ಹಾಸನ: ಲಾರಿ ಅಪಘಾತದಲ್ಲಿ 8 ಮಂದಿ ಸಾವು, ಸರ್ಕಾರದಿಂದ ಪರಿಹಾರ ಘೋಷಣೆ

0
45

ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆಯುತ್ತಿದ್ದ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಲಾರಿಯೊಂದು ಜನಸಮೂಹದ ನಡುವೆ ನುಗ್ಗಿ 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಅಪಘಾತದಲ್ಲಿ 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹಾಸನ ಜಿಲ್ಲಾಸ್ಪತ್ರೆ ಮತ್ತಿತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನ-ಹೊಳೆನರಸೀಪುರ ರಸ್ತೆಯ ಮೊಸಳೆಹೊಸಳ್ಳಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ದುರಂತ ನಡೆದಿದೆ. ಈ ಘಟನೆಗೆ ಕಾರಣವಾದ ಲಾರಿ ಚಾಲಕ ಭುವನೇಶ್ ಬಂಧಿಸಲಾಗಿದೆ. ಚಾಲಕ ಕುಡಿದಿದ್ದ, ಅತಿಯಾದ ವೇಗವೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರ.

ಈ ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಸಿದ್ದರಾಮಯ್ಯ ಸಂತಾಪ: ಘಟನೆ ಕುರಿತು ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, “ಹಾಸನದಲ್ಲಿ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು ಹಲವರು ಸಾವಿಗೀಡಾಗಿ, ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಸುದ್ದಿ ತಿಳಿದು ಅತೀವ ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಇದು ಅತ್ಯಂತ ನೋವಿನ ಘಳಿಗೆ. ಅಪಘಾತ ಸಂತ್ರಸ್ತ ಕುಟುಂಬಗಳ ಜೊತೆ ನಾವೆಲ್ಲರೂ ನಿಲ್ಲೋಣ” ಎಂದು ಕರೆ ನೀಡಿದ್ದಾರೆ.

ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಜನಸಮೂಹದ ನಡುವೆ ನುಗ್ಗಿದೆ. ಲಾರಿ ಅಪ್ಪಳಿಸಿದ ಪರಿಣಾಮವಾಗಿ 8 ಜನರು ಸ್ಥಳದಲ್ಲಿಯೇ ಮೃತಪಟ್ಟರು. ಘಟನಾ ಸ್ಥಳಕ್ಕೆ ಹೊಳೆನರಸಿಪುರ ಶಾಸಕ ಹೆಚ್‌.ಡಿ.ರೇವಣ್ಣ, ಹಾಸನದ ಸ್ವರೂಪ್ ಪ್ರಕಾಶ್ ಮತ್ತು ಜೆಡಿಎಸ್ ಯುವ ಘಟದಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.

“ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ವಿಸರ್ಜನೆಯ ವೇಳೆ ಮೆರವಣಿಗೆಗೆ ವಾಹನ ಅಪ್ಪಳಿಸಿದ ಅಪಘಾತದಲ್ಲಿ ಆರು ಜನ ದುರ್ಮರಣಕ್ಕೀಡಾಗಿ 20 ಜನ ಗಾಯಗೊಂಡಿರುವ ಘಟನೆ ದಿಗ್ಬ್ರಮೆ ತರಿಸಿದೆ. ಗಣೇಶೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರ ಮೇಲೆ ಏಕಾಏಕಿ ಕ್ಯಾಂಟರ್ ವಾಹನವೊಂದು ನುಗ್ಗಿ ಈ ಅವಘಡ ಸಂಭವಿಸಿರುವುದು ನಿಜಕ್ಕೂ ಘೋರ ದುರಂತ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಒದಗಿಸಲು ತುರ್ತು ಕ್ರಮ ವಹಿಸಲಿ‌, ಮೃತ ಕುಟುಂಬಗಳಿಗೆ ಈ ಕೂಡಲೇ ಸರ್ಕಾರ ಸೂಕ್ತ ಪರಿಹಾರ ಘೋಷಿಸಲಿ ಎಂದು ಒತ್ತಾಯಿಸುವೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ.

ಗಣ್ಯರಿಂದ ಸಂತಾಪ

  • “ಹಾಸನ ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸಂಭವಿಸಿದ ಭೀಕರ ಅಪಘಾತ ಅತ್ಯಂತ ಆಘಾತಕಾರಿಯಾಗಿದ್ದು, ಈ ಘೋರ ದುರ್ಘಟನೆಯ ಬಗ್ಗೆ ಕೇಳಿ ತುಂಬಾ ದುಃಖವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಕ್ಕೆ 5 ಲಕ್ಷ ರೂ. ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಗಾಯಾಳುಗಳು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
  • “ಹಾಸನ ತಾಲೂಕಿನ ಮೊಸಳೆಹೊಸಳ್ಳಿಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಭೀಕರ ಅಪಘಾತ ಸಂಭವಿಸಿ ಹಲವರು ಜೀವ ಕಳೆದುಕೊಂಡು, 20ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು. ಗಣಪತಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಟ್ರಕ್‌ ಹರಿದು ಭಕ್ತರ ಸಾವುಂಟಾಗಿರುವುದು ನನಗೆ ಅತ್ಯಂತ ದುಃಖ ಉಂಟು ಮಾಡಿದೆ. ಇದು ಅತೀ ದುರ್ದೈವದ ಘಟನೆಯಾಗಿದ್ದು, ಮೃತರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ ಹಾಗೂ ದುಃಖತಪ್ತ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ. ಎಲ್ಲಾ ಗಾಯಾಳುಗಳು ಅದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯ ಸರಕಾರ ಗಾಯಾಳುಗಳಿಗೆ ಉತ್ತಮ, ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು” ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
  • ಹಾಸನ ಜಿಲ್ಲೆಯ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಭೀಕರ ಅಪಘಾತದಿಂದ 8 ಜನ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡ ಹೃದಯವಿದ್ರಾವಕ ಘಟನೆ ಮನಸ್ಸಿಗೆ ತೀವ್ರ ನೋವುಂಟುಮಾಡಿದೆ. ಮೃತರ‌ ಆತ್ಮಕ್ಕೆ ಶಾಂತಿ ಸಿಗಲಿ ಹಾಗು ಗಾಯಗೊಂಡಿರುವವರೆಲ್ಲರೂ ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಈ ದುರ್ಘಟನೆಯಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡವರ ದುಃಖದಲ್ಲಿ ನಾನೂ ಭಾಗಿಯಾಗಿರುತ್ತೇನೆ” ಎಚ್.ಡಿ.ದೇವೇಗೌಡ.

Previous articleದಾಂಡೇಲಿ: ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಗೆ ವಿರೋಧ – ಆನ್‌ಲೈನ್‌ ಅಂದೋಲನ
Next articleಮಂಡ್ಯ: ಯಂತ್ರದ ಮೂಲಕ ಭತ್ತ ನಾಟಿ ಮಾಡಿದ ಜಿಲ್ಲಾ ಪಂಚಾಯಿತಿ ಸಿಇಓ

LEAVE A REPLY

Please enter your comment!
Please enter your name here