ಹುಬ್ಬಳ್ಳಿ ಏಕತಾ ಸಮಾವೇಶ: ಒಗ್ಗಟ್ಟಿನ ಮಂತ್ರ ಪಠಿಸಿದ ಮಠಾಧೀಶರು

0
36

ಹುಬ್ಬಳ್ಳಿ: ಇಲ್ಲಿನ ನೆಹರು ಮೈದಾನದಲ್ಲಿ ಶುಕ್ರವಾರ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ವಿವಿಧ ಮಠಾಧೀಶರ ನೇತೃತ್ವದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಏಕತಾ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಪಂಚಪೀಠಾಧೀಶ್ವರರು, ವಿವಿಧ ಮಠಾಧೀಶರು, ಸಮಾಜದ ಗಣ್ಯರು ನಾಡಿನ ಸಮಸ್ತ ವೀರಶೈವ ಲಿಂಗಾಯತ ಸಮಾಜಕ್ಕೆ ಒಗ್ಗಟ್ಟಿನ ಸಂದೇಶ ರವಾನಿಸಿದರು.

ಮಹಾಸಭಾದ ನಿರ್ಣಯವೇ ವೇದವಾಕ್ಯ. ಅದೇ ಅಂತಿಮ. ಸ್ವಾರ್ಥ ಬದಿಗಿಟ್ಟು ಸಮಾಜೋದ್ಧಾರಕ್ಕೆ ಅಣಿಯಾಗೋಣ. ಅನ್ಯಾಯದ ವಿರುದ್ಧ ಧ್ವನಿ ಎತ್ತೋಣ ಎಂಬ ಘೋಷಣೆ ಮೊಳಗಿಸಿದರು.

ಇವರ ಸಂದೇಶ, ಘೋಷಣೆಗಳಿಗೆ ಸಮಾವೇಶದಲ್ಲಿ ಸೇರಿದ್ದ ಸಾವಿರಾರು ಜನರು ಜೈಕಾರದ ಮೂಲಕ ಅನುಮೋದಿಸಿದರು. ಆಯೋಜಕರಾದ ಫಕೀರ ದಿಂಗಾಲೇಶ್ವರರು ನೀಡಿದ ರಾಜಕೀಯ, ವೈಯಕ್ತಿಕ ಟೀಕೆ ವಿಚಾರಗಳನ್ನು ಪ್ರಸ್ತಾಪಿಸಕೂಡದು ಎಂಬ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡೇ ವೀರಶೈವ ಲಿಂಗಾಯತ ಸಮಾಜದ ರಾಜಕೀಯ ಘಟಾನುಘಟಿಗಳು, ನಾಯಕರು ತೂಕಬದ್ಧವಾಗಿ ಮಾತನಾಡಿ, ಸಮಾಜಕ್ಕೆ ತಾವು ಏನು ಸಂದೇಶ ನೀಡಬೇಕೊ ಅದನ್ನು ನೀಡುವ ಮೂಲಕ ಒಗ್ಗಟ್ಟಿನ ಸಂದೇಶ ರವಾನಿಸಿದರು.

