ಹುಬ್ಬಳ್ಳಿ: ಹುಬ್ಬಳ್ಳಿ – ಪುಣೆ ವಿಮಾನದಲ್ಲಿ ಪ್ರಯಾಣಿಕನೋರ್ವ ತುರ್ತು ನಿರ್ಗಮನ ಬಾಗಿಲು ತೆಗೆದು ಆತಂಕ ಮೂಡಿಸಿದ ಘಟನೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನ ನಿಂತಿದ್ದಾಗ ಘಟನೆ ನಡೆದುದರಿಂದ ಸುದೈವವಶಾತ್ ಯಾವುದೇ ದುರಂತ ಸಂಭವಿಸಲಿಲ್ಲ.
ಇಂಡಿಗೋ ಸಂಸ್ಥೆಯ ಈ ವಿಮಾನವು (ವಿಮಾನ ಸಂಖ್ಯೆ: 6ಇ -7068 ) ಸೆಪ್ಟೆಂಬರ್ 12ರಂದು ಸಂಜೆ 4.30ಕ್ಕೆ ಹುಬ್ಬಳ್ಳಿಯಿಂದ ತೆರಳಬೇಕಿತ್ತು. ತುರ್ತು ನಿರ್ಗಮನ ಬಾಗಿಲ ಬಳಿ ಆಸನದಲ್ಲಿದ್ದ (2- ಎಫ್) ಬೆಳಗಾವಿ ಶಹಾಪುರದ ನಿರಂಜನ ಕಾರಗಿ ಎಂಬ ಪ್ರಯಾಣಿಕ ಏಕಾಏಕಿ ಈ ಬಾಗಿಲನ್ನು ತೆರೆದುಬಿಟ್ಟ.
ಇನ್ನೇನು ಟೇಕ್‌ಆಫ್ ಆಗಬೇಕಿದ್ದ ವಿಮಾನದಲ್ಲಿನ ಇತರ ಪ್ರಯಾಣಿಕರು ಹಾಗೂ ಸಿಬ್ಬಂದಿ ಇದರಿಂದ ಅತೀವವಾಗಿ ಗಾಬರಿಗೊಂಡರು. ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೂಡಲೇ ಕ್ಯಾಪ್ಟನ್ ತುರ್ತು ನಿರ್ವಹಣಾ ಸಿಬ್ಬಂದಿಗೆ ಮಾಹಿತಿ ರವಾನೆ ಮಾಡಿದರು.
ನಿಲ್ದಾಣದ ತುರ್ತು ಘಟಕದ ಸಿಬ್ಬಂದಿ ಹಾಗೂ ಇತರ ತಾಂತ್ರಿಕ ಸಿಬ್ಬಂದಿ ಧಾವಿಸಿ, ಬಾಗಿಲನ್ನು ಪುನಃ ನಿಯಮಾನುಸಾರ ಅದು ಇರಬೇಕಾದ ರೀತಿಯಲ್ಲಿ ಹಾಕಿದರು. ಈ ಪ್ರಕ್ರಿಯೆ ನಡೆದು, ಎಸ್‌ಓಪಿಗಳನ್ನು ಪಾಲಿಸಿದ ನಂತರ ವಿಮಾನ ಟೇಕ್‌ಆಫ್ ಆಗುವುದಕ್ಕೆ ಸಹಜವಾಗಿ ತಡವಾಯಿತು.
ಪುಣೆಗೆ 5.30ಕ್ಕೆ ತಲುಪಿ, ಅಲ್ಲಿಂದ ಮುಂಬೈ, ನಾಸಿಕ್ ಹಾಗೂ ಇತರ ಸ್ಥಳಗಳಿಗೆ ತಲುಪಬೇಕಾಗಿದ್ದ ಪ್ರಯಾಣಿಕರಿಗೆ ಇದರಿಂದ ಭಾರೀ ಅನನುಕೂಲವಾಯಿತು. ಘಟನೆಯ ಬಗ್ಗೆ ವಿಮಾನ ನಿಲ್ದಾಣ ಸಿಬ್ಬಂದಿ ಉದಯ ಕುಮಾರ್ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಯಾಣಿಕ ನಿರಂಜನ ಕಾರಗಿ ವಿರುದ್ಧ ನಿರ್ಲಕ್ಷ್ಯದ ದೂರು ದಾಖಲಾಗಿದೆ. ಘಟನೆ ನಡೆಯುತ್ತಿದ್ದಂತೆ ಆರೋಪಿಯನ್ನು ವಿಮಾನದಿಂದ ಇಳಿಸಿ ಪೊಲೀಸ್ ವಶಕ್ಕೆ ನೀಡಲಾಯಿತು.
ಮಾಹಿತಿ ನೀಡಿದ್ದರು: ತುರ್ತು ನಿರ್ಗಮನ ಬಾಗಿಲನ್ನು ಯಾವಾಗ ಮತ್ತು ಹೇಗೆ ತೆರೆಯಬೇಕು ಎನ್ನುವ ಮಾಹಿತಿಯನ್ನು ಎಸ್‌ಓಪಿ ಪ್ರಕಾರ ಸಿಬ್ಬಂದಿ ನಿರಂಜನ ಅವರಿಗೆ ನೀಡಿದ್ದರು. ವಿವರಗಳನ್ನು ನೀಡಿದ ನಂತರ `ಡಿಡ್ ಯೂ ಗೆಟ್ ಇಟ್ ಸರ್’ (ಸರ್, ಅರ್ಥವಾಯಿತೇ?’) ಎಂಬುದಾಗಿ ಕೇಳಿದ್ದರು. ಅರ್ಥವಾಗಿದೆ ಎಂದಿದ್ದ ಪ್ರಯಾಣಿಕ ಸಿಬ್ಬಂದಿ ಅತ್ತ ತೆರಳುತ್ತಿದ್ದಂತೆಯೇ ಬಾಗಿಲನ್ನು ತೆಗೆದು ಉದ್ದೇಶಪೂರ್ವಕ ನಿರ್ಲಕ್ಷ್ಯ ಎಂಬುದಾಗಿ ದೂರಿನಲ್ಲಿ ವಿವರಿಸಲಾಗಿದೆ.
ತನಿಖೆಯ ನಂತರವಷ್ಟೇ ಈ ಬಗ್ಗೆ ಸ್ಪಷ್ಟತೆ ದೊರೆಲಿದೆ. ಆರೋಪಿ ಪ್ರಯಾಣಿಕನ ಹೇಳಿಕೆಯನ್ನು ಪಡೆಯಲಾಗಿದ್ದು, ಪ್ರಾಥಮಿಕ ವಿಚಾರಣೆಯನ್ನು ನಡೆಸಲಾಗಿದೆ.