ಬೆಂಗಳೂರು: ಉತ್ತರ ಕರ್ನಾಟಕ, ಗೋವಾ ಹಾಗೂ ಮಹರಾಷ್ಟ್ರ ರಾಜ್ಯದ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಬೆಳಗಾವಿಯಲ್ಲಿ ತಿರುಪತಿ-ತಿರುಮಲ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಆಡಳಿತ ಮಂಡಳಿ ಅನುಮೋದನೆ ನೀಡಿದೆ ಎಂದು ಟಿಟಿಡಿ ಸದಸ್ಯ ಎಸ್.ನರೇಶ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನ ವೈಯಾಲಿಕಾವಲ್‌ನಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಹಾಗೂ ದೇಶದ ಇತರೆ ಭಾಗಗಳಲ್ಲಿ ಇರುವಂತೆ ಬೆಳಗಾವಿಯಲ್ಲೂ ದೇವಸ್ಥಾನ ನಿರ್ಮಿಸುವುದರಿಂದ ಆಭಾಗದ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದರು.
ಪ್ರತಿ ಬಾರಿಯೂ ತಿರುಪತಿ-ತಿರುಮಲಕ್ಕೆ ಭೇಟಿ ನೀಡುವ ಬದಲಾಗಿ, ಸ್ಥಳೀಯವಾಗಿಯೇ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಭಾಗ್ಯ ಲಭಿಸಲಿದೆ. ಬೆಳಗಾವಿ ಸುವರ್ಣಸೌಧದ ಹತ್ತಿರ ಈ ದೇವಸ್ಥಾನ ನಿರ್ಮಾಣವಾಗಲಿದೆ. ಶ್ರೀವಾಣಿ ಟ್ರಸ್ಟ್ ಮುಖಾಂತರ ಈ ದೇವಸ್ಥಾನ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ಟಿಟಿಡಿ ಅಧ್ಯಕ್ಷರಾದ ಬಿ.ಆರ್ ನಾಯ್ಡು ಅವರು ಬೆಳಗಾವಿಗೆ ಭೇಟಿ ನೀಡಿ ಮುಂದಿನ ಕಾರ್ಯಗಳನ್ನು ಪರಿಶೀಲಿಸಲಿದ್ದಾರೆ ಎಂದು ಹೇಳಿದರು.
ಈ ವರ್ಷದ ವಾರ್ಷಿಕ ಸಾಲಕಟ್ಲ ಬ್ರಹ್ಮೋತ್ಸವವು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದ್ದು, ತಿರುಮಲದ ಪಾವಿತ್ರ‍್ಯತೆಯನ್ನು ಕಾಪಾಡುವುದು ಮತ್ತು ಸಾಮಾನ್ಯ ಭಕ್ತರಿಗೆ ಸುಲಭ ದರ್ಶನ ಒದಗಿಸುವುದು ಮುಖ್ಯ ಆದ್ಯತೆಯಾಗಿದೆ. ಬ್ರಹ್ಮೋತ್ಸವದ ಸಮಯದಲ್ಲಿ ಈ ನಿಟ್ಟಿನಲ್ಲಿ ನಾವು ವಿಶೇಷ ಗಮನ ಹರಿಸುತ್ತಿದ್ದೇವೆ. ಬ್ರಹ್ಮೋತ್ಸವದ ಒಂಬತ್ತು ದಿನಗಳಲ್ಲಿ ಶಿಫಾರಸು ಪತ್ರಗಳ ಮೂಲಕ ಕೊಠಡಿಗಳನ್ನು ರದ್ದುಪಡಿಸಲಾಗಿದೆ. ಈ ಅವಧಿಯಲ್ಲಿ 3,500 ಕೊಠಡಿಗಳನ್ನು ಆಫ್‌ಲೈನ್‌ನಲ್ಲಿ ಹಂಚಿಕೆ ಮಾಡಲಾಗುವುದು, ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ವಾಹನ ಸೇವೆಗಳನ್ನು ವೀಕ್ಷಿಸಲು ಭಕ್ತರಿಗಾಗಿ 36 ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುವುದು. ಗರುಡ ಸೇವೆಯ ದಿನವನ್ನು ಹೊರತುಪಡಿಸಿ ಪ್ರತಿದಿನ 1.16 ಲಕ್ಷ ವಿಶೇಷ ದರ್ಶನ ಟಿಕೆಟ್‌ಗಳು ಮತ್ತು 25,000 ಎಸ್.ಎಸ್.ಡಿ. ಟೋಕನ್‌ಗಳನ್ನು ವಿತರಿಸಲಾಗುವುದು. ವಿಐಪಿ ಬ್ರೇಕ್ ದರ್ಶನವನ್ನು ಸ್ವತಃ ಹಾಜರಾಗುವ ವಿಐಪಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಉಳಿದ ಎಲ್ಲಾ ಸವಲತ್ತು ದರ್ಶನಗಳನ್ನು ರದ್ದುಗೊಳಿಸಲಾಗಿದೆ. ಪ್ರತಿದಿನ 8 ಲಕ್ಷ ಲಡ್ಡುಗಳನ್ನು ಸಿದ್ಧವಾಗಿ ಇರಿಸಿಕೊಳ್ಳಲಾಗುವುದು. ಭಕ್ತರಿಗೆ ಮಾಹಿತಿ ನೀಡಲು 20 ಸಹಾಯ ಕೇಂದ್ರಗಳನ್ನು (ಹತ್ತು ಹೆಚ್ಚುವರಿ) ತೆರೆಯಲಾಗಿದೆ ಎಂದು ತಿಳಿಸಿದರು.
ಬ್ರಹ್ಮೋತ್ಸವಕ್ಕಾಗಿ 2,300 ನೈರ್ಮಲ್ಯ ಸಿಬ್ಬಂದಿ ಜೊತೆಗೆ ಹೆಚ್ಚುವರಿಯಾಗಿ 960 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 1,150 ಕೇಶಮುಂಡನ ಸಿಬ್ಬಂದಿಗಳು ಸೇವೆ ಸಲ್ಲಿಸಲಿದ್ದಾರೆ. ಬ್ರಹ್ಮೋತ್ಸವದ ಸಮಯದಲ್ಲಿ ಮೊದಲ ಬಾರಿಗೆ 28 ರಾಜ್ಯಗಳಿಂದ 298 ಸಾಂಸ್ಕೃತಿಕ ತಂಡಗಳು ಪ್ರದರ್ಶನ ನೀಡಲಿವೆ. ಗರುಡ ಸೇವೆ ದಿನದಂದು 20 ರಾಜ್ಯಗಳಿಂದ 37 ತಂಡಗಳು ತಮ್ಮ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸಲಿವೆ. ಭಕ್ತಾದಿಗಳಿಗೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಬೆಂಗಳೂರು ವೆಂಕಟೇಶ್ವರ ದೇವಸ್ಥಾನದ ಸುಪರಿಂಟೆಂಡೆಟ್ ಜಯಂತಿ ಮಾತನಾಡಿ, ಬ್ರಹ್ಮೋತ್ಸವದ ಅಂಗವಾಗಿ ಬೆಂಗಳೂರಿನ ದೇವಸ್ಥಾನದಲ್ಲೂ ವಿಶೇಷ ಅಲಂಕಾರ ಹಾಗೂ ಪೂಜೆಯನ್ನು ಏರ್ಪಡಿಸಲಾಗಿದೆ. ಪ್ರತಿದಿನ ಸಂಜೆ ಉಂಜಲ್ ಸೇವೆಯನ್ನು ಏರ್ಪಡಿಸಲಾಗಿದೆ ಎಂದರು.