ಬೆಂಗಳೂರು: ರಾಜ್ಯಸಭಾ ಸದಸ್ಯೆ ಹಾಗೂ ಖ್ಯಾತ ಸಾಹಿತಿ ಸುಧಾ ಮೂರ್ತಿಯವರ ವಿರುದ್ಧ ಸೈಬರ್ ವಂಚನೆ ಪ್ರಯತ್ನ ನಡೆದಿದೆ. ಈ ನೈಜ ಘಟನೆ ಮತ್ತು ಕಣ್ಣು ತೆರೆಸುವ ಅನುಭವವನ್ನು ಹಂಚಿಕೊಂಡಿರುವ ಅವರು. ಆನ್‌ಲೈನ್‌ನಲ್ಲಿ ಯಾವುದೇ ವ್ಯಕ್ತಿ ಸೈಬರ್ ವಂಚನೆಗಳಿಗೆ ಗುರಿಯಾಗಬಹುದು ಎಂಬುದನ್ನು ಎಚ್ಚರಿಸಿದ್ದು ಸೈಬರ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ ಎಂದಿದ್ದಾರೆ.
ಈ ವಿಡಿಯೋವನ್ನು ಬೆಂಗಳೂರು ನಗರ ಪೊಲೀಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸೈಬರ್-ಜಾಗೃತಿ ಮೂಡಿಸಿದ್ದಾರೆ. ವಿಡಿಯೋದಲ್ಲಿ ಸುಧಾ ಮೂರ್ತಿ ಅವರು ತಮಗೆ ಆದ ಸೈಬರ್ ವಂಚನೆಯ ಅನುಭವವನ್ನು ಹಂಚಿಕೊಂಡಿದ್ದಾರೆ.
ಘಟನೆಯ ವಿವರ: ಸೆಪ್ಟೆಂಬರ್ 5 ರಂದು ಬೆಳಿಗ್ಗೆ 9.40ರ ಸುಮಾರಿಗೆ ಸುಧಾ ಮೂರ್ತಿಗೆ ಕರೆ ಬಂದಿತ್ತು. ತಾನು ದೂರಸಂವಹನ ಇಲಾಖೆಯ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಅವರ ಮೊಬೈಲ್ ಸಂಖ್ಯೆ ಆಧಾರ್‌ಗೆ ಲಿಂಕ್ ಆಗಿಲ್ಲ ಮತ್ತು ಆ ಸಂಖ್ಯೆಯಿಂದ ಅಸಭ್ಯ ವಿಷಯಗಳು ಹರಡುತ್ತಿವೆ ಎಂದು ಆರೋಪಿಸಿದ.
ಕರೆ ಮಾಡಿದ ವ್ಯಕ್ತಿ ಮಧ್ಯಾಹ್ನ 12ರೊಳಗೆ ಅಗತ್ಯ ದಾಖಲೆಗಳನ್ನು ನೀಡದಿದ್ದರೆ, ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಬೆದರಿಕೆ ಹಾಕಿದ. ಕರೆ ಮಾಡಿದ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು Truecaller ನಲ್ಲಿ “Telecom Dept” ಎಂದು ಗುರುತಿಸಲಾಗಿತ್ತು.
ಆದರೆ ಸುಧಾ ಮೂರ್ತಿ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದೆ ತಕ್ಷಣವೇ ಎಚ್ಚರಿಕೆ ವಹಿಸಿದ್ದಾರೆ
ಈ ಘಟನೆ ಮೂಲಕ ಪ್ರಮುಖ ವ್ಯಕ್ತಿಗಳೂ ಸೈಬರ್ ವಂಚನೆಗೆ ಗುರಿಯಾಗಬಹುದು ಎಂಬುದು ಸ್ಪಷ್ಟವಾಗಿದೆ. ದೂರವಾಣಿ ಕರೆ, ಇಮೇಲ್ ಅಥವಾ ಸಂದೇಶದ ಮೂಲಕ ಅಧಿಕಾರಿಯಂತೆ ನಟಿಸಿ ವಂಚನೆ ಮಾಡಲು ಪ್ರಯತ್ನಿಸುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಸಾರ್ವಜನಿಕರಿಗೆ ಹೆಚ್ಚುವರಿ ಎಚ್ಚರಿಕೆ ಅಗತ್ಯ ಎಂದು ಪೊಲೀಸರು ಸೂಚಿಸಿದ್ದಾರೆ.