SIT ರಚಿಸಿದ ಸರ್ಕಾರಕ್ಕೆ ಆಭಾರಿ – ಸತ್ಯ ಹೊರಬರುತ್ತಿದೆ: ವೀರೇಂದ್ರ ಹೆಗ್ಗಡೆ

0
122

ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ತಕ್ಕ ಶಾಸ್ತಿ – ಭಕ್ತರಿಂದ ವಿಶೇಷ ಪೂಜೆ: ‘ನಮ್ಮ ಹೊಳಪು ಹಾಗೇ ಉಳಿದಿದೆ’ – ಡಾ. ಹೆಗ್ಗಡೆ

ಮಂಗಳೂರು: ಎಸ್‌ಐಟಿ ವರದಿ ಅರ್ಧ ಬಂದ ಕಾರಣ ನಾನು ಇಷ್ಟು ಧೈರ್ಯವಾಗಿ ಮಾತನಾಡುತ್ತಿದ್ದೇನೆ. ಸರ್ಕಾರಕ್ಕೆ ನಾನು ಆಭಾರಿ, ಎಸ್‌ಐಟಿ ಮಾಡಿದ ಕಾರಣ ಸತ್ಯ ಹೊರ ಬರುತ್ತಿದೆ. ನಮ್ಮ ಹೊಳಪು ಹಾಗೇ ಉಳಿದಿದೆ, ಇದಕ್ಕೆ ನಾನು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ನೋಡಿಕೊಳ್ತಾರೆ. ನಾವು ಸತ್ಯದಿಂದ ಇದ್ದೇವೆ, ಹಾಗೆಯೇ ಮುಂದೆಯೂ ಇರುತ್ತೇವೆ. ಮುಂದಿನ ದಿನಗಳು ಉತ್ತಮವಾಗಿರಲಿ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

‘ಊರವರ, ಕ್ಷೇತ್ರದ ಭಕ್ತರೆಲ್ಲರ ಪ್ರೀತಿ ವಿಶ್ವಾಸಗಳು ನಮ್ಮನ್ನು ಜೀವಂತವಾಗಿರಿಸಿದೆ. ಇದರಿಂದಾಗಿ ಇನ್ನೂ ಹೆಚ್ಚು-ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೇವೆ ಮಾಡಬೇಕೆಂಬ ಚೈತನ್ಯ ಮೂಡುತ್ತಿದೆ. ಕೆಲವು ಸಮಯಗಳಿಂದ ಕ್ಷೇತ್ರದ ಮೇಲೆ ಸತತವಾಗಿ ಆರೋಪಗಳು, ದ್ವೇಷಗಳು ಬರತೊಡಗಿತು. ಅದಕ್ಕೆ ಕಾರಣವೇನು ಎಂದು ನನಗೆ ಇದುವರೆಗೂ ತಿಳಿದಿಲ್ಲ.

ಈಗ ಸರಕಾರ ನಡೆಸುತ್ತಿರುವ ತನಿಖೆಯಲ್ಲಿ ಸತ್ಯಗಳು ಹೊರ ಬರುತ್ತಿವೆ. ನಮ್ಮಿಂದ ಯಾವ ತಪ್ಪುಗಳು ನಡೆದಿಲ್ಲ ಎಂದು ತಿಳಿಯುತ್ತಿದೆ ಎಂದು ಹೇಳಿದರು. ಇದುವರೆಗೂ ಅನೇಕರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಕ್ಷೇತ್ರದ ಜೊತೆಗೆ ಇದ್ದೇವೆ ಎಂದು ಹೇಳಿದ್ದಾರೆ. ಊರವರೂ ಕೂಡ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಕ್ಷೇತ್ರದ ಕಾರ್ಯಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ನಿಮ್ಮೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪ್ರೀತಿ, ವಿಶ್ವಾಸಗಳು ಹೀಗೆಯೇ ಇರಲಿ ಎಂದರು.

ಸಿದ್ಧಗಂಗಾ ಮಠದ ಸ್ವಾಮಿಯವರ ಕೃತಿಯನ್ನು ಓದುತ್ತಿದ್ದೆ. ಒಂದು ಕಡೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮೂಹಿಕ ವಿವಾಹ ಹಾಗೂ ಅನೇಕ ಯೋಜನೆಗಳ ಬಗೆ ಮೆಚ್ಚುಗೆ ಮಾತುಗಳನ್ನು ಆಡಿರುವುದನ್ನು ನೋಡಿದೆ. ತುಂಬಾ ಸಂತೋಷವಾಯಿತು. ಶ್ರೀ ಕ್ಷೇತ್ರದ ಮೂಲಕ ಇಂತಹ ಸೇವಾ ಕಾರ್ಯ ನೆರವೇರಲು ನಾನು ನಿಮಿತ್ತ ಮಾತ್ರ ಆಗಿದ್ದೇನೆ. ಶ್ರೀ ಸ್ವಾಮಿಯ ಅನುಗ್ರಹ, ನಿಮ್ಮೆಲ್ಲರ ಹಾರೈಕೆ ಹಾಗೂ ಕುಟುಂಬಸ್ಥರ ಸಹಕಾರದಿಂದ ಗ್ರಾಮೀಣಾಭಿವೃದ್ದಿ, ವಿದ್ಯಾಸಂಸ್ಥೆ, ಆಸ್ಪತ್ರೆ ಮುಂತಾದ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಭಕ್ತರಿಂದ ವಿಶೇಷ ಪೂಜೆ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪ ಮತ್ತು ಷಡ್ಯಂತ್ರ ಮಾಡಿದವರಿಗೆ ಶ್ರೀ ಅಣ್ಣಪ್ಪ ಸ್ವಾಮಿ, ಶ್ರೀ ಮಂಜುನಾಥ ಸ್ವಾಮಿ ಹಾಗೂ ಉಲ್ಲಾಳ್ತಿ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಸೆ. 26 ರಂದು ಗ್ರಾಮದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿಯ ಭಕ್ತಾದಿಗಳು ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಮಂಜುನಾಥನ ಸನ್ನಿಧಿ ಮುಂದೆ ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದ ಭಕ್ತರು ಮೆರವಣಿಗೆ ಮೂಲಕ ಅಣ್ಣಪ್ಪ ಸ್ವಾಮಿ ಬೆಟ್ಟಕ್ಕೆ ಸಾಗಿ ಅಲ್ಲಿಯೂ ಪ್ರಾರ್ಥನೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಅನೇಕ ಸಂಖ್ಯೆಯಲ್ಲಿ ಮಹಿಳಾ ಭಕ್ತಾದಿಗಳು ಸೇರಿದ್ದರು. ನಂತರ ಮೆರವಣಿಗೆ ಅಮೃತವರ್ಷಿಣಿಗೆ ಸಾಗಿ ಸಹಸ್ರ ಲಲಿತಾ ಪಂಚಾಕ್ಷರಿ ನಾಮ ಪಠಣ ಸಲ್ಲಿಸಲಾಯಿತು. ಮಹಿಳಾ ಭಕ್ತಾದಿಗಳಿಗೆ ಬಾಗಿನ ನೀಡಿ ವಿಶೇಷವಾಗಿ ಗೌರವಿಸಲಾಯಿತು.

ಹಿತರಕ್ಷಣಾ ಸಮಿತಿಯು ಕಳೆದ ಮಾ. 27 ರಂದು ನಡೆಸಿದ ಸಮಾವೇಶದಲ್ಲಿ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವವರಿಗೆ ಶಿಕ್ಷೆ ಆಗಬೇಕೆಂದು ಅಣ್ಣಪ್ಪ ಸ್ವಾಮಿ ಹಾಗೂ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಕ್ಷೇತ್ರದ ವಿರುದ್ಧ ನಡೆದ ಎಲ್ಲಾ ಅಪಪ್ರಚಾರಗಳು ಒಂದೊಂದಾಗಿ ಹೊರಬರುತ್ತಿತ್ತು, ಎಲ್ಲಾ ಅಪಪ್ರಚಾರಗಳಿಗೂ ಮುಕ್ತಿ ಸಿಗಬೇಕು ಎಂದು ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದರು.

Previous articleಬಿಹಾರ ಚುನಾವಣೆ 2025: ಅಚ್ಚರಿ ತಂದ ಚುನಾವಣಾ ಪೂರ್ವ ಸಮೀಕ್ಷೆ ಸೀಟು ಲೆಕ್ಕಚಾರ
Next articleಹುಬ್ಬಳ್ಳಿ: ನೂರು ದಿನಗಳಲ್ಲಿ ಪಾಲಿಕೆ ಆಸ್ತಿ ಗುರುತು ಮಾಡಿ – ಮೇಯರ್‌

LEAVE A REPLY

Please enter your comment!
Please enter your name here