ಅವರೊಂದು, ಇವರೊಂದು ತೀರ.. ಎಂಬುದು ಬೇಡ: “ನಾವೆಲ್ಲರೂ ಒಂದೇ. ವೀರಶೈವರು ಬೇರೆ ಅಲ್ಲ. ಲಿಂಗಾಯರು ಬೇರೆ ಅಲ್ಲ. ಒಗ್ಗಟ್ಟಿನ ಮಂತ್ರ ಜಪಿಸಬೇಕು. ಅವರೊಂದು ತೀರ. ಇವರೊಂದು ತೀರ ಆಗುವುದು ಬೇಡ. ಎಲ್ಲರೂ ನಮ್ಮವರೇ. ಒಬ್ಬನೇ ತಂದೆ. ಧರಿಸುವ ಬಟ್ಟೆ, ಬದುಕುವ ರೀತಿ ಒಂದೇ ಆಗಿದೆ. ಇದು ಶಕ್ತಿ ಪ್ರದರ್ಶನವಲ್ಲ; ಭಕ್ತಿ ಪ್ರದರ್ಶನ. ಒಗ್ಗಟ್ಟಿನಿಂದ ನಡೆಯುವುದೇ ಎಲ್ಲರ ಧ್ಯೇಯವಾಗಲಿ” ಎಂದು ತುಮಕೂರಿನ ಶ್ರೀ ಸಿದ್ಧಗಂಗಾಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಹಿಂದೂ ಶಬ್ದ ಬಳಸಬೇಡಿ: “ವಿಶ್ವಮಾನ್ಯವಾದುದು ವೀರಶೈವ. ವೀರಶೈವ ಮಹಾಸಭಾ ಎಂದೇ ಇತ್ತು. ಈಚೆಗೆ ಲಿಂಗಾಯತ ಎಂಬ ಪದ ಸೇರಿಸಿ ವೀರಶೈವ ಲಿಂಗಾಯತ ಎಂದು ಕರೆಯಲಾಗುತ್ತಿದೆ. ವೀರಶೈವಕ್ಕೆ 10-12 ಹೆಸರು ಇವೆ. ಸಿದ್ಧಾಂತ, ತತ್ವ ವಿಷಯದಲ್ಲಿ ವೀರಶೈವಕ್ಕೆ ತನ್ನದೇ ಆದ ಮಹತ್ವ ಇದೆ. ಭಾರತದಲ್ಲಿ ಇರುವವರೆಲ್ಲ ಹಿಂದೂಗಳೇ. ಆದರೆ, ವೀರಶೈವರು ಹಿಂದೂಗಳಲ್ಲ. ಹಿಂದೂ ಶಬ್ದವನ್ನು ಯಾರ ಬಳಸಬಾರದು. ವೀರಶೈವ ಎಂಬುದೇ ತತ್ವನಿಷ್ಠವಾದುದು. ಲಿಂಗವನ್ನು ಸದಾ ಕಾಲ ಎದೆಯ ಮೇಲೆ ಲಿಂಗ ಧರಿಸಿಕೊಂಡಿರುವವರು. ಯಾವುದೇ ಜಾತಿಯವರೇ ಇರಲಿ. ಲಿಂಗಧಾರಣೆ ಮಾಡಿಕೊಂಡವರು ವೀರಶೈವ ಲಿಂಗಾಯತರೇ ಆಗಿದ್ದಾರೆ. ಲಿಂಗತತ್ವ ಅನುಸರಿಸುವವರೆಲ್ಲ ಲಿಂಗಾಯತರು. ಲಿಂಗಧಾರಿಗಳಾದವರು ಲಿಂಗ ನಿರೀಕ್ಷೆ ಮಾಡಬೇಕು. ಲಿಂಗಾಯತ ವೀರಶೈವ ಎರಡೂ ಒಂದೇ. ಭಿನ್ನ ಮಾತು ಬೇಡ” ಎಂದು ಮುಂಡರಗಿ ಅನ್ನದಾನೀಶ್ವರಮಠದ ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಮಹಾರಾಷ್ಟ್ರದಲ್ಲಿ ವೀರಶೈವ ಲಿಂಗಾಯತರೆಂದೇ ಬರೆಸಿದ್ದೇವೆ: “ಮಹಾರಾಷ್ಟ್ರದಲ್ಲಿ 1 ಕೋಟಿಗೂ ಅಧಿಕ ವೀರಶೈವ ಲಿಂಗಾಯತರಿದ್ದಾರೆ. ಮಹಾರಾಷ್ಟ್ರದಲ್ಲಿ ವೀರಶೈವ ಲಿಂಗಾಯತರು ಜನಗಣತಿಯಲ್ಲಿ ವೀರಶೈವ ಲಿಂಗಾಯತ ಎಂದೇ ಬರೆಸಿದ್ದಾರೆ. ಕರ್ನಾಟಕದಲ್ಲಿರುವ ನಮ್ಮ ಸಮಾಜದಲ್ಲಿರುವವರು ಅದೇ ರೀತಿ ಬರೆಸಬೇಕು. ಸಮಾಜದ ಪ್ರತಿಯೊಬ್ಬರೂ ಸಹ ಒಗ್ಗಟ್ಟಿನಿಂದ ನಡೆಯಬೇಕು. ಹಿಂದು ಎಂದು ಬರೆಯಬೇಡಿ. ವೀರಶೈವ ಲಿಂಗಾಯತ ಎಂದೇ ಬರೆಯಿರಿ” ಎಂದು ಕೊಲ್ಲಾಪುರದ ಸಮಾಜ ಮುಖಂಡರಾದ ಮನೋಹರ ದೆಂಡೆ ಹೇಳಿದರು.

