ಕಲಬುರಗಿ: ರಾಜ್ಯದಲ್ಲಿನ ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಬೆಳೆ ಸಾಲ ಮನ್ನಾ ಬಗ್ಗೆ ಪರಿಶೀಲಿಸುವೆ ಎಂದು ಮುಖ್ಯಮಂತ್ರಿ ಸಿದ್ದಾರಾಮಯ್ಯ ಹೇಳಿದ್ದಾರೆ. ಕಲಬುರಗಿಯಲ್ಲಿ ಬುಧವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಕಳೆದ ಬಾರಿ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಯಿತು: ಎನ್‌ಡಿಆರ್‌ಎಫ್ ನಿಧಿಯಡಿ ಬೆಳೆ ಪರಿಹಾರ ನೀಡುವಂತೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅನೇಕ ಬಾರಿ ಮನವಿ ಮಾಡಲಾಗಿದ್ದು, ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕಳೆದ ಬಾರಿಯ ಬೆಳೆ ಪರಿಹಾರ ಬಗ್ಗೆ ಸುಪ್ರೀಂಕೋರ್ಟ್ ಮೊರೆ ಹೋಗಿ ಪಡೆಯಬೇಕಾಯಿತು ಎಂದರು.
ರಾಜ್ಯದಲ್ಲಿ ಈ ಬಾರಿ ಅದೃಷ್ಟವಶಾತ್ ಒಳ್ಳೆಯ ಮಳೆಯಾಗಿದೆ. ವಾಡಿಕೆಗಿಂತ ಶೇ.4 ರಷ್ಟು ಹೆಚ್ಚು ಮಳೆಯಾಗಿದೆ. ಈಗಾಗಲೇ ಹಾನಿಗೀಡಾದ ಪ್ರದೇಶದಲ್ಲಿ ಬೆಳೆ ಜಂಟಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಒಂದು ವಾರದಲ್ಲಿ ಬೆಳೆ ಪರಿಹಾರ ವಿತರಣೆ ಆಗಲಿದೆ. ವಿಶೇಷವಾಗಿ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಾನಿಯಾಗಿದೆ ಎಂದು ಹೇಳಿದರು.
ಯಾದಗಿರಿ ಅನ್ನಭಾಗ್ಯ ಅಕ್ಕಿ ಕೇಸ್ ಸಿಐಡಿಗೆ: ಯಾದಗಿರಿ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆ ಅಡಿ ವಿತರಿಸಲಾದ ಅಕ್ಕಿ ವಿದೇಶಿ ರಫ್ತು ಆಗಿರುವ ಬಗ್ಗೆ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.
ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ: ವಿಜಯಪುರ ಜಿಲ್ಲೆಯ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಕಾರ್ ಪತ್ತೆಯಾಗಿದೆ. ಈಗ ವಿಜಯಪುರ ಜಿಲ್ಲೆಯ ಎಸ್.ಪಿ ದೂರವಾಣಿ ಕರೆ ಮಾಡಿ ಆರೋಪಿಗಳಿಗೆ ಶೀಘ್ರ ಬಂಧಿಸಯವಂತೆ ಸೂಚನೆ ನೀಡಿದ್ದೇನೆ ಎಂದರು.