ಸಂಪಾದಕೀಯ: ಯುಕೆಪಿ ರೈತರಿಗೆ ಪರಿಹಾರ ತ್ವರಿತಗತಿಯ ವಿತರಣೆ ಅಗತ್ಯ

0
7

ಸಂಯುಕ್ತ ಕರ್ನಾಟಕ ಪತ್ರಿಕೆ ಗುರುವಾರದ ಸಂಪಾದಕೀಯ

ಯುಕೆಪಿ ರೈತರಿಗೆ ಮುಳುಗಡೆ ಪ್ರದೇಶ ಮತ್ತು ಕಾಲುವೆಗೆ ಹೋಗುವ ಭೂಮಿಗೆ ಪರಿಹಾರ ನೀಡಲು ಸರ್ಕಾರ ತೀರ್ಮಾನ ಕೈಗೊಂಡಿರುವುದಕ್ಕೆ ಬಹುತೇಕ ಅನುಮೋದನೆ ದೊರಕಿದೆ. ಒಬ್ಬರು ಶಾಸಕರು ಮಾತ್ರ ವಿರೋಧಿಸಿದ್ದಾರೆ. ಈಗ ರೈತರು ಬಯಸುತ್ತಿರುವುದು ಪರಿಹಾರ ಧನವನ್ನು ತ್ವರಿತಗತಿಯಲ್ಲಿ ವಿತರಣೆ ಮಾಡಬೇಕು. ಇದಕ್ಕಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸುವುದಾಗಿ ಸರ್ಕಾರ ತಿಳಿಸಿದೆ. ಅದರ ಸ್ವರೂಪವನ್ನು ಜನರ ಮುಂದಿಟ್ಟಿಲ್ಲ.

ಒಟ್ಟು 70 ಸಾವಿರ ಕೋಟಿ ರೂ. ಒದಗಿಸುವುದು ಕಷ್ಟ. ಅದಕ್ಕಾಗಿ ಪ್ರತ್ಯೇಕ ಸಾಲದ ವ್ಯವಸ್ಥೆ ಮಾಡುವುದು ಒಳಿತು. ಸರ್ಕಾರ ಇದಕ್ಕಾಗಿ ಬೇಕಾದಲ್ಲಿ ಬಾಂಡ್‌ಗಳನ್ನು ಬಿಡುಗಡೆ ಮಾಡಬಹುದು. ರೈತರು ಈಗ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಮುಳುಗಡೆ ಭೂಮಿಯನ್ನು ಮಾರಾಟ ಮಾಡುವಂತಲ್ಲ. ಮಾಡಿದ ಸಾಲ ತೀರಿಸಲು ಹಣವಿಲ್ಲ. ಬಡ್ಡಿಯ ಮೇಲೆ ಬಡ್ಡಿ ಅಧಿಕಗೊಳ್ಳುತ್ತಿದೆ.

ರೈತರ ಬವಣೆ ಬಗೆಹರಿಯಬೇಕು ಎಂದರೆ ಸರ್ಕಾರ ಕೂಡಲೇ ಪರಿಹಾರದ ಮೊತ್ತದಲ್ಲಿ ಅರ್ಧ ಭಾಗವನ್ನು ರೈತರಿಗೆ ಕೊಟ್ಟುಉಳಿದ ಹಣವನ್ನು ನಿಗದಿತ ಕಂತುಗಳಲ್ಲಿ ವಿತರಣೆ ಮಾಡಬೇಕು. 6 ತಿಂಗಳಲ್ಲಿ ಈ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕು. ಆಗ ರೈತರಿಗೆ ಕೊಟ್ಟ ಪರಿಹಾರ ಅವರ ಬದುಕನ್ನು ಹಸನುಗೊಳಿಸುತ್ತದೆ. ಈಗ ಪರಿಹಾರ ಘೋಷಣೆ ಆಗಿದೆ. ಹಣ ನೀಡಲು ವಿಳಂಬ ಮಾಡಿದರೆ ರೈತರು ಮಾಡಿರುವ ಸಾಲದ ಮೇಲಿನ ಬಡ್ಡಿ ಮಾತ್ರ ಅಧಿಕಗೊಳ್ಳುತ್ತ ಹೋಗುತ್ತದೆ.

