ಭಾರತದ ನೆರೆಯ ರಾಷ್ಟ್ರ ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ನಿಷೇಧ ಮಾಡಿದ್ದಕ್ಕಾಗಿ ಸರ್ಕಾರದ ಭುಗಿಲೆದ್ದ ಯುವಕರ ಆಕ್ರೋಶ ಆಸ್ಫೋಟಿಸಿ ಇಡೀ ನೇಪಾಳದಲ್ಲಿ ಹಿಂಸಾಚಾರ ತಾಂಡವವಾಡುತ್ತಿದೆ. ಅಲ್ಲದೇ ಅಲ್ಲಿನ ಪ್ರಧಾನಿ ಕೆ.ಪಿ. ಶರ್ಮಾ ಒಲಿ ರಾಜೀನಾಮೆ ನೀಡುವಂತಹ ಪರಿಸ್ಥಿತಿ ಬಂದೊದಗಿತು. ಈ ಬೆನ್ನಲ್ಲೇ ಮಧ್ಯಂತರ ಸರ್ಕಾರದ ರಚನೆಗೆ ಜೆನ್ ಝಿ ಗುಂಪು ಮುಂದಾಗಿದೆ. ಅಲ್ಲಿನ ಮಿಲಿಟರಿ ನಾಯಕತ್ವದ ಜತೆ ಹಲವು ಸುತ್ತಿನ ಮಾತುಕತೆ ನಡೆಸಿ ಪ್ರಧಾನಿ ಹುದ್ದೆಗೆ ಪ್ರಮುಖ ಮೂರ‍್ನಾಲ್ಕು ಹೆಸರುಗಳನ್ನು ಅಂತಿಮಗೊಳಿಸಿದ್ದಾರೆ. ನೇಪಾಳದ ಮಧ್ಯಂತರ ಚುನಾವಣಾ ರೇಸ್‌ನಲ್ಲಿ ಯಾರೆಲ್ಲಾ ಇದ್ದಾರೆ? ಚುನಾವಣೆ ಯಾವಾಗ ನಡೆಯಲಿದೆ ಎಂಬುದರ ವಿವರ ಇಲ್ಲಿದೆ ನೋಡಿ…
ಸರ್ಕಾರದ ಭ್ರಷ್ಟಾಚಾರ ಹಾಗೂ ಸೋಷಿಯಲ್ ಮೀಡಿಯಾ ಬ್ಯಾನ್‌ನಿಂದ ಅಸಮಾಧಾನಗೊಂಡ ನೇಪಾಳಿಗರ ಪ್ರತಿಭಟನೆ ಹಿಂಸಾಚಾರ ರೂಪ ಪಡೆದು ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮಂಗಳವಾರ ರಾಜೀನಾಮೆ ನೀಡಬೇಕಾಯಿತು. ಎರಡು ದಿನಗಳ ದಂಗೆಯ ಬಳಿಕ ನೇಪಾಳದಲ್ಲೀಗ ಸೇನಾಡಳಿತ ಸ್ಥಾಪನೆಯಾಗಿದೆ. ಇದರ ನಡುವೆ ಜೆನ್ ಯಿ ಗುಂಪು ಮುಂದಿನ ಆರು ತಿಂಗಳೊಳಗೆ ಮಧ್ಯಂತರ ಸರ್ಕಾರ ರಚಿಸುವುದಾಗಿ ಘೋಷಿಸಿದೆ. ಆರಂಭದಲ್ಲಿ ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸುಶೀಲಾ ಕರ್ಕಿ ಹೆಸರನ್ನು ಪಿಎಂ ಗಾದಿಗೆ ಅಂತಿಮಗೊಳಿಸಲಾಗಿತ್ತು. ಆದರೀಗ ಇಂಜನಿಯರ್ ಕುಲ್ನನ್ ಘಿಸಿಂಗ್ ಹಾಗೂ ಬಾಲೆನ್ ಶಾ ಹೆಸರುಗಳೂ ಕೇಳಿಬರುತ್ತಿವೆ.
ಮುಂಚೂಣಿಯಲ್ಲಿ ಕುಲ್ನನ್ ಘಿಸಿಂಗ್: ಪ್ರಧಾನಿ ಕೆ.ಪಿ ಶರ್ಮಾ ರಾಜೀನಾಮೆ ಬಳಿಕ ಜೆನ್ ಝಿ ಆರು ತಿಂಗಳೊಳಗೆ ಮಧ್ಯಂತರ ಸರ್ಕಾರ ರಚಿಸುತ್ತೇವೆ ಎಂದು ಘೋಷಿಸಿದ ಸಂದರ್ಭದಲ್ಲಿ ಸುಶೀಲಾ ಹೆಸರು ಮುನ್ನೆಲೆಗೆ ಬಂದಿತ್ತು. ಇದೀಗ ಇಂಜಿನಿಯರ್ ಕುಲ್ನನ್ ಘಿಸಿಂಗ್ ಹೆಸರು ಹೆಚ್ಚು ಚಾಲ್ತಿಯಲ್ಲಿದ್ದು ಬಹುತೇಕ ಇವರ ಹೆಸರೇ ಅಂತಿಮವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಯಾರು ಈ ಘಿಸಿಂಗ್?: 1970ರ ನವೆಂಬರ್ 25ರಂದು ರಾಮೆಚಾಪ್‌ನ ಬೆಥಾಂಗ್‌ನಲ್ಲಿ ಜನಿಸಿದ ಘಿಸಿಂಗ್ ಭಾರತದ ಜೆಮ್‌ಷೆಡ್ಪುರದ ರೀಜಿನಲ್ ಇನ್‌ಸ್ಟಿಟ್ಯೂ ಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಬಳಿಕ ನೇಪಾಳದ ಪುಲ್‌ಚೌಕ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದ ಇವರು ನೇಪಾಳದ ವಿದ್ಯುತ್ ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿದ್ದರು. ನೇಪಾಳದಲ್ಲಿ ದಶಕಗಳಿಂದ ಇದ್ದ ಲೋಡ್ ಶೆಡ್ಡಿಂಗ್, ವಿದ್ಯುತ್ ಕಡಿತದಂತಹ ಸಮಸ್ಯೆಗಳನ್ನು ಕೊನೆಗಾಣಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಘಿಸಿಂಗ್ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಜೆನ್ ಝಿಗಳು ನೋಡಬಯಸುತ್ತಿದ್ದಾರೆ.
