ದಾಂಡೇಲಿ: ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಗೆ ವಿರೋಧ – ಆನ್‌ಲೈನ್‌ ಅಂದೋಲನ

0
49

ದಾಂಡೇಲಿ: ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಸೆಪ್ಟಂಬರ 16 ರಂದು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸೆ.18ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ವಿದ್ಯುತ್ ನಿಗಮ ವತಿಯಿಂದ ಸಾರ್ವಜನಿಕ ಅಹವಾಲು ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಭಾರೀ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.

ಶರಾವತಿ ನದಿ. ಕಣಿವೆ ಉಳಿಸಿ ಹೋರಾಟ ಒಕ್ಕೂಟ ಈಗಾಗಲೇ ಆನ್ ಲೈನ್ ಚಳುವಳಿಯನ್ನು ನಡೆಸುತ್ತಿದ್ದು, ಅಹವಾಲು ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಿದೆ.

ಹೋರಾಟಗಾರರ ಆಕ್ಷೇಪಗಳೇನು?
ಪರಿಸರ ಸೂಕ್ಷ್ಮ ವಲಯದಲ್ಲಿ ವಿದ್ಯುತ್ ಯೋಜನೆ ಜಾರಿಗೊಳಿಸಬೇಕಾದರೆ ರಾಷ್ಟ್ರೀಯ ವನ್ಯಜೀವಿ ಮಂಡಳಿ, ಕೇಂದ್ರ ವರಿಸರ ಮತ್ತು ಅರಣ್ಯ ಇಲಾಖೆ ಮತ್ತು ಕೇಂದ್ರ ವಿದ್ಯುತ್ ಪ್ರಾಧಿಕಾರದ ನಿರಕ್ಷೇಪಣಾ ಅನುಮತಿ ಅಗತ್ಯವಾಗಿದೆ. ಆದರೆ ರಾಜ್ಯ ಸರ್ಕಾರ ಯೋಜನೆಗೆ ಯಾವುದೇ ಅನುಮತಿ ಪಡೆದಿಲ್ಲ. ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆದರೆ ಸಾರ್ವಜನಿಕರು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂಬ ಮುಂದಾಲೋಚನೆಯಿಂದ ಅನುಮತಿ ಪಡೆಯದೆ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ ಎನ್ನುವದು ಹೋರಾಟಗಾರರ ಆರೋಪವಾಗಿದೆ.

ಕೈಗಾರಿಕಾ ಸ್ಪೋಟಕಗಳ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಫಾರ್ಮ್ – 1 ರಲ್ಲಿ 18000 ಟನ್ ಸ್ಪೋಟಕಗಳ ಬಳಕೆಯ ಬಗ್ಗೆ ದಾಖಲಾಗಿದ್ದರೂ El A ವರದಿಯಲ್ಲಿ ಇದರ ಉಲ್ಲೇಖವಿಲ್ಲ.ಅಕ್ರಮ ಮತ್ತು ಅವೈಜ್ಞಾನಿಕವಾಗಿ ಮಣ್ಣಿನ ತ್ಯಾಜ್ಯವನ್ನು ಪರಿಸರ ಸೂಕ್ಷ್ಮ ವಲಯದಲ್ಲಿ ESZ ವಿಲೇವಾರಿ ಮಾಡಲಾಗುತ್ತಿದೆ. ಇದು 2023ರ ನವೆಂಬರ್ 16ರ ಅಧಿಸೂಚನೆ ಮತ್ತು 2016ರ ನಿರ್ಮಾಣ ಹಾಗೂ ಧ್ವಂಸ ತ್ಯಾಜ್ಯ ನಿರ್ವಹಣಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಪರಿಸರ ಸೂಕ್ಷ್ಮ ವಲಯದಲ್ಲಿ ಕ್ವಾರಿಗಳನ್ನು ಗುರುತಿಸಲಾಗಿದೆಯಾದರೂ, ನಿಷೇಧಿತ ಮರಳು ಗಣಿಗಾರಿಕೆಯ ಪ್ರಮಾಣ ಮತ್ತು ಅದರ ಪರಿಣಾಮಗಳ ಬಗ್ಗೆ ಯಾವುದೇ ಅಂದಾಜು ಮಾಡಿಲ್ಲ. ಸ್ಪೋಟಕಗಳ ಬಳಕೆಯಿಂದ ಇಳಿಜಾರುಗಳ ಸ್ಥಿರತೆ, ಭೂಗರ್ಭ ಜಲದ ಹರಿವು, ಮತ್ತು ಹಳ್ಳ, ಕಲ್ಕಟ್ಟೆ ಹೊಳೆಯಂತಹ ಜಲ ಮೂಲಗಳ ಮೇಲೆ ಆಗುವ ಪರಿಣಾಮಗಳನ್ನು ಅಂದಾಜಿಸಿಲ್ಲ. ಅಲ್ಲದೇ ಅಪರೂಪದ ಸಿಂಹಬಾಲದ ಸಿಂಗಳಿಕ, ಪ್ಯಾಂಗೋಲಿನ್ ನಂತ ಜೀವಿಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಮೌಲ್ಯಮಾಪನ ನಡೆದಿಲ್ಲ.

ಯೋಜನಾ ಸ್ಥಳವು ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ ಗುರುತಿಸಿರುವ ಅಧಿಕ ಭೂ ಕುಸಿತದ ವಲಯದಲ್ಲಿದೆ. ಆದರೂ ಈ ಬಗ್ಗೆ ಯಾವುದೇ ವಿಶ್ವಾಸಾರ್ಹ ನಕ್ಷೆ ಅಥವಾ ಮೌಲ್ಯಮಾಪನ ಮಾಡಿಲ್ಲ. ಯೋಜನಾ ವರದಿಯಲ್ಲಿ ಸೂಕ್ಷ್ಮ ಪರಿಸರ ವಲಯಗಳ ಗಡಿ, ಜಲ ಮೂಲಗಳು, ಪ್ರವಾಹ ವಲಯಗಳು, ವಾಸಸ್ಥಾನಗಳು ಮತ್ತು ದೇವಾಲಯಗಳನ್ನು ಗುರುತಿಸುವ ನಕ್ಷೆಗಳನ್ನು ಪ್ರಕಟಿಸಿಲ್ಲ. ಇದು ಯೋಜನೆಯಿಂದಾಗುವ ನೈಜ ಪರಿಣಾಮಗಳನ್ನು ಮರೆ ಮಾಚುವ ಪ್ರಯತ್ನವಾಗಿದೆ.

ಪರಿಸರ ಪರಿಣಾಮದ ಮೌಲ್ಯಮಾಪನ ವರದಿಯಲ್ಲಿ ಯಾವುದೇ ಸ್ಮಾರಕಗಳಿಲ್ಲ ಎಂದು ತಪ್ಪಾಗಿ ದಾಖಲಿಸಲಾಗಿದೆ. ಆದರೆ ನಾಗರಬಸ್ಥಿಯಲ್ಲಿರುವ ನಾಲ್ಕು ಐತಿಹಾಸಿಕ ಸ್ಮಾರಕಗಳು ಮತ್ತು ಚತುರ್ಮುಖ ಬಸ್ಥಿಯನ್ನು ಉದ್ದೇಶಪೂರ್ವಕವಾಗಿ ಮರೆ ಮಾಚಲಾಗಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ಈ ಯೋಜನೆಯಿಂದ 53 ಕುಟುಂಭಗಳು ಸ್ಥಳಾಂತರದ ಭೀತಿಯಲ್ಲಿದೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಬೇಗೋಡಿಯಲ್ಲಿ 43 ಕುಟುಂಭಗಳು ಮತ್ತು ಶಿವಮೊಗ್ಗದ ಮರಾಠಿ ಕ್ಯಾಂಪ್ ನ 8 ಕುಟುಂಭಗಳು ಯೋಜನೆಯಿಂದಾಗಿ ತಮ್ಮ ಮನೆ, ಜಮೀನುಗಳನ್ನು ಕಳೆದುಕೊಳ್ಳುವ ಆತಂಕದಲ್ಲಿವೆ. ಮರಾಠಿ ಕ್ಯಾಂಪ್ ನ ಜನರು ಮತ್ತೊಮ್ಮೆ ಸಂತ್ರಸ್ಥರಾಗುವ ಅಪಾಯದಲ್ಲಿದ್ದಾರೆ.

ಈ ಹಿಂದೆ ಶರಾವತಿ ಯೋಜನೆಗೆ ಭೂಮಿ ನೀಡಿ ನಿರಾಶ್ರಿತರಾದವರು ಈಗ ಮತ್ತೇ ನಿರಾಶ್ರಿತರಾಗಲಿದ್ದಾರೆ. ಇಲ್ಲಿಯ ನಿವಾಸಿಗಳು ಯೋಜನೆಗೆ ತಮ್ಮ ಭೂಮಿಯನ್ನು ನೀಡಲು ಸಿದ್ದರಿಲ್ಲದಿದ್ದರೂ, ಸರ್ಕಾರ ಬಲವಂತವಾಗಿ ಭೂ ಸ್ವಾಧೀನಕ್ಕೆ ಮುಂದಾಗಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಯ ವಿರುದ್ಧ ಹೋರಾಟದ ಕಿಚ್ಚು ಅಹವಾಲು ಸಭೆಯಲ್ಲಿ ಮೊಳಗಲಿದೆ.

Previous articleಹಾಸನ: ಗಣೇಶೋತ್ಸವ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ – ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ
Next articleಹಾಸನ: ಲಾರಿ ಅಪಘಾತದಲ್ಲಿ 8 ಮಂದಿ ಸಾವು, ಸರ್ಕಾರದಿಂದ ಪರಿಹಾರ ಘೋಷಣೆ

LEAVE A REPLY

Please enter your comment!
Please enter your name here