ಕೃಷ್ಣಾ ಮೇಲ್ದಂಡೆ ಯೋಜನೆ ಉತ್ತರ ಕರ್ನಾಟಕದ 5 ಜಿಲ್ಲೆಗಳ ಜೀವನಾಡಿ. ಲಕ್ಷಾಂತರ ರೈತರಿಗೆ ಅನ್ನ ಕೊಡುವ ತಾಣ. ಒಟ್ಟು 6.22 ಲಕ್ಷ ಹೆಕ್ಟೇರ್ ನೀರಾವರಿ. ಕುಡಿಯಲು ನೀರಿಲ್ಲದ ಪ್ರದೇಶಗಳಿಗೆ ಕೃಷ್ಣೆ ಹರಿಯುತ್ತಿದ್ದಾಳೆ ಎಂದರೆ ಸಂತಸ ಪಡುವ ಸಂಗತಿ. ಈಗಾಗಲೇ ಎರಡು ಹಂತಗಳು ಮುಕ್ತಾಯಗೊಂಡಿವೆ. ಮೂರನೇ ಹಂತಕ್ಕೆ ಒಟ್ಟು 71,036 ಎಕರೆ ಭೂಸ್ವಾಧೀನವಾಗಬೇಕು. ರೈತರು ಭೂಮಿ ಬಿಟ್ಟುಕೊಡಲು ಸಿದ್ಧರಾಗಿದ್ದಾರೆ.

ಹಿಂದೆ ಕಡಿಮೆ ಹಣದಲ್ಲಿ ಯೋಜನೆಗಳು ಕಾರ್ಯಗತವಾಗುತ್ತಿದ್ದವು. ಈಗ ಎಲ್ಲವೂ ದುಬಾರಿಯಾಗಿರುವುದರಿಂದ ಭೂಸ್ವಾಧೀನ ಪರಿಹಾರದ ಮೊತ್ತ ಅಧಿಕಗೊಂಡಿದೆ. ನ್ಯಾಯಾಲಯಕ್ಕೆ ಹೋದರೆ ಯೋಜನೆ ವಿಳಂಬವಾಗುವುದಲ್ಲದೆ ನ್ಯಾಯಾಲಯ ಕೆಲವು ಪ್ರಕರಣಗಳಲ್ಲಿ 22 ಕೋಟಿ ರೂ. ಪರಿಹಾರ ನೀಡುವಂತೆ ಹೇಳಿದೆ. ಇದನ್ನು ನೋಡಿ ಸರ್ಕಾರ ಗಾಬರಿ ಗೊಂಡಿರುವುದಂತೂ ನಿಜ.

ಹಿಂದುಳಿದ ಪ್ರದೇಶದಲ್ಲಿ ಸರ್ಕಾರದ ಪಾತ್ರ ಬಹಳ ದೊಡ್ಡದು. ಅಲ್ಲಿಯ ಜನ ಬಹುತೇಕ ಬಡವರು. ಅವರಿಗೆ ನದಿ ಪಕ್ಕದಲ್ಲೇ ಹರಿದು ಅದನ್ನು ತಮ್ಮ ಹೊಲಕ್ಕೆ ಹರಿಸಿಕೊಳ್ಳುವ ಸಾಮರ್ಥ್ಯ ಇಲ್ಲ. ಸರ್ಕಾರದ ನೆರವು ಅಗತ್ಯ. ನೀರು ನಿಲ್ಲುವುದರಿಂದ ಸಾವಿರಾರು ಜನ ಭೂಮಿ ಕಳೆದುಕೊಳ್ಳುತ್ತಾರೆ. ಅವರ ಜೀವನ ಹಾಳಾಗದಂತೆ ಎಚ್ಚರವಹಿಸುವುದು ಅಗತ್ಯ.

5 ಜಿಲ್ಲೆಗಳ ರೈತರ ಬದುಕಿನಲ್ಲಿ ಬೆಳಕಾಗುವ ಯೋಜನೆ ಬಾಗಲಕೋಟೆಯ ಮುಳುಗಡೆ ರೈತರ ಜೀವನವನ್ನೂ ಹಾಳುಮಾಡದಂತೆ ನೋಡಿಕೊಳ್ಳಬೇಕು. ಬಿಜೆಪಿ ಸರ್ಕಾರ ಇದ್ದಾಗ ಒಣ ಭೂಮಿ ಎಕರೆಗೆ 20 ಲಕ್ಷ ರೂ. ನೀರಾವರಿಗೆ 24 ಲಕ್ಷರೂ ಎಂದು ನಿಗದಿಪಡಿಸಿತ್ತು. ಅದನ್ನು ಪ್ರಶ್ನಿಸಿ ಬಹುತೇಕ ರೈತರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ನ್ಯಾಯಾಲಯ ಹೆಚ್ಚಿನ ಪರಿಹಾರ ಸೂಚಿಸಿದೆ.

