ಮೂಡುಬಿದಿರೆ: ಪ್ರವಾಸಿ ಪ್ರಿಯರ ತಾಣವಾಗಿರುವ ಮೂಡುಬಿದಿರೆಯ ಕೊಣಾಜೆಕಲ್ಲಿನಲ್ಲಿ ಬುಧವಾರ ದುರ್ಘಟನೆ ನಡೆದಿದೆ. ಪುತ್ತೂರು ತಾಲೂಕಿನ ಬೆಟ್ಟಂಪ್ಪಾಡಿ ನಡುವಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಮನೋಜ್ ಎನ್ (25) ಟ್ರಕ್ಕಿಂಗ್‌ಗೆ ತೆರಳಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಮೂಡುಬಿದಿರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಯುವಕರು ಹಾಗೂ ಪ್ರವಾಸಿಗರು ಸಾಹಸಮಯ ಟ್ರಕ್ಕಿಂಗ್ ಹಾಗೂ ಪ್ರವಾಸಕ್ಕಾಗಿ ಆಗಾಗ್ಗೆ ಭೇಟಿ ನೀಡುತ್ತಾರೆ. ಇದೇ ಹಿನ್ನೆಲೆ ಮನೋಜ್ ಸಹ ಸ್ನೇಹಿತರೊಂದಿಗೆ ಕೊಣಾಜೆಕಲ್ಲಿಗೆ ಭೇಟಿ ನೀಡಿದ್ದನು. ಆದರೆ ಅಕಸ್ಮಿಕವಾಗಿ ಎದೆನೋವು ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ನೆಲಕ್ಕುರುಳಿದ್ದಾನೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ತಕ್ಷಣ ಅವನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ, ಆತ ಬದುಕುಳಿಯಲಿಲ್ಲ. ವೈದ್ಯಕೀಯ ಪರಿಶೀಲನೆಯಲ್ಲಿ ಹೃದಯಾಘಾತವೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕನ ಅಕಾಲಿಕ ಸಾವು ಕುಟುಂಬ ಮತ್ತು ಹಳ್ಳಿಯಲ್ಲಿ ಶೋಕದ ಛಾಯೆ ಮೂಡಿಸಿದೆ. ಸ್ನೇಹಪರ ಸ್ವಭಾವದವನಾಗಿದ್ದ ಮನೋಜ್ ನಿಧನದ ಸುದ್ದಿ ಸ್ಥಳೀಯರನ್ನೇ ಬೆಚ್ಚಿಬೀಳಿಸಿದೆ.
ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ವೈದ್ಯರು ಆರೋಗ್ಯದ ಮೇಲೆ ಹೆಚ್ಚಿನ ಗಮನ ನೀಡುವಂತೆ ಎಚ್ಚರಿಕೆ ನೀಡಿದ್ದಾರೆ.