ಸಮೀಕ್ಷೆ ಪಟ್ಟಿ ನೋಡಿದರೆ ಎದೆ ಧಸಕ್ಕೆನ್ನುತ್ತದೆ!: ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯರು ಮಾತನಾಡಿ, “ಜಾತಿಗಳ ಹೆಸರನ್ನೇ ಕೇಳಿಲ್ಲ. ಅಂತಹ ಹೆಸರುಗಳನ್ನು ಸಮೀಕ್ಷಾ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದನ್ನು ನೋಡಿದೆ ಧಸಕ್ಕೆನ್ನುತ್ತದೆ. ಹಿಂದು ಸಮಾಜವನ್ನು ಜಾತಿ ಜಾತಿಗಳಾಗಿ ವಿಂಗಡಿಸುವ ಹುನ್ನಾರ ಆಗಿದೆ. ವೀರಶೈವ ಲಿಂಗಾಯತ ಸಮಾಜವು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಸಮಾಜಕ್ಕೆ ಅನ್ಯಾಯ ಆಗುವುದನ್ನು ತಡೆಯಬೇಕಾಗಿದೆ. ಎಲ್ಲರೂ ವೀರಶೈವ ಲಿಂಗಾಯತ ಎಂದೇ ಬರೆಯಬೇಕು. ಉಪಜಾತಿ ಕಾಲಂನಲ್ಲಿ ಉಪಜಾತಿ ಹೆಸರನ್ನೇ ಬರೆಯಿರಿ. ಇದರಿಂದ ಏನೂ ತಪ್ಪಾಗದು” ಎಂದರು.

“ಪಂಚಪೀಠಗಳು ಧರ್ಮಮುಖಿಯಾಗಿ, ಸಮಾಜಮುಖಿಯಾಗಿ ನಡೆದುಕೊಂಡು ಬಂದಿವೆ. ಸಾಮಾಜಿಕ ಸಂವೇದನಾಶೀಲತೆಯಿಂದ ನಡೆದುಕೊಂಡು ಬಂದಿವೆ. ಪಂಚಪೀಠಗಳು ಬೇರೆ ಯಾವುದೇ ಮಠಾಧೀಶರ ಬಗ್ಗೆ ಸಲ್ಲದ ಮಾತನಾಡುವುದಿಲ್ಲ. ಬಸವೇಶ್ವರ ಸಂದೇಶಗಳನ್ನು ಗೌರವಿಸುತ್ತೇವೆ. ಆ ಸಂದೇಶಗಳನ್ನು ಸಮಾಜಕ್ಕೆ ನೀಡುತ್ತೇವೆ” ಎಂದರು.