ಮಾಜಿ ಕಠ್ಮಂಡು ಮೇಯರ್ ಬಾಲೇನ್: ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿದ ಬೆನ್ನಲ್ಲೇ ಶುರುವಾದ ಭಾರೀ ಪ್ರತಿಭಟನೆಯಲ್ಲಿ ನಿರತರಾದ ಅನೇಕ ಯುವಕರ ಬಾಯಲ್ಲಿ ಕೇಳಿ ಬಂದ ಹೆಸರೇ ಈ ಬಾಲೇನ್ ಶಾ. ಕಠ್ಮಂಡುವಿನ ಮೇಯರ್‌ಯಾಗಿರುವ ಇವರು 1990ರಲ್ಲಿ ನೇವಾರ್ ಬೌದ್ಧ ಕುಟುಂಬದಲ್ಲಿ ಜನಿಸಿದ್ದಾರೆ. ರ‍್ಯಾಪ್ ಮೂಲಕ ಜನರಿಗೆ ಪರಿಚಿತರಾದ ಬಾಲೇನ್, ಕರ್ನಾಟಕದ ವಿಶ್ವೇಶ್ವರಯ್ಯ ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಪಡೆದವರು. 2022ರಲ್ಲಿ ಕಠ್ಮಂಡುವಿನ ಮೇಯರ್ ಎಲೆಕ್ಷನ್‌ನಲ್ಲಿ 61,000 ಮತಗಳ ಅಂತರದಲ್ಲಿ ಪ್ರತಿಸ್ಪರ್ಧಿಯನ್ನು ಸೋಲಿಸಿದ್ದರು. ಸದ್ಯ ಬಾಲೇನ್ ಶಾ ಹೆಸರು ಅಷ್ಟಾಗಿ ಚರ್ಚೆಯಲ್ಲಿ ಇಲ್ಲದಿದ್ದರೂ ಸಹ ಅನೇಕ ಯುವಕರು ಬಾಲೇನ್ ಮಧ್ಯಂತರ ಸರ್ಕಾರದ ಮುಖ್ಯಸ್ಥ ಆಗಬೇಕು ಅಂತಿದ್ದಾರೆ.
ಸುಪ್ರೀಂಕೋರ್ಟ್ ಮಾಜಿ ಜಡ್ಜ್ ಕರ್ಕಿ: 1952ರ ಜೂನ್ 7ರಂದು ನೇಪಾಳದ ಬಿರತ್‌ನಗರದಲ್ಲಿ ಜನಿಸಿದ ಸುಶೀಲಾ ಕರ್ಕಿ, 1972ರಲ್ಲಿ ಬಿರತ್‌ನಗರದ ಮಹೇಂದ್ರ ಮೊರಾಂಗ್ ಕ್ಯಾಂಪ್‌ನಿಂದ ಬಿಎ ಪದವಿ ಪಡೆದಿದ್ದಾರೆ. 1975ರಲ್ಲಿ ವಾರಣಾಸಿಯಲ್ಲಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಪೊಲಿಟಿಕಲ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಬಳಿಕ 1978ರಲ್ಲಿ ನೇಪಾಳದ ತ್ರಿಭುವನ್ ವಿಶ್ವವಿದ್ಯಾಲಯದ ಕಾನೂನು ಪದವೀಧರರಾಗಿದ್ದಾರೆ.
1979ರಲ್ಲಿ ವಕೀಲೆಯಾಗಿ ಕೆಲಸ ಆರಂಭಿಸಿದ ಕರ್ಕಿ, 1985ರಲ್ಲಿ ಧರನ್‌ನಲ್ಲಿರುವ ಮಹೇಂದ್ರ ಮಲ್ಟಿಪಲ್ ಕ್ಯಾಂಪಸ್‌ನಲ್ಲಿ ಶಿಕ್ಷಕಿಯಾಗಿದ್ದರು. 2007ರಲ್ಲಿ ಸುಪ್ರೀಂಕೋರ್ಟ್‌ನ ತಾತ್ಕಾಲಿಕ ನ್ಯಾಯಾಧೀಶೆಯಾದ ಅವರನ್ನು 2009ರ ಜನವರಿಯಲ್ಲಿ ಕಾಯಂ ನ್ಯಾಯಾಧೀಶೆಯಾದರು. 2016ರ ಜುಲೈ 11 ರಿಂದ 2017ರ ಜೂನ್ 7ರವರೆಗೂ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿದ್ದರು. ಭಾರತ ನಾಯಕತ್ವದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರುವ ಸುಶೀಲಾ, ನರೇಂದ್ರ ಮೋದಿ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ.