ಅಮರಾವತಿ: ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಜಗತ್ತಿಗೇ ಎರಡನೆಯದಾದ ತಿರುಪತಿಯ ತಿರುಮಲ ದೇವಾಲಯದಲ್ಲಿ ವೇಂಕಟೇಶ್ವರ ಸ್ವಾಮಿಗೆ ನಿತ್ಯ ಸಂದಾಯವಾಗುವ ಕೋಟ್ಯಾಂತರ ರೂ. ಕಾಣಿಕೆ ಹಣವನ್ನು ಎಣಿಸುವಾಗ, ಪ್ರತಿದಿನವೂ ಸ್ವಲ್ಪ ಸ್ವಲ್ಪವೇ ಕದಿಯುವ ಮೂಲಕ ತಿಮ್ಮಪ್ಪನಿಗೇ 100 ಕೋಟಿ ರೂ. ಪಂಗನಾಮ ಹಾಕಿದ `ಕಳ್ಳ’ ನೌಕರನೊಬ್ಬನ ಪ್ರಕರಣವಿದು.
ತಿರುಮಲದಲ್ಲಿ ಪ್ರತಿದಿನ 4 ರಿಂದ 6 ಕೋಟಿ ರೂ.ವರೆಗೆ ಸಂಗ್ರಹವಾಗುವ ಹುಂಡಿ ಕಾಣಿಕೆ ಹಣ ಎಣಿಸುವ ವಿಭಾಗದಲ್ಲಿ ಗುಮಾಸ್ತನಾಗಿದ್ದ ಸಿ.ವಿ. ರವಿಕುಮಾರ್ ಈ ಪ್ರಕರಣದ ಕೇಂದ್ರ ಬಿಂದುವಾಗಿದ್ದಾನೆ.
1990 ರಲ್ಲಿ ಆಗ 20 ವರ್ಷದ ರವಿಕುಮಾರ್ ತಿರುಮಲದ ಪೆದ್ದ ಜೀಯನಗಾರು' ಮಠದಲ್ಲಿ ಕೆಲಸಕ್ಕೆ ಸೇರಿಕೊಂಡ. ಈ ಮಠವು ತಿಮ್ಮಪ್ಪನ ಪೂಜಾ ವಿಧಿ ವಿಧಾನಗಳ ಉಸ್ತುವಾರಿ ನೋಡಿಕೊಳ್ಳುತ್ತದೆ. 2023 ಏಪ್ರಿಲ್‌ವರೆಗೂ 54 ವರ್ಷದ ರವಿಕುಮಾರ್ ಎಂದಿನಂತೆ ಕಾಣಿಕೆ ಹಣ ಎಣಿಸುವ ಕೆಲಸಕ್ಕೆ ಬಂದುಹೋಗುತ್ತಿದ್ದ. ಆದರೆ ಏಪ್ರಿಲ್‌ನಲ್ಲಿ ಈತನ
ದುರಾದೃಷ್ಟ’ವೋ ಎಂಬಂತೆ ಒಂದು ದಿನ ಕಾಣಿಕೆ ಹಣ ಎಣಿಸುವ ಕೌಂಟರ್‌ನಲ್ಲಿ ರವಿಕುಮಾರ್ ಅಸಹಜ ಅಥವಾ ಅನುಮಾನಾಸ್ಪದಾಗಿ ವರ್ತಿಸುತ್ತಿದ್ದುದನ್ನು ಸಿಸಿ ಟಿವಿಯಲ್ಲಿ ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದ ಓರ್ವ ಭದ್ರತಾ ಸಿಬ್ಬಂದಿ ಕೈಗೆ ಕೊನೆಗೂ ಈತ ಸಿಕ್ಕಿಬಿದ್ದ.
ಹೇಗೆ ಕದಿಯುತ್ತಿದ್ದ ಎಂಬುದೇ ನಿಗೂಢ: ದಶಕಗಳಿಂದಲೂ ಈತ ನಿತ್ಯವೂ ಹಣ ಮತ್ತಿತರ ಅತ್ಯಮೂಲ್ಯ ಸಂಪತ್ತನ್ನು ಯಾರಿಗೂ ತಿಳಿಯದೆ ಹೇಗೆ ಕಳವು ಮಾಡುತ್ತಿದ್ದ ಎಂಬುದು ಮಾತ್ರ ನಿಗೂಢವಾಗಿದೆ. ಒಮ್ಮೆ ಮಾಲು ಸಮೇತ ಸಿಕ್ಕಿಬಿದ್ದರೂ ಏನೂ ಮಾಡಲಾಗಿರಲಿಲ್ಲ.