ಗದಗ: ಮೃತನಾಗಿ 23 ವರ್ಷದ ನಂತರ ದಾಖಲೆಗಳಿಗೆ ಸಹಿ!

0
51

ಸೂರ್ಯನಾರಾಯಣ ನರಗುಂದಕರ
ಗದಗ:
ವ್ಯಕ್ತಿಯೋರ್ವ ಸಾವನ್ನಪ್ಪಿದ ದಶಕಗಳ ನಂತರ ಆತನ ಹೆಸರಿನ ಜಮೀನನ್ನು ಸಂಬಂಧಿಕರು, ರಿಯಲ್ ಎಸ್ಟೇಟ್ ಮಾಫಿಯಾ, ಅಧಿಕಾರಿಗಳು ಮಿಲಾಪಿಯಾಗಿ ಸುಳ್ಳು ದಾಖಲೆ ಸೃಷ್ಟಿಸಿ ಲಪಟಾಯಿಸಲು ಪ್ರಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಲೇ ವಾಟ್ನಿ ದಾಖಲೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ರದ್ದತಿ ಮಾಡಿಸಿದ್ದಾರೆ.

ಏನಾಗಿದೆ?: ಗದಗ ತಾಲೂಕಿನ ಸೊರಟೂರ ಗ್ರಾಮದಲ್ಲಿ ದೇವಪ್ಪ ತಾಯಿ ದೇವಕ್ಕ ಮಾದಣ್ಣವರ ಹೆಸರಿನಲ್ಲಿರುವ 3 ಎಕರೆ 20 ಗುಂಟೆ ಜಮೀನಿನ ಮಾಲಿಕ ನಿಧನರಾಗಿ ಸುಮಾರು 23 ವರ್ಷಗಳಾಗಿವೆ. ಜಮೀನನ್ನು ಆತನ ಸಂಬಂಧಿಕರು ಲಪಟಾಯಿಸಲು ಗದಗ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ವಾಟ್ನಿ ಪತ್ರ ತಯಾರಿಸಿ ನೋಂದಾಯಿಸಿದ್ದಾರೆ. ವಾಟ್ನಿ ಪತ್ರಕ್ಕೆ 23 ವರ್ಷದ ಹಿಂದೆ ನಿಧನವಾಗಿರುವ ದೇವಪ್ಪ ಮಾದಣ್ಣವರು ಆಗಮಿಸಿ ಸಹಿ ಮಾಡಿದಂತೆ ದಾಖಲೆ ಸೃಷ್ಟಿಸಲಾಗಿದೆ. ಮೃತ ವ್ಯಕ್ತಿಯ ಹೆಸರಿನಲ್ಲಿರುವ ಜಮೀನಿನ ವಾಟ್ನಿ ಪತ್ರದಲ್ಲಿ ಮೃತ ವ್ಯಕ್ತಿಗೂ ಸಹ ಪಾಲು ನೀಡಲಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಜಮೀನಿನ ಕಂದಾಯ ದಾಖಲೆಗಳಲ್ಲಿ ಹೆಸರು ದಾಖಲಿಸಲು ವಾಟ್ನಿ ಪತ್ರದ ಪ್ರತಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಲುಪಿದೆ. ಗ್ರಾಮ ಲೆಕ್ಕಾಧಿಕಾರಿ ಏಳು ತಿಂಗಳುಗಳ ಹಿಂದೆ ಸೊರಟೂರ ಗ್ರಾಮದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಹೆಸರು ದಾಖಲಿಸುವ ಮುನ್ನ ಗ್ರಾಮದಲ್ಲಿ ಸ್ಥಾನಿಕ ಪರಿಶೀಲನೆ ನಡೆಸಿದಾಗ ಜಮೀನು ಮಾಲಿಕ ದೇವಪ್ಪ ಮಾದಣ್ಣವರ ಮೃತನಾಗಿ 23 ವರ್ಷಗಳಾಗಿರುವದು ಬೆಳಕಿಗೆ ಬಂದಿದೆ. ಅವರು ಗದಗ ತಾಲೂಕು ಗ್ರಾಮ ಕಂದಾಯಾಧಿಕಾರಿಗಳಿಗೆ ಪತ್ರ ಬರೆದು ಮ್ಯುಟೇಶನ್ ರದ್ದುಪಡಿಸುವಂತೆ ಮನವಿ ಮಾಡಿದ್ದಾನೆಂದು ತಿಳಿದುಬಂದಿದೆ.

11ಇ ನಕ್ಷೆಗೂ ಮೃತ ವ್ಯಕ್ತಿಯ ಸಹಿ: ಯಾವುದೇ ಜಮೀನನ್ನು ವಾಟ್ನಿ ಮಾಡುವ ಸಂದರ್ಭದಲ್ಲಿ ಸರ್ವೆ ಇಲಾಖೆಯ ಅಧಿಕಾರಿಗಳು ಜಮೀನಿಗೆ ಆಗಮಿಸಿ ವಾಟ್ನಿ ಪತ್ರದಲ್ಲಿನ ವಿವರಗಳಂತೆ 11ಇ ನಕ್ಷೆ ತಯಾರಿಸುತ್ತಾರೆ. ಈ ನಕ್ಷೆ ತಯಾರಿಸಿದ ನಂತರ ವಾಟ್ನಿ ಪತ್ರದಲ್ಲಿರುವ ಎಲ್ಲ ಸದಸ್ಯರು ನಕ್ಷೆಯಲ್ಲಿನ ವಿವರಗಳು ಸರಿಯಿವೆಯೆಂದು ಸಹಿ ಮಾಡಬೇಕು. ಈ ವಾಟ್ನಿ ಪತ್ರಕ್ಕೆ ಸಂಬಂಧಿಸಿದಂತೆ ತಯಾರಿಸಲಾಗಿರುವ 11ಇ ನಕ್ಷೆಗೂ ಮೃತ ವ್ಯಕ್ತಿಯೇ ಸಹಿ ಮಾಡಿರುವದು ಬೆಳಕಿಗೆ ಬಂದಿದೆ.

ವಾಟ್ನಿ ಪತ್ರ ರದ್ದು: ಜಮೀನು ಮಾಲಿಕ ಸಾವನ್ನಪ್ಪಿದ ಸಂಗತಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಿಳಿದು ಕಂದಾಯ ಅಧಿಕಾರಿಗಳಿಗೆ ಮ್ಯುಟೇಶನ್ ರದ್ದುಪಡಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿದ ಕೂಡಲೇ ವಾಟ್ನಿ ದಾಖಲೆಯನ್ನು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ರದ್ದುಪಡಿಸಿಕೊಂಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

Previous articleನೇಪಾಳದ ಹಂಗಾಮಿ ಪ್ರಧಾನಿ ಸುಶೀಲಾ ಕರ್ಕಿ, ಯುವ ಪೀಳಿಗೆ ಹೊಸ ಆಶಾಕಿರಣ
Next articleದಾಂಡೇಲಿ: 7 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದೇಶಪಾಂಡೆ ಚಾಲನೆ

LEAVE A REPLY

Please enter your comment!
Please enter your name here