“ಪ್ರತ್ಯೇಕ ಗುಂಪು ಹೋರಾಟ ಬೇಡ. ಹೊಸ ಧರ್ಮ ಹುಟ್ಟು ಹಾಕುವುದು ಬೇಡ. ಇರುವಂತಹ ಧರ್ಮ ಸರಿಯಾಗಿ ಕಟ್ಟಿ ಬೆಳೆಸಬೇಕು. ಹರಗುರು ಚರಮೂರ್ತಿಗಳು ಒಂದಾಗಿ ಸಮಾಜದ ಏಳ್ಗೆಗೆ ಮುನ್ನಡೆಯಲಿದ್ದೇವೆ. ವೀರಶೈವ ತತ್ವ ಸಿದ್ಧಾಂತ, 12ನೇ ಶತಮಾನದ ಶರಣರ ಚಿಂತನೆಗಳ ಆಳ ಅಧ್ಯಯನ ಮಾಡಬೇಕು. ಸಮಾಜ ಛಿದ್ರಗೊಳಿಸುವ ಹುನ್ನಾರದ ಬಗ್ಗೆ ಎಚ್ಚರಿಕೆ ಇರಬೇಕು. ಭಾರತ ದೇಶದಲ್ಲಿ ಸಂವಿಧಾನದಲ್ಲಿ 6 ಧರ್ಮಕ್ಕೆ ಮಾನ್ಯತೆ ಇದೆ. ವೀರಶೈವ ಲಿಂಗಾಯತ ಕ್ಕೂ ಸ್ವತಂತ್ರ ಧರ್ಮ ಮಾನ್ಯತೆ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿಕೊಂಡು ಬಂದಿದೆ. ಇದು ಶ್ಲಾಘನೀಯ ಕಾರ್ಯ” ಎಂದರು.

ವೀರಶೈವ ಲಿಂಗಾಯತರು ಎಂದೇ ಹೇಳಿ: “ವೀರಶೈವ ಲಿಂಗಾಯತರೆಂದೇ ಹೇಳಿ. ಸ್ವಾಮೀಜಿಗಳೂ, ಪಂಚಪೀಠಾಧೀಶರೂ ಸಹ ತಾವು ವೀರಶೈವ ಲಿಂಗಾಯತ ಪೀಠದವರು, ಮಠಾಧೀಶರು ಎಂದೇ ಹೇಳಬೇಕು. ಕೂಡುವ ಕೆಲಸವಾಗಬೇಕು. ಒಡೆಯುವ, ಬಿಟ್ಟು ಹೋಗುವ ಕೆಲಸ ಆಗಬಾರದು. ಅದಕ್ಕಾಗಿ ಈ ಸಮಾವೇಶ.
40 ವರ್ಷದ ಹಿಂದೆ ಶೇ 30ರಷ್ಟು ಇದ್ದ ವೀರಶೈವ ಲಿಂಗಾಯತರು ಈಗ ಶೇ 11 ರಷ್ಟಾಗಿದ್ದಾರೆ. ಶೇ 11 ರಷ್ಟಿದ್ದವರು ಶೇ 40 ರಷ್ಟಾಗಿದ್ದಾರೆ. ಇದು ಗಂಭೀರ ಚಿಂತನೆಗೆ ಹಚ್ಚಬೇಕಾದ ಸಂಗತಿಯಾಗಿದೆ. ಇನ್ನಾದರೂ ಸಮಾಜ ಎಚ್ಚೆತ್ತುಕೊಳ್ಳಬೇಕು. ಸಮಾಜ ದಿಕ್ಕು ತಪ್ಪಿಸುವ ಕೆಲಸ ಯಾರೂ ಮಾಡಬಾರದು” ಎಂದು ಫಕೀರ ದಿಂಗಾಲೇಶ್ವರ ಸ್ವಾಮಿಗಳು ನುಡಿದರು.

