ರಾಜ್ಯದ ಕಾರಾಗೃಹಗಳು ಅಕ್ರಮಗಳ ಕೂಪವಾಗಿವೆ. ಶಿಕ್ಷೆಗೆ ಒಳಗಾದ ಕೈದಿಗಳಿಗೆ ಜೈಲುಗಳಲ್ಲಿ ಮೊಬೈಲ್ ಫೋನ್‌ಗಳು ಸೇರಿದಂತೆ ನಿಷಿದ್ಧ ವಸ್ತುಗಳು ಸುಲಭವಾಗಿ ಸಿಗುತ್ತಿವೆ. ಈ ಅಕ್ರಮ ಚಟುವಟಿಕೆಗಳಿಗೆ ಕೆಲವು ಜೈಲು ಸಿಬ್ಬಂದಿಯೇ ಸಹಾಯ ಮಾಡು ತಿರುವುದು ವಿಪರ್ಯಾಸ. ಇಂಥ 15 ಪ್ರಕರಣಗಳು ದಾಖಲಾಗಿದ್ದು, 30 ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಈ ಹಿಂದೆ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ನಟ ದರ್ಶನ್ ಅವರಿಗೆ ವಿಶೇಷ ಸೌಲಭ್ಯಗಳು ಸಿಗುತ್ತಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಘಟನೆಯು ಜೈಲುಗಳ ಒಳಗಿನ ಭ್ರಷ್ಟಾಚಾರದ ಮೇಲೆ ಬೆಳಕು ಚೆಲ್ಲಿದ್ದು, ಇಲಾಖೆಯು ತಕ್ಷಣವೇ ಕ್ರಮಕ್ಕೆ ಮುಂದಾಗಿದೆ. ಕೆಲವು ಸಿಬ್ಬಂದಿ ಕರ್ತವ್ಯ ನಿರ್ಲಕ್ಷ್ಯ ಮತ್ತು ಅಕ್ರಮಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಅಕ್ರಮಗಳ ತಡೆಗೆ ಕ್ರಮ ಏನು?: ಖೈದಿಗಳಿಂದಾಗುವ ಯಾವುದೇ ಬೆದರಿಕೆಗಳಿಗೆ ಬೆದರದೆ, ಜೈಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಪ್ರಾಮಾಣಿಕ ಅಧಿಕಾರಿಗಳನ್ನು ಪ್ರಮುಖ ಸ್ಥಾನಗಳಿಗೆ ನೇಮಿಸಲಾಗುತ್ತಿದೆ. ಬೆಂಗಳೂರಿನ ಕೇಂದ್ರ ಕಾರಾಗೃಹದಂತಹ ದೊಡ್ಡ ಜೈಲುಗಳಲ್ಲಿ, ಭದ್ರತೆಯನ್ನು ಹೆಚ್ಚಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಖೈದಿಗಳಿಗೆ ಸರಿಯಾದ ಮತ್ತು ಪೌಷ್ಟಿಕ ಆಹಾರ ಸಿಗುವಂತೆ ನೋಡಿಕೊಳ್ಳಲು, ಅಡುಗೆ ತಯಾರಿಸುವ ಗುತ್ತಿಗೆಯನ್ನು ಹೊರಗುತ್ತಿಗೆಯಾಗಿ ನೀಡುವ ಬದಲು ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದಲೇ ನಿರ್ವಹಿಸಲಾಗುತ್ತಿದೆ.
ರಾಜ್ಯದಲ್ಲಿ ಒಟ್ಟು 54 ಜೈಲುಗಳಿದ್ದು, ಸುಮಾರು 14,481 ಕೈದಿಗಳಿದ್ದಾರೆ. ಇವರಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ 5,016 ವಿಚಾರಣಾಧೀನ ಕೈದಿಗಳಿದ್ದಾರೆ. ಈ ಪರಿಸ್ಥಿತಿಯ ಲಾಭ ಪಡೆದು, ಕೆಲವು ಭ್ರಷ್ಟ ಸಿಬ್ಬಂದಿ ಕೈದಿಗಳಿಗೆ ಅನೈತಿಕ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಣಕ್ಕಾಗಿ ಈ ಜಾಲದಲ್ಲಿ ಭಾಗಿಯಾಗಿರುವುದು ಇಲಾಖೆಗೆ ದೊಡ್ಡ ಸಮಸ್ಯೆಯಾಗಿದೆ. ಇತ್ತೀಚೆಗೆ ಕೇಂದ್ರ ಕಾರಾಗೃಹದ ಮನೋವೈದ್ಯ ಡಾ.ಎಸ್.ನಾಗರಾಜ್ ಉಗ್ರರಿಗೆ ಸಹಕಾರ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದು, ಈ ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತದೆ
ಕಾರಣಗಳೇನು?
