ದಾವಣಗೆರೆ: ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಪತ್ನಿಗೆ ಪತಿ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ಇಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ.
ಪ್ರವೀಣ್ (36) ಆರೋಪಿ. ಈತನ ಪತ್ನಿ ಪದ್ಮಾ (30)ಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೂಲತಃ ದಾವಣಗೆರೆಯವರಾದ ದಂಪತಿ ಬೆಂಗಳೂರಿನಲ್ಲಿ ವಾಸವಿದ್ದರು. ಕಳೆದ ಹತ್ತು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಜೋಡಿಗೆ ಒಂದು ಹೆಣ್ಣು ಮಗುವು ಇದೆ. ನಾಲ್ಕು ವರ್ಷಗಳಿಂದ ಇವರಿಬ್ಬರ ದಾಂಪತ್ಯದಲ್ಲಿ ಸಾಕಷ್ಟು ವಿರಸ ಆರಂಭವಾಗಿತ್ತು. ವಿಚ್ಛೇದನದ ಹಂತದವರೆಗೂ ತಲುಪಿತ್ತು.
ಪತಿ ಪ್ರವೀಣ್ ವಿಚ್ಛೇದನ ಹಿಂಪಡೆದು ತನ್ನೊಂದಿಗೆ ಸಂಸಾರ ಶುರು ಮಾಡಲು ಅಲವತ್ತುಕೊಂಡಿದ್ದ. ಆದರೆ, ಶೀಲಶಂಕಿಸಿ ಆಗಾಗ ಗಲಾಟೆ ಮಾಡುವುದಷ್ಟೇ ಅಲ್ಲದೇ ಬೆಂಗಳೂರಿನಲ್ಲೂ ತನ್ನನ್ನು ಕೊಲ್ಲಲು ಯತ್ನಿಸಿದ್ದ ಕಾರಣಕ್ಕೆ ಪದ್ಮಾ ಕೂಡಿ ಬಾಳಲು ನಿರಾಕರಿಸಿದ್ದಾಳೆ.
ಈ ಸಂಬಂಧ ಶನಿವಾರ ನ್ಯಾಯಾಲಯದ ಆವರಣದಲ್ಲಿ ಪತ್ನಿ ಆಗಮಿಸಿದ ವೇಳೆ ಪ್ರವೀಣ್ ಪತ್ನಿಗೆ ಚಾಕುವಿನಿಂದ ಇರಿದು ಕೊಲ್ಲಲು ಯತ್ನಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪದ್ಮಾಳನ್ನು ತಕ್ಷಣ ಸಿಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆರೋಪಿ ಪ್ರವೀಣ್‌ನನ್ನು ದಾವಣಗೆರೆ ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.