ಸಂಪಾದಕೀಯ: ಮಹಾರಾಷ್ಟ್ರದ ಅತಿಯಾಸೆ ಕರ್ನಾಟಕಕ್ಕೆ ಗತಿಗೇಡು

0
42

ಮಹಾರಾಷ್ಟ್ರಕ್ಕೆ ಪಶ್ಚಿಮಘಟ್ಟದಲ್ಲಿ ಹುಟ್ಟುವ ಎಲ್ಲ ನದಿಗಳ ಒಂದೊಂದು ಹನಿ ನೀರನ್ನೂ ತಾನೇ ಬಳಸಿಕೊಳ್ಳುವ ಅತಿಯಾಸೆ. ಆದರೆ ನದಿ ನಿಲ್ಲುವುದಿಲ್ಲ. ಹರಿದು ಹೋಗುವುದೇ ಅದರ ಸ್ವಭಾವ. ಮಹಾರಾಷ್ಟ್ರದಲ್ಲಿ ಕೃಷ್ಣಾ ಮತ್ತು ಭೀಮಾ ಎರಡೂ ಪ್ರಮುಖ ನದಿಗಳು ಆರಂಭಗೊಂಡು ಕರ್ನಾಟಕದ ಮೂಲಕ ಆಂಧ್ರ, ತೆಲಂಗಾಣ ಸೇರಿ ಸಮುದ್ರ ತಲುಪುತ್ತದೆ.

ಬಚಾವತ್ ಆಯೋಗದ ವರದಿಯಂತೆ ನಮ್ಮ ಪಾಲಿಗೆ 16 ಟಿಎಂಸಿ ನೀರು ಭೀಮೆಯಿಂದ ಲಭಿಸಿದೆ. ಅದನ್ನು ಬಳಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ರಾಜಕೀಯ ಇಚ್ಛಾಶಕ್ತಿಯ ಕೊರತೆ. ಅದರಲ್ಲೂ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಆರ್ಥಿಕ ಬೆಳವಣಿಗೆ ಕಾಣುವುದು ದಕ್ಷಿಣ ಕರ್ನಾಟಕದ ಜನರಿಗೆ ಬೇಕಿಲ್ಲ. ಇದು ರಹಸ್ಯವಾಗೇನೂ ಉಳಿದಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಇನ್ನೂ ಕುಂಟುತ್ತಾ ಸಾಗಿರುವುದೇ ಸಾಕ್ಷಿ.

ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಬಹುಮತದಿಂದ ನಡೆಯುತ್ತದೆ ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಪ್ರಬಲರು ಬಹುಮತ ಪಡೆಯುವುದು ಹೇಗೆ ಎಂಬುದನ್ನು ತಿಳಿದುಕೊಂಡಿರುತ್ತಾರೆ. ಈಗ ಶಾಸನಸಭೆಯಲ್ಲಿ ಹಳೆ ಮೈಸೂರು ಭಾಗದ ಶಾಸಕರು ಕಡಿಮೆ ಸಂಖ್ಯೆಯಲ್ಲಿದ್ದರೂ ಉತ್ತರ ಕರ್ನಾಟಕದ ಹೆಚ್ಚಿನ ಶಾಸಕರನ್ನು ತಮ್ಮ ಕಡೆ ಸೆಳೆದುಕೊಳ್ಳುವುದರಲ್ಲಿ ಬುದ್ಧಿವಂತರು.

ಉತ್ತರ ಕರ್ನಾಟಕದ ಜನರ ಪರಿಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿರುವ ಮಹಾರಾಷ್ಟ್ರದವರು ಕರ್ನಾಟಕದ ನೆಲ-ಜಲ ಸೇರಿದಂತೆ ಎಲ್ಲವನ್ನೂ ಬಳಸಿಕೊಳ್ಳಲು ಹಿಂಜರಿಯುವುದಿಲ್ಲ. ಈಗ ಯುಕೆಪಿಯಲ್ಲಿ ಗೇಟ್ ಎತ್ತರಿಸುವುದಕ್ಕೆ ಆಕ್ಷೇಪ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ್ದರೂ ಅವರ ತಗಾದೆ ಇನ್ನೂ ಮುಂದುವರಿದಿದೆ.

