ಬಳ್ಳಾರಿ: ಬೇನಾಮಿ ಹೆಸರಲ್ಲಿ ವ್ಯವಹಾರ ನಡೆಸಿ, ಸರಕಾರಕ್ಕೆ ಪಾವತಿಸಬೇಕಾದ ಕೋಟ್ಯಂತರ ರೂ. ಜಿಎಸ್‌ಟಿ ವಂಚನೆ ಮಾಡಿರುವ ಮತ್ತಷ್ಟು ಪ್ರಕರಣಗಳು ಬಳ್ಳಾರಿಯಲ್ಲಿ ಬೆಳಕಿಗೆ ಬಂದಿವೆ.
ಬಳ್ಳಾರಿ ನಗರದಲ್ಲಿನ ಸರಕು ಮತ್ತು ಸೇವಾ ತೆರಿಗೆ ಬೇಹುಗಾರಿಕೆಯ ಪ್ರಾದೇಶಿಕ ಕಚೇರಿ ಅಧಿಕಾರಿಗಳು ನೆರೆಯ ಆಂಧ್ರದಲ್ಲಿ ನಡೆದ ಬಹುಕೋಟಿ ಜಿಎಸ್ಟಿ ವಂಚನೆ ಜಾಲ ಬೇಧಿಸಿ, ತನಿಖೆ ಕಾರ್ಯ ಆರಂಭಿಸಿದ್ದಾರೆ.
ಏನಿದು ಪ್ರಕರಣ?: ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪ್ರೊದ್ದಟೂರು (ಪೊದ್ದಟೂರು) ಪಟ್ಟಣದ 600 ಜನರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಬಳಸಿ ಜಿಎಸ್‌ಟಿ ಮೋಸ ಮಾಡಲಾಗಿದೆ. ದತ್ತಾತ್ರೇಯ ಟ್ರೇಡರ್ಸ್ ಹೆಸರಲ್ಲಿ ಮಂಗಲಿ ನಾಗರಾಜ್ ಎಂಬುವವರು 2024-25ನೇ ಸಾಲಿನಲ್ಲಿ 26 ಕೋಟಿ ರೂ. ವ್ಯವಹಾರ ಮಾಡಿ. 2.2 ಕೋಟಿ ರೂ. ಜಿಎಸ್‌ಟಿ ವಂಚನೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಈ ಕುರಿತು ಜಿಎಸ್ಟಿ ತನಿಖಾ ಕಚೇರಿಯ ಅಧಿಕಾರಿಗಳು ನೋಟೀಸ್ ನೀಡಿ, ವ್ಯವಹಾರದ ದಾಖಲೆಗಳನ್ನು ಸಲ್ಲಿಸಿ ಎಂದು ಸೂಚನೆ ನೀಡಿದ್ದಾರೆ. ವಾಸ್ತವದಲ್ಲಿ ಮಂಗಲಿ ನಾಗರಾಜ್ ಬಡ ಕುಟುಂಬದ ವ್ಯಕ್ತಿ. ಆದರೆ ಇವರ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಬಳಸಿಕೊಳ್ಳಲಾಗಿದೆ. ಹೇಗಾಯ್ತು ಎನ್ನುವ ಅಧಿಕಾರಿಗಳ ಪ್ರಶ್ನೆಗೆ ಕಂಗಾಲಾಗಿದ್ದಾರೆ.
ಆಂಧ್ರದಲ್ಲಿ ಜಗನ್ ಅವರು ಅಧಿಕಾರದಲ್ಲಿದ್ದಾಗ, ವಾಲೆಂಟರಿಗಳಾಗಲು ಆಧಾರ್ ಕಾರ್ಡ್, ಪಾನ್ ಕಾರ್ಡ್ ಕೊಡಲಾಗಿತ್ತು. ಅದರ ದುರ್ಬಳಕೆ ಆಗಿರಬೇಕು, ಈ ಬಗ್ಗೆ ತನಿಖೆ ಮಾಡಿ ಎಂದು ಪೊಲೀಸರಿಗೆ ನಾಗರಾಜ ಮನವಿ ಮಾಡಿಕೊಂಡಿದ್ದಾರೆ. ಹೀಗೆ ಹಲವು ಜನರ ಹೆಸರಿನಲ್ಲಿ ಬೇನಾಮಿ ವ್ಯವಹಾರ ನಡೆಸಿ ಕೋಟ್ಯಂತರ ವಂಚನೆಯಾಗಿದ್ದು, ತನಿಖೆಯಿಂದಷ್ಟೇ ವಿವರ ಬಯಲಾಗಬೇಕಿದೆ.