ಹುಬ್ಬಳ್ಳಿ: ರಾಜ್ಯ ಸರಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಅನಗತ್ಯ ವಿವರ ಕಲೆ ಹಾಕಲಾಗುತ್ತದೆ. ಯಾವ ಆಧಾರದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಸಮೀಕ್ಷೆಯ ವ್ಯಕ್ತಿಗತ ಮಾಹಿತಿಯನ್ನು ಮಾರಿಕೊಳ್ಳಲೂ ಕಾಂಗ್ರೆಸ್‌ನವರು ಹೇಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಷ್ಟು ಆದಾಯ ತೆರಿಗೆ ತುಂಬಿದ್ದೀರಿ, ಯಾವ್ಯಾವ ಸಾಮಾಜಿಕ ಸಂಘಟನೆ ಸದಸ್ಯತ್ವ ಇತ್ಯಾದಿ ಅನಗತ್ಯ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇದೆಲ್ಲ ಸರಕಾರಕ್ಕೆ ಯಾಕೆ ಬೇಕು. ಈ ಎಲ್ಲ ಮಾಹಿತಿ ಪಡೆದು ಏನು ಮಾಡುತ್ತೀರಾ ಎಂದು ಪ್ರಶ್ನಿಸಿದರು.
ಸಮೀಕ್ಷೆ ಕಡ್ಡಾಯವಲ್ಲ ಎಂದು ಹೈಕೋರ್ಟ್ ಹೇಳಿದೆ. ಸಮೀಕ್ಷಕರಿಗೆ ನಾನು ಮತ್ತು ನನ್ನ ಕುಟುಂಬದವರು ಯಾವ ಮಾಹಿತಿಯನ್ನು ನೀಡುವುದಿಲ್ಲ ಎಂದು ಹೇಳಿದರು.
ಸಮೀಕ್ಷೆಯ ಮಾಹಿತಿ ಗೌಪ್ಯವಾಗಿರಬೇಕು. ಆದರೆ, ಈ ಹಿಂದಿನ ಸಮೀಕ್ಷೆಯ ಮಾಹಿತಿ ಸೋರಿಕೆಯಾಗಿದೆ. ಬಳಿಕ ಅದನ್ನು ಕಸದ ಬುಟ್ಟಿಗೆ ಹಾಕುವ ಮೂಲಕ ಸಮೀಕ್ಷೆಗೆ ಖರ್ಚು ಮಾಡಿದ 170 ಕೋಟಿ ರೂ. ನೀರಿಗೆ ಹಾಕಲಾಯಿತು ಎಂದರು.