ಅದೇರೀತಿ ಗಡಿ ವಿವಾದದಲ್ಲೂ ಇನ್ನೂ ತಮ್ಮ ತಕರಾರನ್ನು ಮುಂದುವರಿಸಿದ್ದಾರೆ. ಬೆಳಗಾವಿಯ ಮೇಲೆ ಅವರ ಕಣ್ಣು ಇನ್ನೂ ಇದೆ. ಅದೇರೀತಿ ಭೀಮಾ ನದಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಒಟ್ಟು 22 ಅಣೆಕಟ್ಟು ಮತ್ತು ಬ್ಯಾರೇಜುಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದ ಬೇಸಿಗೆ ಕಾಲದಲ್ಲಿ ಭೀಮಾ ಬತ್ತಿ ಹೋಗುತ್ತದೆ. ವಿಜಯಪುರ, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ 164 ಗ್ರಾಮಗಳಿಗೆ ಕುಡಿಯಲು ನೀರು ಇರುವುದಿಲ್ಲ.

ಕುಡಿಯಲು ನೀರು ಬಿಡಬೇಕು ಎಂಬ ನಿಯಮ ಇದ್ದರೂ ಮಹಾರಾಷ್ಟ್ರ ಅದನ್ನು ಪಾಲಿಸುವುದೇ ಇಲ್ಲ. ನಮ್ಮ ಸರ್ಕಾರ ಕೂಡ ಇದನ್ನು ಪ್ರಶ್ನಿಸುವುದಿಲ್ಲ. ಅದಕ್ಕೆ ಬದಲಾಗಿ ಹಣ ಕೊಟ್ಟು ನೀರು ಬಿಡುವಂತೆ ಪರಿಪಾಠ ಬೆಳೆಸಿಕೊಂಡಿದೆ. ಈ ಬಾರಿ ಭೀಮಾದಲ್ಲಿ ಪ್ರವಾಹ ಬಂದಿದೆ. ಮಹಾರಾಷ್ಟ್ರ ಎಲ್ಲ ಬ್ಯಾರೇಜ್ ತುಂಬಿದ ಮೇಲೆ ಒಟ್ಟಿಗೆ ಹೆಚ್ಚುವರಿ ನೀರನ್ನು ಬಿಟ್ಟಿದೆ. ಇದರಿಂದ ಕಲಬುರ್ಗಿ, ಯಾದಗಿರಿಯಲ್ಲಿ ಹಲವು ಗ್ರಾಮಗಳು ಮುಳುಗಿಹೋಗಿವೆ. 96 ಲಕ್ಷ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಹಿಂದುಳಿದ ಪ್ರದೇಶದ ದೊಡ್ಡ ಸಮಸ್ಯೆ ಎಂದರೆ ಅಕ್ಕಪಕ್ಕದ ರಾಜ್ಯಗಳೂ ಸೇರಿದಂತೆ ಎಲ್ಲರ ನಿರ್ಲಕ್ಷ್ಯಕ್ಕೆ ಒಳಗಾಗುವುದು. ಕಲ್ಯಾಣ ಕರ್ನಾಟಕ ಈ ರೀತಿ ತಬ್ಬಲಿ. ಕರ್ನಾಟಕಕ್ಕೆ ಈ ಪ್ರದೇಶ ಸೇರಿದ್ದರೂ ಮುಖ್ಯಮಂತ್ರಿ ಸೇರಿದಂತೆ ಬಹುತೇಕ ಸಚಿವರು ಇಲ್ಲಿಗೆ ಭೇಟಿ ಕೊಡುವುದೇ ಇಲ್ಲ. ಹೋದರೂ ಸಭೆ, ಸನ್ಮಾನ ಸಮಾರಂಭಗಳಿಗೆ ಹೋಗಿ ಹಾರ ತುರಾಯಿ ಪಡೆದು ಬೆಂಗಳೂರಿಗೆ ಬಂದು ಬಿಡುತ್ತಾರೆ. ಅಧಿಕಾರಿಗಳದೇ ಕೊನೆ ಮಾತು.

ಆ ಭಾಗದಲ್ಲಿ ಜಿಲ್ಲೆ ಕೇಂದ್ರಗಳಲ್ಲಿರುವ ಅಧಿಕಾರಿಗಳು ಯಾರೂ ಹಳ್ಳಿಗಳಿಗೆ ಹೋಗುವುದೇ ಇಲ್ಲ. ಮರಿ ಪುಡಾರಿಗಳೇ ತೀರ್ಮಾನ ಮಾಡುವುದರಿಂದ ಮಧ್ಯವರ್ತಿಗಳ ಮೂಲಕವೇ ಅಲ್ಲಿಯ ಜನ ಸರ್ಕಾರವನ್ನೂ ನೋಡುವುದು ಅನಿವಾರ್ಯ. ಇಲ್ಲಿಯ ಜನರನ್ನು ಶೋಷಣೆ ಮಾಡುವ ಕೇಂದ್ರಗಳಲ್ಲಿ ಸರ್ಕಾರಿ ಇಲಾಖೆಯೇ ಪ್ರಮುಖ ಎನ್ನುವುದು ಕಟುಸತ್ಯ.

