ದಾವಣಗೆರೆ: ಒಂದೇ ಮಗು ಇದ್ದರೂ ಸರ್ಕಾರಿ ಶಾಲೆ ಮುಚ್ಚಲ್ಲ

0
54

ದಾವಣಗೆರೆ: ರಾಜ್ಯದಲ್ಲಿ ಒಂದೇ ಮಗು ಇದ್ದರೂ ಕೂಡ ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚದೇ ಇರಲು ಸರ್ಕಾರ ದೃಢಸಂಕಲ್ಪಗೊಂಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.

ಇಂದು ಶನಿವಾರ ದಾವಣಗೆರೆಯ ಬಿಇಐಟಿ ಕಾಲೇಜು ಆವರಣದಲ್ಲಿ ನಡೆದ ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ಎರಡನೇ ರಾಜ್ಯ ಮಟ್ಟದ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ರಾಜ್ಯದಾದ್ಯಂತ ಪ್ರಸ್ತುತ 13 ಸಾವಿರ ಸರ್ಕಾರಿ ಶಾಲೆಗಳಲ್ಲಿ 25ಕ್ಕಿಂತ ಕಡಿಮೆ ಮಕ್ಕಳು ಹಾಜರಾತಿ ನೀಡುತ್ತಿದ್ದಾರೆ. ಇದರಿಂದಾಗಿ ಹಲವು ಕಡೆಗಳಲ್ಲಿ ಶಾಲೆ ಮುಚ್ಚುವ ಆತಂಕ ಎದುರಾಗಿತ್ತು. ಆದರೆ, ಗ್ರಾಮೀಣ ಮಕ್ಕಳಿಗೆ ಶಿಕ್ಷಣದಿಂದ ವಂಚನೆ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚದೇ ಮುಂದುವರಿಸಲು ತೀರ್ಮಾನ ಕೈಗೊಂಡಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಅವರು ಸರ್ಕಾರದ ಮುಂದಿನ ಶಿಕ್ಷಣ ಯೋಜನೆಗಳ ಕುರಿತು ವಿವರಿಸಿದರು. ರಾಜ್ಯದಲ್ಲಿ 800 ಕೆಪಿಎಸ್ (ಕನ್ನಡ ಪಬ್ಲಿಕ್ ಸ್ಕೂಲ್) ಶಾಲೆಗಳನ್ನು ಪ್ರಾರಂಭಿಸಲು 3,500 ಕೋಟಿ ರೂ. ಅನುದಾನವನ್ನು ಮೀಸಲು ಇಡಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಗ್ರಾಮೀಣ ಮತ್ತು ಹಳ್ಳಿಗಳಲ್ಲಿಯೂ ಗುಣಮಟ್ಟದ ಶಿಕ್ಷಣವನ್ನು ಲಭ್ಯವಾಗುವಂತೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು.

ಅಷ್ಟೇ ಅಲ್ಲದೇ, ಹೊಸ ಪದವಿಪೂರ್ವ ಕಾಲೇಜುಗಳನ್ನು ಆರಂಭಿಸುವ ಯೋಜನೆ ಕೂಡ ಸರ್ಕಾರ ರೂಪಿಸಿಕೊಳ್ಳುತ್ತಿದೆ. ಇದರ ಮೂಲಕ ಪಿಯುಸಿ ಹಂತದ ಶಿಕ್ಷಣಕ್ಕಾಗಿ ದೂರದೂರ ಪ್ರಯಾಣ ಮಾಡುವ ಅನಿವಾರ್ಯತೆಯನ್ನು ವಿದ್ಯಾರ್ಥಿಗಳಿಗೆ ಕಡಿಮೆ ಮಾಡುವುದು ಉದ್ದೇಶವೆಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷರು, ಅನೇಕ ಕಾಲೇಜು ಆಡಳಿತ ಮಂಡಳಿಗಳ ಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Previous articleಹಾಸನ: ಗಣೇಶೋತ್ಸವ ಮೆರವಣಿಗೆ ದುರಂತ, ದೇವೇಗೌಡರಿಂದ ಪರಿಹಾರ
Next articleಬಾಗಲಕೋಟೆಯಲ್ಲಿ ಕೆಲಸ ಖಾಲಿ ಇದೆ: ಹುದ್ದೆ, ವೇತನ ವಿವರ

LEAVE A REPLY

Please enter your comment!
Please enter your name here