ಮಹಾಸಭಾ ಆಶಯಕ್ಕೆ ತದ್ವಿರುದ್ಧ ನಡೆ ಬೇಡ: “ಸಮಾಜ ಸೇವೆ ಎನ್ನುವ ಶಬ್ದಕ್ಕೆ ಬಹಳ ಮಹತ್ವ ಕೊಟ್ಟವರು ಹಾನಗಲ್ ಶ್ರೀ ಕುಮಾರಸ್ವಾಮಿಗಳು. ದೇಹತ್ಯಾಗ ಮಾಡುವ ಮುನ್ನ ಒಂದು ಹೇಳಿದ್ದರು. ಸಮಾಜ ಸೇವೆಗೆ ಮತ್ತೆ ಜನ್ಮತಾಳಿ ಬರುತ್ತೇನೆ ಎಂದು ನುಡಿದಿದ್ದರು. ಮಂತ್ರಸದೃಶ ಪಾವಿತ್ರ್ಯತೆಯನ್ನು ಸಮಾಜ ಸೇವೆಗೆ ತಂದು ಕೊಟ್ಟಿದ್ದಾರೆ. ವೀರಶೈವ ಲಿಂಗಾಯತರ ಒಳಿತಿಗೆ ಸಾಮಾಜಿಕ ಸಂಘಟನೆ ಕಟ್ಟಿದವರು ಕುಮಾರಸ್ವಾಮಿಗಳು. ವ್ಯಕ್ತಿಗಿಂತ ಸಮಷ್ಟಿ ದೊಡ್ಡದು ಎಂಬ ಸಂದೇಶ ಸಾರಿದವರು. ಅಂತೆಯೇ ಅಖಿಲ ಭಾರತ ವೀರಶೈವ ಮಹಾಸಭಾ ಕಟ್ಟಿದರು. ಅವರ ಆಶಯಕ್ಕೆ ವಿರುದ್ಧವಾಗಿ ನಡೆಯುವ ಪ್ರಯತ್ನ ಮಾಡಬಾರದು. ಸಮಾವೇಶ ಆಯೋಜನೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ. ಮಹಾಸಭಾದ ಆಶಯಕ್ಕೆ ತಕ್ಕಂತೆ ನಡೆಯೋಣ” ಎಂದು ಮೂರುಸಾವಿರಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು

ಮೊದಲ ಏಕತಾ ಸಮಾವೇಶ: ಗುರು ವಿರಕ್ತ ಪರಂಪರೆಯ ಮಠಾಧೀಶರು ಮತ್ತು ಸ್ವಾಮೀಜಿಗಳೆಲ್ಲ ಒಂದೇ ವೇದಿಕೆಯಲ್ಲಿ ಬಂದು ವೀರಶೈವ ಲಿಂಗಾಯತರ ಒಗ್ಗಟ್ಟು ಸಾರುವ ಸಮಾವೇಶಗಳು ವಿಭಿನ್ನ ಹೆಸರು ಹಾಗೂ ವಿಭಿನ್ನ ಉದ್ದೇಶಗಳಿಂದ ಈ ಹಿಂದೆ ನಡೆದಿದ್ದವು. ಆದರೆ ಸಮಸ್ತ ಸಮಾಜ ಬಾಂಧವರ ಏಕತಾ ಸಮಾವೇಶಗಳು ನಡೆದಿರಲಿಲ್ಲ. ಜಾತಿಗಣತಿಯ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಇಂತಹ ಸಮಾವೇಶಕ್ಕೆ ಸಾಕ್ಷಿಯಾಯಿತು. ಇಂತಹ ಏಕತಾ ಸಮಾವೇಶಗಳು ಮುಂದಿನ ದಿನಗಳಲ್ಲಿ ಹೆಚ್ಚಲಿವೆ ಎಂದು ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳು ಪ್ರಕಟಿಸಿದರು.

