್ದಾರೆ.
ಎದುರಾಳಿಗಳನ್ನು ಸಂವಾದ ಮತ್ತು ಚರ್ಚೆಗಳ ಮೂಲಕ ಎದುರಿಸಲಾಗದವರು ದೈಹಿಕವಾಗಿ ಮುಗಿಸಲು ಹೊರಟಿರುವುದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಮಹಾತ್ಮ ಗಾಂಧಿಯವರಿಂದ ಆರಂಭಗೊಂಡು ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅವರಂತಹ ಅನೇಕ ಜೀವಗಳು ಸಂಘಪರಿವಾರದ ದುರುಳರಿಂದ ಬಲಿಯಾಗಿವೆ. ಇವರೆಲ್ಲರ ಕೊಲೆಗಾರರಿಗೂ ತಮಗೂ ಸಂಬಂಧವಿಲ್ಲವೆಂದು ಸಂಘಪರಿವಾರದ ನಾಯಕರು ಹೇಳಿದರೂ, ಕೈಗಳಿಗಂಟಿದ ರಕ್ತದ ಕಲೆಗಳನ್ನು ತೊಳೆಯಲಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಈ ಹಿಂದೆ ತಮಗೂ ಸಹ ಅನೇಕ ಸಾಹಿತಿಗಳು, ಚಿಂತಕರು ಮತ್ತು ಹೋರಾಟಗಾರರಿಗೆ ಕೊಲೆ ಬೆದರಿಕೆ ಪತ್ರಗಳನ್ನು ಬರೆಯಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂತಹ ಬೆದರಿಕೆಗಳಿಗೆ ಹೆದರಿ ತಾವು ನಂಬಿದ ಸಿದ್ಧಾಂತಕ್ಕೆ ಬೆನ್ನುಹಾಕುವ ಜಾಯಮಾನ ತಮ್ಮದಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಒಂದಲ್ಲಾ ಒಂದು ದಿನ ನ್ಯಾಯದ ಎದುರು ಈ ಎಲ್ಲಾ ದುಷ್ಟರು ಮಂಡಿಯೂರುತ್ತಾರೆಂಬ ಭರವಸೆ ತಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜಕೀಯದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಹಜ. ಆದರೆ, ದೈಹಿಕ ಬೆದರಿಕೆಗಳು ಮತ್ತು ಹಿಂಸೆಗೆ ಆಸ್ಪದ ನೀಡುವುದು ಪ್ರಜಾಪ್ರಭುತ್ವಕ್ಕೆ ಮಾರಕ. ರಾಜಕೀಯ ನಾಯಕರು ತಮ್ಮ ಹೇಳಿಕೆಗಳ ಬಗ್ಗೆ ಜವಾಬ್ದಾರಿಯುತವಾಗಿ ವರ್ತಿಸುವುದು ಅತ್ಯಗತ್ಯ ಎಂದರು.