*ಜೈಲು ಸಿಬ್ಬಂದಿಯ ಸಂಖ್ಯೆ ಕಡಿಮೆ ಇದ್ದು, ಅವರಿಗೆ ಕೆಲಸದ ಒತ್ತಡ ಹೆಚ್ಚಿರುವುದು.
*ಹಳೆಯ ಭದ್ರತಾ ತಂತ್ರಜ್ಞಾನ ಮತ್ತು ಸರಿಯಾದ ಪರಿವೀಕ್ಷಣೆಯ ಕೊರತೆ, ಅಕ್ರಮ ವಸ್ತುಗಳ ಕಳ್ಳಸಾಗಣೆಗೆ ಅವಕಾಶ ಮಾಡಿಕೊಡುತ್ತಿದೆ.
*ಕೆಲವು ಜೈಲು ಸಿಬ್ಬಂದಿಯಿಂದ ಆರ್ಥಿಕ ಲಾಭಕ್ಕಾಗಿ ಕೈದಿಗಳ ಅಕ್ರಮಗಳಿಗೆ ಸಹಾಯ
ಸಿಬ್ಬಂದಿಯಿಂದಲೇ ಅಕ್ರಮಕ್ಕೆ ಸಾಥ್: ಈ ವರೆಗಿನ 15 ಪ್ರಕರಣಗಳಲ್ಲಿ 30 ಸಿಬ್ಬಂದಿ ಅಮಾನತು, ಅಮಾನತುಗೊಂಡ ಸಿಬ್ಬಂದಿ ವಿವರ, ಬೆಂಗಳೂರು ಕಾರಗೃಹದಲ್ಲಿ 4 ಪ್ರಾಕರನಗಳಲ್ಲಿ 6 ಸಿಬ್ಬಂದಿ ಸಸ್ಪೆಂಡ್ , ಬೆಳಗಾವಿ ಕಾರಗೃಹದಲ್ಲಿ 3 ಪ್ರಕರನಗಳಲ್ಲಿ 3 ಸಿಬ್ಬಂದಿ ಸಸ್ಪೆಂಡ್ , ಕಲಬುರಗಿಯಲ್ಲಿ 1 ಪ್ರಕರನಗಳಲ್ಲಿ 1 ಸಿಬ್ಬಂದಿ ಸಸ್ಪೆಂಡ್ , ಬಳ್ಳಾರಿಯಲ್ಲಿ 1 ಪ್ರಕರನಗಳಲ್ಲಿ ಒಬ್ಬ ಸಿಬ್ಬಂದಿ ಸಸ್ಪೆಂಡ್ , ಧಾರವಾಡ ಕಾರಗೃಹದಲ್ಲಿ 2 ಪ್ರಕರನಗಳಲ್ಲಿ 3 ಜನ ಸಿಬ್ಬಂದಿ ಸಸ್ಪೆಂಡ್ , ದಾವಣಗೆರೆ ಕಾರಗೃಹದಲ್ಲಿ 2 ಪ್ರಕರನಗಳಲ್ಲಿ 12 ಜನ ಸಿಬ್ಬಂದಿ ಸಸ್ಪೆಂಡ್ ಆಗಿದ್ದಾರೆ.
ಜೈಲು ಇಲಾಖೆಯು ತನ್ನ ಆಂತರಿಕ ವ್ಯವಸ್ಥೆಯನ್ನು ಶುದ್ದೀಕರಿಸಲು ಹಲವು ದಿನಗಳಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಸಹ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕುವುದು ಪ್ರಮುಖ ಸವಾಲಾಗಿ ಪರಿಣಮಿಸಿದೆ. ಆದರೂ ಜೈಲುಗಳನ್ನು ಸುಧಾರಣಾ ಕೇಂದ್ರಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ.