ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಂಡೇಲಿಯನ್ನು ಹೆಚ್ಚುವರಿ ತಾಲೂಕು ಕೇಂದ್ರ ಮಾಡಿ ಸರಕಾರ ಆದೇಶ ಹೊರಡಿಸಿ ಎಂಟು ವರ್ಷಗಳು ಕಳೆದಿದ್ದರೂ ತಾಲೂಕಿಗೆ ಸಿಗಬೇಕಾದ ಯಾವುದೇ ಕಚೇರಿಗಳಾಗಲಿ, ವ್ಯವಸ್ಥಿತ ತಾಲೂಕಾ ಆಸ್ಪತ್ರೆ ಮತ್ತಿತರೆ ಮೂಲಭೂತ ಸೌಕರ್ಯಗಳು ಆಗಿಲ್ಲ. ಈ ಕುರಿತಂತೆ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಸತತವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಸಂಬಂಧಿಸಿದ ಮಂತ್ರಿಗಳನ್ನು, ಅಧಿಕಾರಿಗಳನ್ನು ಸತತ ಭೇಟಿ ಮಾಡಿ ಒತ್ತಾಯಿಸುತ್ತಲೇ ಬಂದಿದ್ದೇವೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಅಕ್ರಂ ಖಾನ ತಿಳಿಸಿದ್ದಾರೆ.
ದಾಂಡೇಲಿ ತಾಲೂಕು ಕೇಂದ್ರವಾಗಿದ್ದರೂ ಎಲ್ಲ ಪ್ರಮುಖ ಕಚೇರಿ ಕೆಲಸಗಳಿಗೆ 23 ಕಿ.ಮೀ.ದೂರವಿರುವ ಹಳಿಯಾಳ ತಾಲೂಕಾ ಕೇಂದ್ರವನ್ನೆ ಹಿಂದಿನಂತೆ ಅವಲಂಭಿಸಬೇಕಾಗಿದೆ. ಇದರಿಂದ ಜನರು ಚಿಕ್ಕ ಪುಟ್ಟ ಕೆಲಸಗಳಿಗೆ ಇಡೀ ದಿನ ಕೆಲಸ ಬಿಟ್ಟು ಹಳಿಯಾಳಕ್ಕೆ ಅಲೆದಾಡಬೇಕಿದೆ. ದಾಂಡೇಲಿ ತಾಲೂಕು ಕೇಂದ್ರವಾದರೂ ಇದುವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಬ್ ರಜಿಷ್ಟ್ರಾರ್, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ, ಮೀನುಗಾರಿಕೆ, ಭೂ ಸರ್ವೆ ಇಲಾಖೆ, ತಾಲೂಕಾ ಆಸ್ಪತ್ರೆ,ಲೋಕೋಪಯೋಗಿ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ಚಿಕ್ಕ ನೀರಾವರಿ ಇಲಾಖೆ ಹೀಗೆ ಹಲವು ಮಹತ್ವದ ಕೆಲಸದ ಕಚೇರಿಗಳನ್ನು ದಾಂಡೇಲಿಯಲ್ಲಿ ಪ್ರಾರಂಭಿಸಿಲ್ಲ.
ಇದರಿಂದ ಸ್ಥಳೀಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ, ಸಂಬಂಧಿಸಿದ ಸಚಿವರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಈ ಕುರಿತು ಸರ್ಕಾರ ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ಅಕ್ಟೋಬರ್ 3 ರಿಂದ ಅನಿರ್ಧಿಷ್ಟ ಅವಧಿಗೆ ಸತ್ಯಾಗ್ರಹ ನಡೆಸಲಾಗುವುದೆಂದು ಸಮಿತಿ ಅಧ್ಯಕ್ಷರು,ಪದಾಧಿಕಾರಿಗಳು ಎಚ್ಚರಿಸಿದ್ದಾರೆ.