ವಿಜಯಪುರ: ಹೆಚ್ಚುತ್ತಿರುವ ಬ್ಯಾಂಕ್ ದರೋಡೆ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆಯಾ ಬ್ಯಾಂಕುಗಳು ಪಾಲಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸ್ವತಃ ಜಿಲ್ಲಾಧಿಕಾರಿ ಡಾ. ಕೆ. ಆನಂದ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಜಂಟಿಯಾಗಿ ಸಭೆ ನಡೆಸಿ ಮನವರಿಕೆ ಮಾಡಿಕೊಟ್ಟರು. ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಸ್ತುತ ಬ್ಯಾಂಕುಗಳು ಸುರಕ್ಷತಾ ವಿಷಯವಾಗಿ ಗಂಭೀರತೆ ಇಲ್ಲದಿರುವ ವಿಷಯವನ್ನು ಬೆಳಕಿಗೆ ತಂದರು.
ಸುರಕ್ಷತಾ ಕ್ರಮಗಳ ಕುರಿತು ವಿವರಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾತನಾಡಿ, ಆರ್.ಬಿ.ಐ. ನಿಯಮವಾಳಿ ಅನ್ವಯ ದೈನಂದಿನ ಆರ್ಥಿಕ ವಹಿವಾಟಿಗೆ ಇಂತಿಷ್ಟೇ ನಗದು, ಒಡವೆ ಇರಿಸುವ ಅವಕಾಶವಿದೆ. ಆದರೆ ಮನಗೂಳಿ, ಚಡಚಣದಂತಹ ಸಣ್ಣ ಪ್ರದೇಶದಲ್ಲಿ ನೂರಾರು ಕೋಟಿ ನಗದು ಇರಿಸುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಿದರು.
ಕೇವಲ ಶಾಖೆ ತೆರೆದರೆ ಸಾಲದು, ಪೂರಕವಾದ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅವಶ್ಯ. ಸಾವಿರದಲ್ಲಿರುವ ಬೆಲೆಯ ಮೊಬೈಲ್ ಸುರಕ್ಷತೆಗಾಗಿ ಫೇಸ್ ಐಡಿ ವ್ಯವಸ್ಥೆ ಇದೆ. ಆದರೆ ಕೋಟಿ ಕೋಟಿ ಸಾರ್ವಜನಿಕರ ಹಣ ಇರಿಸಿರುವ ಬ್ಯಾಂಕುಗಳಲ್ಲಿ ಇಂದಿಗೂ ಇಲ್ಲದಂತಾಗಿದೆ ಎಂದರು.
ನಗದು ಹಣ ಪೂರೈಸುವ, ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ಪೂರೈಸುವ ವಾಹನಕ್ಕೂ ನಿಯಮಾವಳಿಗಳಿವೆ. ಈ ವಾಹನಗಳ ಟೈಯರ್ ಪಂಚರ್ ಮಾಡಿ ದರೋಡೆಕೋರರು ಎಗರಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಟ್ಯೂಬ್ ಲೆಸ್ ಟೈರ್ ವಾಹನ, ಸುತ್ತಲೂ ಸುರಕ್ಷತಾ ವ್ಯವಸ್ಥೆ ಹಾಗೂ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕಿದೆ ಎಂದರು.
ನೂರಾರು ಕೋಟಿ ರೂ. ವ್ಯವಹಾರ ನಡೆಸುವ ಬ್ಯಾಂಕುಗಳು 20 ಸಾವಿರ ವೇತನ ನೀಡಿ ಸಶಸ್ತ್ರ ಸೆಕ್ಯೂರಿಟಿ ನೇಮಕ ಮಾಡದೇ ಇರುವುದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ಹೆಲ್ಮೇಟ್ ಧರಿಸಿ, ಮಾಸ್ಕ್ ಧರಿಸಿ ಬಂದರೂ ಸಹ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಅವರನ್ನು ವಿಚಾರಣೆ ಮಾಡುವುದಿಲ್ಲ. ಇದು ದರೋಡೆಕೋರರಿಗೆ ವರದಾನವಾಗಿದೆ, ಸಂಜೆ ಆರು ಗಂಟೆ ಕಳೆದರೂ ಸಹ ಗ್ರಾಹಕರ ಪ್ರವೇಶಕ್ಕೆ ಅವಕಾಶ ನೀಡುವುದು ಸಹ ಅನೇಕ ತೊಂದರೆಗಳಿಗೆ ಆಹ್ವಾನ ಎಂದರು.
ಸುರಕ್ಷತೆ ವಿಷಯವನ್ನು ಗಂಭೀರವಾಗಿ ಪಾಲಿಸುತ್ತಿಲ್ಲ. ಅನೇಕ ಕಡೆ ಬ್ಯಾಂಕಿನ ಪೀಠೋಪಕರಣ ದುರಸ್ತಿ, ಸಿಸಿಟಿವಿ ಅಳವಡಿಕೆ ಕಾರ್ಮಿಕರಿಗೆ ಬ್ಯಾಂಕಿನಲ್ಲಿಯೇ ಮಲಗುವ ವ್ಯವಸ್ಥೆ ಮಾಡುತ್ತಿರುವುದು ನೋಡಿದರೆ ಸುರಕ್ಷತೆಯ ನಿರ್ಲಕ್ಷ್ಯತೆಗೆ ಒಂದು ಸಾಕ್ಷಿ ಎಂದರು.
ಲಾಕರ್ ರೂಂ ಮಾರ್ಕೆಟ್‌ನಂತಾಗಿದೆ: ಲಾಕರ್ ರೂಂಗಳನ್ನು ಒಂದು ರೀತಿ ಮಾರ್ಕೆಟ್ ರೀತಿ ಮಾಡಲಾಗಿದೆ. ಅದಕ್ಕೆ ಎಲ್ಲರ ಪ್ರವೇಶ ನಿಷಿದ್ಧ, ಆದರೆ ಅನೇಕ ಬ್ಯಾಂಕುಗಳಲ್ಲಿ ಹೊರಗುತ್ತಿಗೆ ನೌಕರರು ಸಹ ಅಲ್ಲಿ ಪ್ರವೇಶಿಸುವಂತಾಗಿದೆ. ಅದು ಮಾರ್ಕೆಟ್ ರೀತಿಯಲ್ಲಾದರೇ ಹೇಗೆ? ಎಂದು ಪ್ರಶ್ನಿಸಿದರು.
ಲಾಕರ್ ವಿಷಯವಾಗಿ ಎಸ್‌ಓಪಿ ಪಾಲನೆಯಾಗುತ್ತಿಲ್ಲ. 20-25 ವರ್ಷಗಳ ಹಳೆಯ ಲಾಕರ್ ವ್ಯವಸ್ಥೆ ಇದೆ, ಅದನ್ನು ಬದಲಾಯಿಸುವ ವ್ಯವಸ್ಥೆ ಆಗಿಲ್ಲ. ಇನ್ನೂ ಹಳೆಯ ಕಾಲದ ಕೀಲಿಕೈಗಳೇ ಇವೆ. ಈಗ ಕಿಲಿ ಕೈ ಅಷ್ಟೇ ಸಾಕಾಗುವುದಿಲ್ಲ ಎಂದರು.
ಬ್ಯಾಂಕ್ ಸುರಕ್ಷತೆಗೆ 22 ಅಂಶ: ಬ್ಯಾಂಕುಗಳಿಗೆ ನಂಬಿಕೆಯೇ ಬಂಡವಾಳ ಹಾಗೂ ಭದ್ರತೆಯೇ ಅದರ ಕೀಲಿ ಕೈ ಹೀಗಾಗಿ ಬ್ಯಾಂಕುಗಳ ಹಾಗೂ ಎಟಿಎಂಗಳ ಸಮಗ್ರ ಸುರಕ್ಷತೆಗಾಗಿ ಪಾಲಿಸಬೇಕಾದ ಸೂತ್ರಗಳಿಗೆ ಸಂಬಂಧಿಸಿದ 22 ಅಂಶಗಳ ಪಟ್ಟಿಯನ್ನು ಪೊಲೀಸ್ ಇಲಾಖೆ ಸಿದ್ದಪಡಿಸಿ ಬ್ಯಾಂಕ್ ಅಧಿಕಾರಿಗಳಿಗೆ ಈ ಸುರಕ್ಷತಾ ಕ್ರಮ ಪಾಲಿಸುವಂತೆ ನಿರ್ದೇಶನ ನೀಡಿತು.
v8ck98