ಭಾರತೀಯ ಜಾವೆಲಿನ್ ತಾರೆ ಹಾಗೂ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಿರಾಶಾದಾಯಕ ಎಂಟನೇ ಸ್ಥಾನ ಪಡೆದು ಈ ಋತುವನ್ನು ಕೊನೆಗೊಳಿಸಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿದ್ದರೂ, ಚೋಪ್ರಾ ತಮ್ಮ ವೈಫಲ್ಯಕ್ಕೆ ಇದನ್ನು ಕಾರಣ ಎಂದು ಹೇಳಿಕೊಂಡಿಲ್ಲ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಬಲವಾಗಿ ಮರಳುವ ಭರವಸೆಯನ್ನು ನೀಡಿದ್ದಾರೆ.
ಗುರುವಾರ ಟೋಕಿಯೊದಲ್ಲಿ ನಡೆದ ಫೈನಲ್‌ನಲ್ಲಿ ಚೋಪ್ರಾ ಕೇವಲ 84.03 ಮೀಟರ್ ಎಸೆತ ದಾಖಲಿಸಿ ಹೊರಗುಳಿಯಬೇಕಾಯಿತು. “ಈ ರೀತಿಯಾಗಿ ಋತುವನ್ನು ಮುಗಿಸಬೇಕೆಂದು ನಾನು ನಿರೀಕ್ಷಿಸಿರಲಿಲ್ಲ. ಭಾರತಕ್ಕಾಗಿ ಉತ್ತಮ ಪ್ರದರ್ಶನ ನೀಡಲು ಬಯಸಿದ್ದೆ, ಆದರೆ ಅದು ನನ್ನ ರಾತ್ರಿ ಆಗಿರಲಿಲ್ಲ,” ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಚಿನ್ ಯಾದವ್ ಸಾಧನೆ ಕುರಿತು ಶ್ಲಾಘನೆ: ಚೋಪ್ರಾ ತನ್ನ ಶಿಷ್ಯನಾದ ಸಚಿನ್ ಯಾದವ್ ಅವರ ಸಾಧನೆಯನ್ನು ಶ್ಲಾಘಿಸಿರುವ ನೀರಜ್. ಸಚಿನ್ 86.27 ಮೀಟರ್ ಎಸೆತದೊಂದಿಗೆ ನಾಲ್ಕನೇ ಸ್ಥಾನ ಪಡೆದರು. “ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿ ಪದಕದ ಹಂತಕ್ಕೆ ಬಂದಿರುವ ಸಚಿನ್ ಬಗ್ಗೆ ಹೆಮ್ಮೆ ಇದೆ ಈ ಕುರಿತಂತೆ ನನಗೆ ಸಂತೋಷವಾಗಿದೆ,” ಎಂದು ಚೋಪ್ರಾ ಹೇಳಿದರು.
ಫೈನಲ್‌ನಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶೋರ್ನ್ ವಾಲ್ಕಾಟ್ 88.16 ಮೀಟರ್ ಎಸೆತದೊಂದಿಗೆ ಚಿನ್ನದ ಪದಕ ಗೆದ್ದರು. ಗ್ರೆನಡಾದ ಆಂಡರ್ಸನ್ ಪೀಟರ್ಸ್ (87.38 ಮೀ) ಬೆಳ್ಳಿ ಮತ್ತು ಅಮೆರಿಕದ ಕರ್ಟಿಸ್ ಥಾಂಪ್ಸನ್ (86.67 ಮೀ) ಕಂಚಿನ ಪದಕ ಪಡೆದರು.
27 ವರ್ಷದ ನೀರಜ್ ಚೋಪ್ರಾ ತನ್ನ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ, “ನಿಮ್ಮೆಲ್ಲರ ಬೆಂಬಲ ನನಗೆ ಶಕ್ತಿ ನೀಡುತ್ತದೆ. ಇನ್ನಷ್ಟು ಬಲವಾಗಿ ಮರಳುವ ಭರವಸೆ ನೀಡುತ್ತೇನೆ,” ಎಂದು ಹೇಳಿದ್ದಾರೆ.