ಕಲಬುರಗಿ: ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಮಂಗಳವಾರ ತಾಲೂಕಿನ ಸಾವಳಗಿ ಕ್ರಾಸ್ ಹಾಗೂ ಆಳಂದ ತಾಲೂಕಿನ ಕಡಗಂಚಿ ಬಳಿ ಇತ್ತೀಚಿನ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಬೆಳೆ ಹಾನಿ ಪ್ರದೇಶ ವೀಕ್ಷಿಸಿದರು.
ಸಾವಳಗಿ ಕ್ರಾಸ್ ಬಳಿ ಸರ್ವೇ ನಂ.92/1 ರಲ್ಲಿನ ನಾಲ್ಕು ಎಕರೆಯಲ್ಲಿ ಸೋಮಶೇಖರ ಹಣಮಂತರಾವ ಬೆಳೆದ ತೊಗರಿ ಬೆಳೆ ಹಾನಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎನ್.ಚೆಲುವರಾಯಸ್ವಾಮಿ, ಕಳೆದ ಬಾರಿ ಸಹ ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ಕಾರಣಕ್ಕೆ ಸುಮಾರು 650 ಕೋಟಿ ರೂ. ಪರಿಹಾರ ಘೋಷಿಸಲಾಗಿತ್ತು. ಈ ವರ್ಷ ಸಹ ಮತ್ತೆ ಮಳೆಯಿಂದ ಬೆಳೆ ಹಾನಿಯಾಗಿದ್ದು, ಬೆಳೆ ವಿಮೆ ಪರಿಹಾರದ ಜೊತೆಗೆ ಸರ್ಕಾರದಿಂದ ಪರಿಹಾರ ಬಿಡುಗಡೆ ಕುರಿತು ಸಿ.ಎಂ.ಘೋಷಣೆ ಮಾಡಲಿದ್ದಾರೆ ಎಂದರು.
ಕಲಬುರಗಿ ಸೇರಿದಂತೆ ಯಾದಗಿರಿ, ಬೀದರ, ವಿಜಯಪುರ ಜಿಲ್ಲೆಯಲ್ಲಿನ ಹೆಚ್ಚು ಬೆಳೆ ಹಾನಿಯಾಗಿದೆ. ಇದಲ್ಲದೆ ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಯಲ್ಲೂ ಸಹ ಬೆಳೆ ಹಾನಿಯಾಗಿದ್ದು, ಮುಖ್ಯಮಂತ್ರಿ ಇಂದು ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಬಳಿಕ ತೀವ್ರ ಹಾನಿಗೊಳಗಾದ ನಾಲ್ಕು ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಬೆಳೆ ಹಾನಿ ಕುರಿತು ಸಭೆ ನಡೆಸಿ ಸೂಕ್ತ ಘೋಷಣೆ ಜೊತೆಗೆ ಎನ್.ಡಿ.ಆರ್.ಎಫ್ ನಲ್ಲಿಯೂ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದು ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷೆ ಸಿದ್ರಾಮಪ್ಪ ಧಂಗಾಪೂರ ರೈತರ ವಿವಿಧ ಬೇಡಿಕೆಯ ಕುರಿತು ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರ ಈಗಾಗಲೆ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ರೈತರ ಕಲ್ಯಾಣಕ್ಕಾಗಿ ಬೆಳೆ ಸಾಲ ಮನ್ನಾ ಮಾಡುವ ಆರನೇ ಗ್ಯಾರಂಟಿ ಘೋಷಿಸಬೇಕು ಎಂದು ಮನವಿ ಮಾಡಿದರು.
ಬಳಿಕ ಸಚಿವರು ಕಡಗಂಚಿಯಲ್ಲಿ ಸರ್ವೆ ನಂ.135/2 ರಲ್ಲಿ ರೈತ ಶಿವರಾಜ ಕುಡಕಿ ನಾಲ್ಕು ಎಕರೆಯಲ್ಲಿ ಬೆಳೆದ ತೊಗರಿ ಬೆಳೆ ಸಂಪೂರ್ಣ ಹಾನಿಯಸಗಿ ಹೊಲದಲ್ಲಿ ನೀರು ನಿಂತಿರುವುದನ್ನು ವೀಕ್ಷಿಸಿದರು.
ಸರಡಗಿ ಬಿ.ಯಲ್ಲಿಯೂ ವೀಕ್ಷಣೆ: ಸರಡಗಿ ಬ್ಯಾರೇಜ್ ಹಿನ್ನೀರಿನಿಂದ ತೀವ್ರ ಹೊಡೆತಕ್ಕೆ ಒಳಗಾದ ಸರಡಗಿ ಬಿ. ಗ್ರಾಮದ ಸರ್ವೇ ನಂ.139/7 ಮತ್ತು 139/9 ರಲ್ಲಿ ಪ್ರಜ್ವಲ ರವೀಂದ್ರರ 3.26 ಎಕರೆ, ಸರ್ವೆ ನಂ.139/6 ರಲ್ಲಿ ಅಬ್ಬಾಸಲಿ ಲಾಲ್ ಅಹ್ಮದರ ನಾಲ್ಕು ಎಕರೆ ಹಾಗೂ ಸರ್ವೆ ನಂ. 139/5 ರಲ್ಲಿ ಯೂನುಸ್ ಹಸನ್ ಸಾಬ್ 2 ಎಕರೆಯಲ್ಲಿ ಬೆಳೆದ ತೊಗರಿ, ಸರ್ವೆ ನಂ.140/5 ಮತ್ತು 140/2 ರಲ್ಲಿ ರೈತ ಮಹಿಳೆ ಮಹಾದೆವಿ ಸಾಯಬಣ್ಣಗೆ ಸೇರಿದ 3.37 ಎಕರೆಯಲ್ಲಿ ಬೆಳೆದ ಹತ್ತಿ ಬೆಳೆ ಹಾನಿಯನ್ನು ಸಚಿವ ಎನ್.ಚೆಲುವರಾಯಸ್ವಾಮಿ ವೀಕ್ಷಿಸಿದರು.
ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್, ಉಪನಿರ್ದೇಶಕ ಸೋಮಶೇಖರ ಬಿರಾದರ, ಆಳಂದ ತಹಶೀಲ್ದಾರ ಅಣ್ಣಾರಾಯ ಪಾಟಿಲ, ಕೃಷಿ ಸಹಾಯಕ ನಿರ್ದೇಶಕ ಡಾ.ಅರುಣ ಮೂಲಿಮನಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಚ ಸಿದ್ರಾಮಪ್ಪ ಪಾಟೀಲ್ ಮೊದಲಾದವರು ಇದ್ದರು.