ಮಂಗಳೂರು: ಗೇಲ್ ಕಂಪೆನಿ ತೋಡಿದ ಹೊಂಡಕ್ಕೆ ಸೂಕ್ತ ಮುಚ್ಚಳ ಮಾಡದೇ ದಿವ್ಯ ನಿರ್ಲಕ್ಷ ತೋರಿದ ಕಾರಣಕ್ಕೆ ನಾಯಿಯೊಂದು ಆ ಹೊಂಡಕ್ಕೆ ಬಿದ್ದು ಮೇಲೇಳಲಾಗದೆ ಯಾತನೆ ಅನುಭವಿಸುತ್ತಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸದಾ ಅಗೆತಗಳು ಜಾರಿಯಲ್ಲಿರುವ ನಗರ ಎಂದು ಪ್ರಖ್ಯಾತಿ ಮತ್ತು ಕುಖ್ಯಾತಿಗಳೊಂದಿಗೆ ಲೇವಡಿಗೊಳಗಾಗುತ್ತಿರುವ ನಗರವೇ ಸ್ಮಾರ್ಟ್ ಸಿಟಿ ಮಂಗಳೂರು.
ಕಾಂಕ್ರೀಟ್ ಹಾಕಿದ ಬೆನ್ನಲ್ಲೆ ಮತ್ತೆ ಅದನ್ನು ಅಗೆದು ಹಾಕಿ ರಸ್ತೆ ಹಾಳು ಮಾಡುವ ಘನ ಮಾನ್ಯ ಇಂಜಿನಿಯರುಗಳು, ಅಧಿಕಾರಿಗಳು ಮತ್ತು ಅವರೊಂದಿಗೆ ಕೈಜೋಡಿಸುವ ಜನಪ್ರತಿನಿಧಿಗಳು ಇರುವ ನಗರ ಎಂಬ ಅಭಿದಾನವನ್ನು ಇದು ಜನಮನದಲ್ಲಿ ಪಡೆದಿದೆ. ಇಂತೆಂಬ ಮಂಗಳೂರಿನಲ್ಲಿ ಗೇಲ್ ಕಂಪೆನಿ ತೆಗೆದಿಟ್ಟ ಪೈಪ್ ಲೈನ್ ಹೊಂಡಕ್ಕೆ ನಾಯಿ ಬಿದ್ದಿದೆ. ಮೇಲೇಳಲಾರದ ಅದಕ್ಕೆ ಯಾರೋ ಪುಣ್ಯಾತ್ಮರು ಬಿಸ್ಕೇಟು ಹಾಕಿದ್ದಾರೆ. ಆದರೆ ನಾಯಿಗೆ ಅದನ್ನು ತಿನ್ನಲು ಸಾಧ್ಯವಾಗಿಲ್ಲ.
ಮಂಗಳೂರಿನ ಮಲ್ಲಿಕಟ್ಟೆ ಮಾರುಕಟ್ಟೆ ಬಳಿ ಮುಚ್ಚದೆ ಬಿಟ್ಟ ಗೇಲ್ ಕಂಪೆನಿ ಹೊಂಡದ ಬಳಿ ಪ್ರಾಣಿ ದಯಾ ಸಂಘದ ವಾಹನದೊಂದಿಗೆ ಬಂದ ಕಾರ್ಯಕರ್ತರು ಅದನ್ನು ರಕ್ಷಿಸಿದ್ದಾರೆ. ಅಂತೂ ಮಂಗಳೂರು ನಾಯಿಗಳಿಗೂ ಸುರಕ್ಷಿತವಲ್ಲ! ಪ್ರಾಣಿ ದಯಾ ಸಂಘದ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ಇಂತಿಪ್ಪ ನಾಯಿ ಒಂದೇ ಒಂದು ಸಾರಿಯೂ ಬೊಗಳದೆ ಅತ್ಯಂತ ನಿರ್ಲಿಪ್ತವಾಗಿ ಬಾಲ ಅಲ್ಲಾಡಿಸಿಕೊಂಡು ಹೋಯಿತು.
ಬೊಗಳುವ ತನ್ನ ಜನ್ಮ ಸಿದ್ದ ಹಕ್ಕನ್ನು ಅದು ತ್ಯಾಗ ಮಾಡಿರುವುದಕ್ಕೆ ಮುಖ್ಯ ಕಾರಣ ತನ್ನ ಬಾಲದಂತೆ ಈ ಅಧಿಕಾರಿಗಳು ಈ ಜನ್ಮದಲ್ಲಿ ಸರಿ ಆಗಲಾರರು ಎಂಬ ನಿಲುವನ್ನು ಅದು ಹೊಂದಿರಬಹುದೆಂದು ವಿಶ್ಲೇಷಿಸಲಾಗುತ್ತಿದೆ.