ಏಕತಾ ಸಮಾವೇಶದಲ್ಲಿ ಭಾಗವಹಿಸಿದ ಶ್ರೀಗಳು: ಪಂಚಪೀಠಗಳ ರಂಭಾಪುರಿ ಶ್ರೀಗಳು, ಶ್ರೀಶೈಲ್ ಶ್ರೀಗಳು, ಕಾಶಿ ಶ್ರೀಗಳು, ಉಜ್ಜಿಯನಿ ಶ್ರೀಗಳು, ತುಮಕೂರು ಶ್ರೀ ಸಿದ್ಧಗಂಗಾಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ, ಶಿರಹಟ್ಟಿಯ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮೀಜಿ, ಹುಕ್ಕೇರಿ ಮಠದ ಶ್ರೀಗಳು, ಮುಂಡರಗಿ ಜಗದ್ಗುರು ನಾಡೋಜ ಡಾ.ಅನ್ನದಾನ ಮಹಾಸ್ವಾಮಿಗಳು, ಹಾಲಕೆರೆ ಜಗದ್ಗುರು ಅನ್ನದಾನ ಮಹಾಸ್ವಾಮಿಗಳು, ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಸಿಂದಗಿ ಸಾರಂಗಮಠದ ಶ್ರೀ ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ಮುಕ್ತಿಮಂದಿರದ ಶ್ರೀ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡ ಅಮರೇಶ್ವರಮಠದ ಡಾ.ನೀಲಕಂಠ ಸ್ವಾಮೀಜಿ, ಹೊಸಳ್ಳಿ ಬೂದೀಶ್ವರಮಠದ ಜಗದ್ಗುರು ಅಭಿನವ ಬೂದೀಶ್ವರ ಸ್ವಾಮೀಜಿ, ಮುರಗೋಡದ ಶ್ರೀ ನೀಲಕಂಠ ಸ್ವಾಮೀಜಿ, ಕಮತಗಿಯ ಶ್ರೀ ಹುಚ್ಚೇಶ್ವರ ಸ್ವಾಮೀಜಿ, ಅಮೀನಗಡದ ಶ್ರೀ ಶಂಕರರಾಜೇಂದ್ರ ಸ್ವಾಮೀಜಿ, ಗಂಗಾವತಿ ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ, ಗದಗ ಶಿವಾನಂದ ಮಠದ ಜಗದ್ಗುರುಗಳು, ಶ್ರೀ ದಿಂಗಾಲೇಶ್ವರ ಶ್ರೀಗಳು ಸೇರಿದಂತೆ ಸಾವಿರಾರು ಶ್ರೀಗಳು ಭಾಗವಹಿಸಿದ್ದರು.

ಭಾಗವಹಿಸಿದ ಜನಪ್ರತಿನಿಧಿಗಳು: ಮಾಜಿ ಸಿಎಂಗಳು ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಸಚಿವರಾದ ಈಶ್ವರ ಖಂಡ್ರೆ, ಶರಣಬಸಪ್ಪ ದರ್ಶನಾಪುರ, ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ, ಶಾಸಕರಾದ ವಿಜಯಾನಂದ ಕಾಶಪ್ಪನವರ, ಬಾಬಾಸಾಹೇಬ ಪಾಟೀಲ, ಬಸನಗೌಡ ತುರವಿಹಾಳ, ತಮ್ಮಯ್ಯ, ಲತಾ ಮಲ್ಲಿಕಾರ್ಜುನ, ಚನ್ನರಾಜ ಹಟ್ಟಿಹೊಳಿ, ಪ್ರದೀಪ ಶೆಟ್ಟರ್, ಅಮರೇಗೌಡ ಬಯ್ಯಾಪುರ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮುಖಂಡರಾದ ಮಹಾಂತೇಶ ಕವಟಗಿಮಠ, ವೀರಣ್ಣ ಚರಂತಿಮಠ, ಶಂಕರ ಬಿದರಿ, ಶಂಕರಣ್ಣ ಮುನವಳ್ಳಿ, ವೀಣಾ ಕಾಶಪ್ಪನವರ, ಸಂಕಲ್ಪ ಶೆಟ್ಟರ್, ಶಿವಲೀಲಾ ಕುಲಕರ್ಣಿ, ಸೀಮಾ ಮಸೂತಿ, ನಾಗರಾಜ ಗೌರಿ, ಮಲ್ಲಿಕಾರ್ಜುನ ಸಾವಕರ್, ಸದಾನಂದ ಡಂಗನವರ ಸೇರಿದಂತೆ 200 ಕ್ಕೂ ಜನಪ್ರತಿನಿಧಿಗಳು ಇದ್ದರು.

Previous articleಏಷ್ಯಾಕಪ್‌ ಕ್ರಿಕೆಟ್‌: ಸಂಜು ಸ್ಯಾಮ್ಸನ್ ಅರ್ಧಶತಕ, ಭಾರತ ಬೃಹತ್‌ ಮೊತ್ತ

LEAVE A REPLY

Please enter your comment!
Please enter your name here