ಸಂಚಾರಿ ನಿಯಮ ಉಲ್ಲಂಘನೆ: ಒಂದೇ ದಿನ 89 ಕೋಟಿ ದಂಡ ಸಂಗ್ರಹ!

0
19

ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣದ ದಂಡವನ್ನು ಶೇ 50ರಷ್ಟು ರಿಯಾಯಿತಿಯಲ್ಲಿ ಪಾವತಿ ಮಾಡಲು ಶುಕ್ರವಾರ ಕೊನೆಯ ದಿನವಾಗಿತ್ತು. ಬೆಂಗಳೂರು ನಗರದಲ್ಲಿ ಅಂತಿಮ ದಿನ ಮಧ್ಯಾಹ್ನದ ತನಕ ಬರೋಬ್ಬರಿ 89 ಕೋಟಿ ರೂ ದಂಡ ಸಂಗ್ರಹಣೆಯಾಗಿದೆ.

ರಾತ್ರಿ 12 ಗಂಟೆಗೆ ರಿಯಾಯಿತಿ ಅವಕಾಶ ಅಂತ್ಯವಾಗಿದ್ದು, ದಂಡ ಪಾವತಿಸಲು ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿಯಂತ್ರಣ ಕಚೇರಿ ಬಳಿ ವಾಹನಗಳ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಆ.23ರಿಂದ ಈ ಅವಕಾಶ ನೀಡಲಾಗಿದ್ದು, ಇದರಿಂದಾಗಿ ಒಟ್ಟು 30 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಸಂಚಾರ ಪೊಲೀಸ್ ಅಥವಾ ಕರ್ನಾಟಕ ಒನ್ ವೆಬ್‌ಸೈಟ್‌ನಲ್ಲಿ ವಾಹನದ ನೋಂದಣಿ ಸಂಖ್ಯೆ ನಮೂದಿಸಿ ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ತಿಳಿದುಕೊಳ್ಳಬಹುದು. ಬಳಿಕ ಪಾವತಿಸಲು ಇಚ್ಚಿಸುವ ದಂಡದ ಮೊತ್ತವನ್ನ ಆಯ್ಕೆ ಮಾಡಿದರೆ ರಿಯಾಯಿತಿ ಮೊತ್ತದ ಪಾವತಿಯ ಆಯ್ಕೆ ಲಭ್ಯವಾಗುತ್ತದೆ. ನಂತರ ದಂಡದ ಮೊತ್ತ ಪಾವತಿಸಬಹುದು.

ಇದಲ್ಲದೇ ಹತ್ತಿರದ ಸಂಚಾರ ಪೊಲೀಸ್ ಠಾಣೆಗಳು, ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರಕ್ಕೆ ತೆರಳಿ ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ನೀಡುವ ಮೂಲಕವೂ ಸಹ ದಂಡ ಪಾವತಿಸಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಒಂದು ವೇಳೆ ತಪ್ಪಾಗಿ ದಂಡ ವಿಧಿಸಲಾಗಿದ್ದರೆ, ಮರುಪರಿಶೀಲನೆಯ ದೂರನ್ನ ಆನ್‌ಲೈನ್ ಮೂಲಕ ಸಲ್ಲಿಸಬಹುದು ಅಥವಾ ಸಂಚಾರ ನಿರ್ವಹಣಾ ಕೇಂದ್ರಕ್ಕೆ ತೆರಳಿ ದೂರು ಸಲ್ಲಿಸುವ ಮೂಲಕವೂ ಸರಿಪಡಿಸಿಕೊಳ್ಳಬಹದು ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸ್ ಇಲಾಖೆಯ ಸಂಚಾರಿ ಇ – ಚಲನ್‌ನಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಶೇ.50ರಷ್ಟು ದಂಡ ಪಾವತಿ ವ್ಯವಸ್ಥೆಗೆ ವಾಹನ ಸವಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ರಿಯಾಯಿತಿ ಸೌಲಭ್ಯ ಪಡೆಯಲು ಸೆ.12ರಂದು ಕೊನೆ ದಿನವಾಗಿದೆ ಎಂದು ಈ ಮೊದಲೇ ತಿಳಿಸಿದ್ದ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ತದನಂತರ ಈ ಯೋಜನೆ ವಿಸ್ತರಿಸುವುದಿಲ್ಲ. ತದನಂತರ ದಂಡ ಪಾವತಿಸುವವರು ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕು. ಹೀಗಾಗಿ ಸೌಲಭ್ಯವನ್ನು ಸದ್ಬಳಕೆ ಮಾಡುವಂತೆ ಮನವಿ ಮಾಡಿತ್ತು.

ಕೈಕೊಟ್ಟ ಸರ್ವರ್ ಕಂಗೆಟ್ಟ ವಾಹನ ಚಾಲಕರು: ಕೊನೆದಿನದಂದು ಪಾವತಿ ಮಾಡೋಣ ಎಂದು ಬಂದ ವಾಹನ ಸವಾರರಿಗೆ ಸರ್ವರ್ ಕೈಕೊಟ್ಟಿತ್ತು. ಇಷ್ಟುದ್ದದ ಸಾಲಿನಲ್ಲಿ ನಿಂತಿದ್ದರು. ಒಂದೊಂದು ಪಾವತಿ ಮಾಡುವಾಗಲೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿತ್ತು. ಇದರಿಂದಾಗಿ ಆಕ್ರೋಶಗೊಂಡ ಸಾರ್ವಜನಿಕರು ವಾಗ್ವಾದಕ್ಕೆ ಇಳಿದಿದ್ದರು. ನಂತರದಲ್ಲಿ ಎಷ್ಟೋ ಹೊತ್ತಿನ ನಂತರ ಪಾವತಿ ಮಾಡಿದರು.

Previous articleಭಾರತದಲ್ಲಿ ಮೊದಲ ಮಹಿಳಾ ಟಿ20 ಅಂಧರ ವಿಶ್ವಕಪ್: ಕರ್ನಾಟಕದ ಮೂವರಿಗೆ ಸ್ಥಾನ, ಸಿಎಂ ಅಭಿನಂದನೆ
Next articleಬೆಂಗಳೂರಿಗರೇ ಎಚ್ಚರ: ಎಲ್ಲೆಂದರಲ್ಲಿ ಕಸ ಹಾಕಿದ್ರೆ 2,000 ರೂ. ದಂಡ

LEAVE A REPLY

Please enter your comment!
Please enter your name here