ಬಾಗಲಕೋಟೆ: ನವನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹುನಿರೀಕ್ಷೆಯ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣಕ್ಕೆ ಅವಶ್ಯಕವಿರುವ 450 ಕೋಟಿ ರೂ.ಗಳ ಅಂದಾಜು ಪಟ್ಟಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಬೆಂಗಳೂರಿನಲ್ಲಿ ಗುರುವಾರ ಸಿಎಂ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ 150 ಎಂಬಿಬಿಎಸ್ ಪ್ರವೇಶ ಮಿತಿಯೊಂದಿಗೆ ಪ್ರಾರಂಭಿಸಲು ಅವಶ್ಯವಿರುವ ಕಾಲೇಜು ಕಟ್ಟಡ, ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯ, ಬೋಧಕ ಸಿಬ್ಬಂದಿಯ ವಸತಿ ನಿಲಯ ಮತ್ತು ಆಡಳಿತಾತ್ಮಕ ಕಚೇರಿಯೂ ಸೇರಿದಂತೆ ಪೂರಕ ಕಾಮಗಾರಿಗಳಿಗೆ ಅವಶ್ಯಕವಿರುವ ಕಟ್ಟಡಗಳ ನಿರ್ಮಾಣಕ್ಕೆ ಅವಶ್ಯಕವಿರುವ 450 ಕೋಟಿ ರೂ.ಗಳ ಅಂದಾಜು ಪಟ್ಟಿಗೆ ಅನುಮೋದನೆ ನೀಡಲಾಯಿತು.
2014ರಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವುದಾಗಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸಿಎಂ ಆಗಿದ್ದಾಗ ಘೋಷಿಸಿದ್ದರು. ಆದರೆ ಅದಾದ ನಂತರ ಅದು ನನೆಗುದಿಗೆ ಬಿದ್ದಾಗ ಹೋರಾಟಗಳು ನಡೆದಿದ್ದವು. ಕಳೆದ ಆಯವ್ಯಯದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಮೊತ್ತದಲ್ಲಿ ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವುದಾಗಿ ಸಿಎಂ ಘೋಷಣೆ ಮಾಡಿದರು.
ಅದಾದ ನಂತರ ಕಾಲೇಜು ಸ್ಥಾಪನೆಗೆ ನಿರಂತರ ಪ್ರಕ್ರಿಯೆಗಳು ನಡೆಯುತ್ತಲೇ ಇದ್ದು, ನವನಗರದ 1 ಹಾಗೂ 13ನೇ ಸೆಕ್ಟರ್‌ಗಳನ್ನು ಕಾಲೇಜು ಸ್ಥಾಪನೆಗಾಗಿ ಮೀಸಲಿಡಲಾಗಿದೆ. ತೋಟಗಾರಿಕೆ ವಿವಿಗೆ ನೀಡಲಾಗಿದ್ದ ಜಾಗೆಯನ್ನು ವಾಪಸ್ ಪಡೆದು ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ನೀಡಲು ಬಿಟಿಡಿಎಯಲ್ಲಿ ತೀರ್ಮಾನಿಸಲಾಗಿದ್ದು, ಹಂತ-ಹಂತವಾಗಿ ಅನುದಾನ ನೀಡಿ ಕಾಲೇಜು ನಿರ್ಮಿಸಲು ತೀರ್ಮಾನಿಸಲಾಗಿದೆ.
2025-26ನೇ ಸಾಲಿನಲ್ಲಿ 75 ಕೋಟಿ ರೂ., 2026-27ನೇ ಸಾಲಿನಲ್ಲಿ 125 ಕೋಟಿ ರೂ., 2027-28ನೇ ಸಾಲಿನಲ್ಲಿ 125 ಕೋಟಿ ರೂ. ಹಾಗೂ 2028-29ನೇ ಸಾಲಿನಲ್ಲಿ 125 ಕೋಟಿ ರೂ. ಸೇರಿ ಒಟ್ಟು 450 ಕೋಟಿ ರೂ.ಗಳನ್ನು ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.
ಕಾಲೇಜಿಗೆ ಸಂಬಂಧಿಸಿದಂತೆ ಡಾ.ಬಿ.ಎಚ್. ನಾರಾಯಣಿ ಅವರನ್ನು ಈಗಾಗಲೇ ವಿಶೇಷಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಅಂದಾಜು ಪಟ್ಟಿಗೆ ಅನುಮೋದನೆ ಸಿಕ್ಕ ಬೆನ್ನಲ್ಲೇ ಕಾಲೇಜು ನಿರ್ಮಾಣ ಕಾರ್ಯಕ್ಕೆ ವೇಗ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.