ಬೆಂಗಳೂರಿನ ವಿಧಾನಸೌಧದಲ್ಲಿ 100 ರೂ. ಬಿಡುಗಡೆಯಾದಲ್ಲಿ ಕಲಬುರ್ಗಿ ಸೇರುವಷ್ಟರಲ್ಲಿ ಅದು 20 ರೂ.ಗಳಿಗೆ ಇಳಿದಿರುತ್ತದೆ. ಇದು ರಾಜೀವ್ ಗಾಂಧಿ ಹೇಳಿದ ಮಾತು. ಕಲ್ಯಾಣ ಕರ್ನಾಟಕದ ಜನ ಆರ್ಥಿಕವಾಗಿ ಪ್ರಬಲರಾಗಬೇಕು ಎಂದರೆ ನೀರಾವರಿ ಅಭಿವೃದ್ಧಿಪಡಿಸಬೇಕು. ಭೀಮಾ ನದಿಗೆ 6 ಬ್ಯಾರೇಜ್‌ಗಳನ್ನು ನಮ್ಮ ಸರ್ಕಾರ ನಿರ್ಮಿಸಿದೆ. ಇದರಲ್ಲಿ ಸೊನ್ನ ಮತ್ತು ಸನ್ನತಿ ಬ್ಯಾರೇಜ್ ದೊಡ್ಡದು.

ಆದರೆ ಇವುಗಳಿಗೆ ಕಾಲುವೆಗಳೇ ಇಲ್ಲ. ಹೀಗಾಗಿ ನಿಂತ ನೀರನ್ನೂ ಸುತ್ತಮುತ್ತಲ ರೈತರು ಬಳಸುವುದು ಕಷ್ಟ. ಬಡವರ ಕೆಲಸಗಳಿಗೆ ನಮ್ಮ ಸರ್ಕಾರದ ಬಳಿ ಹಣ ಇರುವುದಿಲ್ಲ. ಅದೇರೀತಿ ಈ ಕಾಮಗಾರಿಗಳು ಹಲವು ವರ್ಷಗಳಿಂದ ನಿಂತು ಹೋಗಿವೆ. ರೈತರು ಬಂಡಾಯವೆದ್ದರೆ ಪೊಲೀಸರು ದಮನ ಮಾಡುತ್ತಾರೆಯೇ ಹೊರತು ಸಮಸ್ಯೆ ಬಗೆಹರಿಸುವ ಕಡೆ ಗಮನಹರಿಸುವುದಿಲ್ಲ.

ಅಲ್ಲಿಯ ಜನಪ್ರತಿನಿಧಿಗಳಿಗೆ ಗಟ್ಟಿ ದನಿಯಲ್ಲಿ ಮಾತನಾಡುವ ಶಕ್ತಿಯೇ ಇಲ್ಲ. ಭೀಮೆ ಹರಿದರೂ ಕಲ್ಯಾಣ ಕರ್ನಾಟಕದ ಜನರಿಗೆ ನೆಮ್ಮದಿ ಇಲ್ಲ. ಅತಿವೃಷ್ಟಿ ಇಲ್ಲ ಅನಾವೃಷ್ಟಿ ಗ್ಯಾರಂಟಿ. ಬೇಸಿಗೆ ಬಂತು ಎಂದರೆ ಭೀಮಾ ನದಿಯಿಂದ ಬರೋದು ಕಾಮಾಲೆ ರೋಗ ಮಾತ್ರ. ಸೊಲ್ಲಾಪುರ ಸೇರಿದಂತೆ ಮಹಾರಾಷ್ಟ್ರದ ನಗರಗಳ ಒಳಚರಂಡಿ ನೀರು ಭೀಮೆಗೆ ಹರಿದು ಬರುತ್ತದೆ. ಕರ್ನಾಟಕದ ಜನರಿಗೆ ಭೀಮೆ ಎಂದರೆ ಕೊಳಚೆ ನೀರು ಎಂಬ ಭಾವನೆ ಮೂಡುವುದು ಸಹಜ.

Previous articleಜಾತಿಗಣತಿ: ಸಮೀಕ್ಷೆಯಲ್ಲಿ ಭಾಗವಹಿಸುವುದು ಜನರ ಸ್ವಯಂ ಇಚ್ಛೆ
Next articleತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ; ಸದ್ಯಕ್ಕೆ ಬಿಗ್ ರಿಲೀಫ್!

LEAVE A REPLY

Please enter your comment!
Please enter your name here