ಬೆಂಗಳೂರು: ಕಾಂಗ್ರೆಸ್ ಸರ್ಕಾರ ಎಂದೆಂದಿಗೂ ನುಡಿದಂತೆ ನಡೆಯುತ್ತದೆ. ಯುಕೆಪಿ ಹಂತ 3 ಯೋಜನೆಯ ತ್ವರಿತ ಅನುಷ್ಠಾನಕ್ಕೆ ಸರ್ಕಾರದ ಆದ್ಯತೆ ನೀಡಿದ್ದು, ಈ ದಿಸೆಯಲ್ಲಿ ರಾಜ್ಯಕ್ಕೆ ಸಮೃದ್ಧಿ ತರಬಲ್ಲ ಐತಿಹಾಸಿಕ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ವಿಶೇಷ ಸಚಿವ ಸಂಪುಟ ನಡೆಸಿದ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.
ಯುಕೆಪಿ ಹಂತ-3: ರೈತರ ಜೀವನಮಟ್ಟ ಸುಧಾರಣೆ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಮತ್ತು ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀ. ನಿಂದ 524.256 ಮೀ. ಗೆ ಏರಿಸಲು ಅನುಮತಿ ನೀಡಲಾಗಿದೆ.
ಜಲಾಶಯದ ಎತ್ತರವನ್ನು ಹೆಚ್ಚಿಸುವುದರಿಂದ ಆಲಮಟ್ಟಿಯ ಹಿನ್ನೀರಿನಿಂದ ಸುಮಾರು 75000 ಎಕರೆಗೂ ಹೆಚ್ಚು ಜಮೀನು ಮುಳುಗಡೆಯಾಗುವ ಸಂಭವವಿದೆ. ಈ ಜಮೀನಿಗೆ 5.94 ಲಕ್ಷ ಹೆಕ್ಟೇರ್(ಸುಮಾರು 14 ರಿಂದ 15 ಲಕ್ಷ ಎಕರೆ) ಕ್ಕೂ ಭೂಮಿಯ ನೀರಾವರಿ ಕಲ್ಪಿಸಬಹುದಾಗಿದೆ. ಯುಕೆಪಿ ಹಂತ 3 ಬೃಹತ್ ನೀರಾವರಿ ಯೋಜನೆಯಾಗಿದ್ದು, ಈ ಭಾಗದ ರೈತರ ಜಮೀನಿಗೆ ನೀರೊದಗಿಸಿ, ಅವರ ಜೀವನ ಮಟ್ಟದ ಸುಧಾರಣೆಯಾಗಲಿದೆ ಎಂದರು.
ನೀರಾವರಿ ಜಮೀನಿಗೆ 40 ಲಕ್ಷ:ಒಣಭೂಮಿಗೆ 30 ಲಕ್ಷ ಪರಿಹಾರ: ಇಂದು ನಡೆದ ವಿಶೇಷ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ರೈತರು, ರೈತ ಹೋರಾಟ ಸಂಘಗಳು, ಸಂಬಂಧಪಟ್ಟ ಶಾಸಕರು, ಸಚಿವರೊಂದಿಗೆ ಚರ್ಚೆ ನಡೆಸಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಯೋಜನೆಗೆ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 40 ಲಕ್ಷ ರೂ, ಖುಷ್ಕಿ ಒಣಭೂಮಿಯ ಎಕರೆಯೊಂದಕ್ಕೆ 30 ಲಕ್ಷ ಪರಿಹಾರವನ್ನು ನೀಡಬೇಕೆಂದು ಸಚಿವ ಸಂಪುಟ ತೀರ್ಮಾನಿಸಿದೆ ಎಂದರು.
ಕಾಲುವೆ ನಿರ್ಮಾಣ: ನೀರಾವರಿ ಜಮೀನಿಗೆ 30 ಲಕ್ಷ: ಒಣಭೂಮಿಗೆ 25 ಲಕ್ಷ ಪರಿಹಾರ: ಕಾಲುವೆ ತೋಡಲು ಸುಮಾರು 51,837 ಎಕರೆ ಬೇಕಾಗಿದ್ದು, ಇದರಲ್ಲಿ 23631 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆ ನಡೆಸಿ, ಕಾಮಗಾರಿ ಕೈಗೊಳ್ಳಲಾಗಿದೆ.
ಕಾಲುವೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಸಂಬಂಧಿಸಿದಂತೆ ಒಣಭೂಮಿಯ ಎಕರೆಯೊಂದಕ್ಕೆ 25 ಲಕ್ಷ ಹಾಗೂ ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 30 ಲಕ್ಷ ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ. ಕಾಲುವೆ ನಿರ್ಮಾಣದಲ್ಲಿ ಜಮೀನು ಕಳೆದುಕೊಂಡವರು ಯೋಜನೆಯ ಫಲಾನುಭವಿಗಳಾಗುತ್ತಾರೆ ಎಂದರು.
ಬಿಜೆಪಿ ಅವಧಿಯಲ್ಲಿ ಯುಕೆಪಿ ಹಂತ 3 ಯೋಜನೆ ನೆನೆಗುದಿಗೆ ಬಿದ್ದಿತ್ತು: ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಪರಿಹಾರವನ್ನು ಮೂರು ಆರ್ಥಿಕ ವರ್ಷದೊಳಗೆ ನೀಡಲು ತೀರ್ಮಾನಿಸಲಾಗಿದೆ. ಯೋಜನೆಗೆ ಭೂಸ್ವಾಧೀನಪಡಿಸಿಕೊಳ್ಳಲು ರೈತರ ಮನವೊಲಿಸುವುದಾಗಿ ಸಂಬಂಧಪಟ್ಟ ಸಚಿವರು, ಶಾಸಕರು, ರೈತಮುಖಂಡರು ತಿಳಿಸಿದ್ದಾರೆ. ರಾಜ್ಯದ ಜನರಿಗೆ ಒಳಿತು ಮಾಡುವ ಈ ಸಾರ್ಥಕ ಯೋಜನೆಗೆ ಭೂಮಿ ನೀಡಲು ರೈತರು ಸಮ್ಮತಿಸಬಹುದೆಂಬ ಭರವಸೆಯಿದೆ.
ಇದೊಂದು ಐತಿಹಾಸಿಕ ತೀರ್ಮಾನ. 2023ರಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪರಿಹಾರದ ಮೊತ್ತ ಕಡಿಮೆಯಿದ್ದುದ್ದರಿಂದ , ಯಾವ ರೈತರೂ ಭೂಮಿ ನೀಡಲು ಒಪ್ಪಲಿಲ್ಲ ಹಾಗೂ ಯೋಜನೆಗೆ ಚಾಲನೆಯೂ ದೊರೆಯದೇ ನೆನೆಗುದಿಗೆ ಬಿದ್ದಿತ್ತು ಎಂದರು.
                

























lbuksb