ಬೆಂಗಳೂರ ARM: ವಿಶ್ವದ ಅತ್ಯಾಧುನಿಕ 2nm ಚಿಪ್ ವಿನ್ಯಾಸಗೊಳಿಸಲಿದೆ

0
45

ಬೆಂಗಳೂರು : ಭಾರತದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರದ ಹೊಸ ಅಧ್ಯಾಯ ಆರಂಭವಾಗಿದೆ. ಬ್ರಿಟಿಷ್ ಮೂಲದ ಪ್ರಸಿದ್ಧ ಸೆಮಿಕಂಡಕ್ಟರ್ ಸಂಸ್ಥೆ ARM ತನ್ನ ಹೊಸ ಕಚೇರಿಯನ್ನು ಬೆಂಗಳೂರಿನಲ್ಲಿ ಮಂಗಳವಾರ ಅಧಿಕೃತವಾಗಿ ಉದ್ಘಾಟಿಸಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಭಾಗವಹಿಸಿ, ಭಾರತದಲ್ಲಿ ಮುಂದಿನ ತಲೆಮಾರಿನ 2 ನ್ಯಾನೋಮೀಟರ್ (nm) ಚಿಪ್‌ಗಳ ವಿನ್ಯಾಸ ಕಾರ್ಯಗಳು ಈ ಕಚೇರಿಯಲ್ಲಿ ನಡೆಯಲಿವೆ ಎಂದು ಘೋಷಿಸಿದರು.

ಏನು ವಿಶೇಷ 2nm ಚಿಪ್‌ಗಳಲ್ಲಿ?: ಇವು ಅತಿ ಸೂಕ್ಷ್ಮ, ವೇಗವಾದ ಮತ್ತು ಶಕ್ತಿಸಮರ್ಥ ಚಿಪ್‌ಗಳು. AI ಸರ್ವರ್‌ಗಳು, ಡ್ರೋನ್‌ಗಳು, ಸ್ಮಾರ್ಟ್‌ಫೋನ್‌ಗಳು ಹಾಗೂ ಇತರ ಹೈ-ಟೆಕ್ ಸಾಧನಗಳಿಗೆ ಶಕ್ತಿ ತುಂಬಲು ಬಳಸಲಾಗುತ್ತದೆ. ವಿಶ್ವದ ತಂತ್ರಜ್ಞಾನ ದಿಗ್ಗಜ ರಾಷ್ಟ್ರಗಳೇ ಇನ್ನಷ್ಟೇ 2nm (nanometer chips) ತಂತ್ರಜ್ಞಾನವನ್ನು ಆವಿಷ್ಕರಿಸುತ್ತಿರುವ ಸಮಯದಲ್ಲಿ, ಭಾರತವು ಈ ಕ್ಷೇತ್ರದಲ್ಲಿ ನೇರವಾಗಿ ಪಾದಾರ್ಪಣೆ ಮಾಡುತ್ತಿರುವುದು ಮಹತ್ವದ್ದಾಗಿದೆ.

ಭಾರತದ ಸೆಮಿಕಂಡಕ್ಟರ್ ಕನಸು: ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಮಿಷನ್‌ನ ಭಾಗವಾಗಿ, ಭಾರತವನ್ನು ಸೆಮಿಕಂಡಕ್ಟರ್ ಹಬ್ ಆಗಿ ರೂಪಿಸುವ ಗುರಿ ಹೊಂದಿದೆ. ಅಶ್ವಿನಿ ವೈಷ್ಣವ್ ಅವರು, “ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಯಲ್ಲಿ 2047ರೊಳಗೆ ಭಾರತವನ್ನು ವಿಶ್ವದ ಶ್ರೇಷ್ಠ ತಂತ್ರಜ್ಞಾನ ರಾಷ್ಟ್ರವನ್ನಾಗಿ ಮಾಡಬೇಕು. ಅದಕ್ಕೆ ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ವಿನ್ಯಾಸ ಕೇಂದ್ರವಾಗುವುದು ಅತ್ಯಗತ್ಯ” ಎಂದು ಹೇಳಿದರು. ಕಳೆದ ಕೆಲ ವರ್ಷಗಳಲ್ಲಿ ಭಾರತದಲ್ಲಿ ಚಿಪ್ ವಿನ್ಯಾಸ ಕೇಂದ್ರಗಳು, ಉತ್ಪಾದನಾ ಹಬ್ಬ್‌ಗಳ ಸ್ಥಾಪನೆ ಹಾಗೂ ಹೂಡಿಕೆಗಳನ್ನು ಆಕರ್ಷಿಸಲು ಹಲವು ನೀತಿಗಳನ್ನು ಜಾರಿಗೆ ತರಲಾಗಿದೆ.

ಬೆಂಗಳೂರಿನ ಪಾತ್ರ: ತಂತ್ರಜ್ಞಾನ ನಗರಿ ಬೆಂಗಳೂರು ಈಗಾಗಲೇ ಅನೇಕ ಅಂತಾರಾಷ್ಟ್ರೀಯ ತಂತ್ರಜ್ಞಾನ ಕಂಪನಿಗಳಿಗೆ ಮನೆ ಆಗಿದ್ದು, ARM ಕಚೇರಿ ಸೇರ್ಪಡೆಯಿಂದ ಭಾರತದ ಸೆಮಿಕಂಡಕ್ಟರ್ ಎಕೋಸಿಸ್ಟಮ್ ಮತ್ತಷ್ಟು ಬಲವತ್ತಾಗಲಿದೆ. ಇಲ್ಲಿ ಕಾರ್ಯನಿರ್ವಹಿಸಲಿರುವ ತಜ್ಞ ಇಂಜಿನಿಯರ್‌ಗಳ ತಂಡವು ಜಾಗತಿಕ ಮಟ್ಟದಲ್ಲಿ ARM ಸಂಸ್ಥೆಯ ಪ್ರಮುಖ ಯೋಜನೆಗಳಿಗೆ ಕೊಡುಗೆ ನೀಡಲಿದ್ದಾರೆ.

ಮುಂದಿನ ಹಂತ: 2nm(nanometer) ಚಿಪ್ ವಿನ್ಯಾಸ ಯಶಸ್ವಿಯಾದರೆ, ಭಾರತ ಜಾಗತಿಕ ಸೆಮಿಕಂಡಕ್ಟರ್ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುವಂತಾಗಲಿದೆ. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶೀಯ ಉದ್ಯೋಗಾವಕಾಶಗಳು ಹಾಗೂ ಸಂಶೋಧನೆಗೆ ದಾರಿಯಾಗಲಿದೆ.

Previous articleಪಿಎಂ ಮೋದಿ ದೂರದೃಷ್ಟಿ: ನವ ಭಾರತದ ಉದಯ
Next articleರಾಮನಗರ, ಚನ್ನಪಟ್ಟಣಕ್ಕೂ ಬಿಎಂಟಿಸಿ ಬಸ್‌

LEAVE A REPLY

Please enter your comment!
Please enter your name here