ಈಗ ಸರ್ಕಾರ ರೈತರೊಂದಿಗೆ ಚರ್ಚಿಸಿ ಒಣ ಭೂಮಿಗೆ ಎಕರೆಗೆ 30 ಲಕ್ಷ ರೂ, ನೀರಾವರಿಗೆ 40 ಲಕ್ಷ ರೂ ನೀಡಲು ಮುಂದೆ ಬಂದಿದೆ. ಸಮಸ್ಯೆ ಬಗೆಹರಿಸುವುದರಲ್ಲಿ ಒಂದು ದಿಟ್ಟ ಹೆಜ್ಜೆ ಇಟ್ಟಂತೆ ಆಗಿದೆ. ರೈತರಿಗೆ ಕೊಟ್ಟ ಹಣ ಸ್ವಿಸ್ ಬ್ಯಾಂಕ್‌ಗೆ ಹೋಗೋಲ್ಲ. ನಮ್ಮಲ್ಲೇ ಬಂಡವಾಳವಾಗಿ ಹೂಡಿಕೆಯಾಗಿ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಡಾ. ನಂಜುಂಡಪ್ಪ ತಮ್ಮ ವರದಿಯಲ್ಲೂ ಪ್ರಾದೇಶಿಕ ಅಸಮಾನತೆ ನಿವಾರಣೆ ಈ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ನಮ್ಮ ದೇಶದಲ್ಲಿ ಕೃಷಿಯೊಂದೇ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡುವುದು ಎಂಬುದನ್ನು ಮರೆಯಬಾರದು. ಆಲಮಟ್ಟಿಯ ಗೇಟ್ ಎತ್ತರಕ್ಕೆ ಮಹಾರಾಷ್ಟ್ರ ತಕರಾರು ಎತ್ತಿದ್ದರೂ ನ್ಯಾಯಾಲಯದ ಮೂಲಕ ಪರಿಹಾರ ಪಡೆಯಬಹುದು.

ಕೃಷ್ಣಾ, ಭೀಮ, ತುಂಗಭದ್ರಾ ಸೇರಿದಂತೆ ಎಲ್ಲ ನದಿಗಳ ಒಂದು ಹನಿನೀರು ವ್ಯರ್ಥವಾಗದಂತೆ ಬಳಸಿಕೊಂಡಲ್ಲಿ ಉತ್ತರ ಕರ್ನಾಟಕ ರೈತರು ಇಡೀ ಕರ್ನಾಟಕ ಎಲ್ಲ ಜನರಿಗೆ ತೃಪ್ತಿಯಾಗುವಂತೆ ಅನ್ನ ಬೆಳೆದುಕೊಡುವುದರಲ್ಲಿ ಹಿಂದೆ ಬೀಳುವುದಿಲ್ಲ. ಅವರು ಉದಾರಿಗಳು. ಬೇರೆಯವರಿಗೆ ಕೊಟ್ಟು ಗೊತ್ತಿದೆಯೇ ಹೊರತು ಬೇರೆಯವರ ಪಾಲನ್ನು ಕಿತ್ತುಕೊಳ್ಳುವುದು ಉತ್ತರ ಕರ್ನಾಟಕದವರಿಗೆ ಗೊತ್ತಿಲ್ಲ. ಈಗ ಸರ್ಕಾರ ನಗದು ರೂಪದಲ್ಲಿ ರೈತರಿಗೆ ನೆರವು ನೀಡಿದಲ್ಲಿ ಬಡರೈತರ ಮುಖದಲ್ಲಿ ಮಂದಹಾಸ ಮೂಡಲಿದೆ.

ನೀರಾವರಿ ಅಧಿಕಗೊಂಡಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಕೃಷಿ ಆಧರಿತ ಕೈಗಾರಿಕೆಗಳು ತಲೆಎತ್ತಲಿವೆ. ಈಗ ಮೂಲಭೂತ ಸವಲತ್ತು ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆ. ನೀರಾವರಿ ಸವಲತ್ತು ಅಧಿಕಗೊಂಡಲ್ಲಿ ಉಳಿದ ಬೆಳವಣಿಗೆ ತಂತಾನೇ ಬರುವುದರಲ್ಲಿ ಸಂದೇಹವಿಲ್ಲ. ಉತ್ತರ ಕರ್ನಾಟಕದಿಂದ ಬಂದ ಸಚಿವರು ಮತ್ತು ಶಾಸಕರು ಆಸಕ್ತಿವಹಿಸಿ ರೈತರ ಪರಿಹಾರ ಶೀಘ್ರವಾಗಿ ವಿತರಣೆಯಾಗುವಂತೆ ನೋಡಿಕೊಳ್ಳಬೇಕು.

Previous articleಬಳ್ಳಾರಿಗೆ ತಪ್ಪಿದ 60,000 ಕೋಟಿ ರೂ. ಬಂಡವಾಳ: ಆರ್ಸೆಲರ್ ಮಿತ್ತಲ್ ಆಂಧ್ರಕ್ಕೆ ಶಿಫ್ಟ್!
Next articleಮಾಲೂರು: ನಾನೇ ಗೆದ್ದು ಇನ್ನೊಂದು ಕೇಸು ಹಾಕುವೆ

LEAVE A REPLY

Please enter your comment!
Please enter your name here