ಅಳ್ನಾವರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನಂತೆ ಅಮೃತ ರೈಲು ನಿಲ್ದಾಣ ಯೋಜನೆಯಡಿ ಪ್ರಲ್ಹಾದ್ ಜೋಶಿಯವರ ಶಿಫಾರಸ್ಸಿನನ್ವಯ ಪ್ರಗತಿಯಲ್ಲಿರುವ ಅಳ್ನಾವರ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಒಂದೆರಡು ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದ್ದು, ಬಳಿಕ ಲೋಕಾರ್ಪಣೆಗೊಳಿಸಲಾಗುವುದು ಎಂದು ಕೇಂದ್ರ ರೇಲ್ವೆ ಹಾಗೂ ಜಲಶಕ್ತಿ ಇಲಾಖೆಯ ರಾಜ್ಯ ಸಚಿವರಾದ ವಿ. ಸೋಮಣ್ಣ ಹೇಳಿದರು.
ಅಳ್ನಾವರ ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಅಳ್ನಾವರ ನಿಲ್ದಾಣದಲ್ಲಿ ಸುಮಾರು 20 ಕೋಟಿ ವೆಚ್ಚದಲ್ಲಿ ನಿಲ್ದಾಣಾಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂಬರುವ ನಾಲ್ಕು ವರ್ಷದಲ್ಲಿ ಎಲ್ಲಾ ರೈಲ್ವೆ ಕ್ರಾಸಿಂಗ್ ಗೇಟ್‌ಗಳನ್ನು ತೆರವುಗೊಳಿಸಿ ತಡೆ ರಹಿತ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ನಿಲ್ದಾಣಗಳಲ್ಲಿ ದೊರೆಯುತ್ತಿರುವ ಸೌಕರ್ಯಗಳು ಅಳ್ನಾವರ ನಿಲ್ದಾಣದಲ್ಲಿಯೂ ಸಿಗುವಂತೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.
ದಾಂಡೇಲಿಯಿಂದ ಬೆಂಗಳೂರಿಗೆ ರೈಲು: ದಾಂಡೇಲಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ರೈಲು ಸಂಚಾರ ಪ್ರಾರಂಭಿಸುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಭಾಗದ ಪ್ರಯಾಣಿಕರ ಬೇಡಿಕೆಯನ್ನು ಗಮನಕ್ಕೆ ತಂದಿದ್ದು, ಶೀಘ್ರ ಈ ದಿಶೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಾಗೆಯೇ ಅಳ್ನಾವರ ರೈಲು ನಿಲ್ದಾಣದಲ್ಲಿ ವಿವಿಧ ರೈಲು ನಿಲುಗಡೆಗೆ ಕೋರಿಕೆಯ ಬಗ್ಗೆ ರೈಲ್ವೆ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಜನರ ಬೇಡಿಕೆ ಪರಿಗಣಿಸಿ ಮೆಮು ರೈಲು ಓಡಿಸುವ ಚಿಂತನೆ ನಡೆದಿದೆ ಎಂದು ಹೇಳಿದರು.
ಸಾರ್ವಜನಿಕರಿಂದ ಮನವಿ ಸ್ವೀಕಾರ: ಬೆಳಗಾವಿ-ಬೆಂಗಳೂರು, ಜೋಧಪುರ, ಗಾಂಧಿಧಾಮ, ಅಜ್ಮೀರ, ವಾಸ್ಕೋ ರೈಲುಗಳಿಗೆ ನಿಲುಗಡೆ ಸೇರಿದಂತೆ ರೈಲ್ವೆ ಕ್ರಾಸಿಂಗ್ ನಂ 316 ಮೇಲ್ಸೇತುವೆ ಹಾಗೂ ಸ್ಥಗಿತಗೊಂಡಿರುವ ಕ್ರಾಸಿಂಗ್ ನಂ 315 ರ ಕುಂಬಾರಕೊಪ್ಪ ಗ್ರಾಮಕ್ಕೆ ಸಂಪರ್ಕಿಸುವ ಕೆಳ ರಸ್ತೆಯ ಸೇತುವೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಸಾರ್ವಜನಿಕರು ಸಚಿವರಿಗೆ ಮನವಿಗಳನ್ನು ಸಲ್ಲಿಸಿದರು.
ಅಳ್ನಾವರ ನಿಲ್ದಾಣದಲ್ಲಿ ಹಿಂದೆ ಇದ್ದ ಪಾರ್ಸಲ್ ಬುಕ್ಕಿಂಗ್ ಸೇವೆ ಸ್ಥಗಿತಗೊಂಡಿದೆ. ಇದರಿಂದ ಅನಾನೂಲತೆಯಾಗಿದೆ ಎಂದು ಪ.ಪಂ ಅಧ್ಯಕ್ಷ ಅಮೋಲ್ ಗುಂಜೀಕರ ಅವರು ಸಚಿವರ ಗಮನ ಸೆಳೆದರು. ತಕ್ಷಣ ಪಾರ್ಸಲ್ ಬುಕ್ಕಿಂಗ್ ಸೇವೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.