ಸಂಪಾದಕೀಯ: ಕೋಮುಸೌಹಾರ್ದಕ್ಕೆ ಧಕ್ಕೆ – ದುಷ್ಟಶಕ್ತಿಗಳ ದಮನ ಅಗತ್ಯ

0
46

ಸಂಯುಕ್ತ ಕರ್ನಾಟಕ ಪತ್ರಿಕೆ ಬುಧವಾರದ ಸಂಪಾದಕೀಯ

ಮದ್ದೂರಿನಲ್ಲಿ ಗಣೇಶನ ಮೆರವಣಿಗೆ ಕಾಲದಲ್ಲಿ ನಡೆದಿರುವ ಘಟನೆ ನಡೆದಿರುವುದನ್ನು ನೋಡಿದರೆ ಹೊರಗಿನ ಶಕ್ತಿಗಳು ಕಾನೂನನ್ನು ಕೈಗೆತ್ತಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಸರ್ಕಾರ ನಿರ್ದಾಕ್ಷಿಣ್ಯವಾಗಿ ಈ ಶಕ್ತಿಗಳನ್ನು ದಮನ ಮಾಡಬೇಕು. ಶಾಂತಿ ಕದಡಲು ಯಾರೇ ಆಗಿರಲಿ ಯಾವ ಕೋಮಿನವರೇ ಆಗಿರಲಿ ಅವರನ್ನು ಜಿಲ್ಲಾಧಿಕಾರಿ ಗಡಿಪಾರು ಮಾಡಲು ಆದೇಶಿಸಬೇಕು.

15 ದಿನ ಆ ಶಕ್ತಿಗಳನ್ನು ದೂರವಿಟ್ಟಲ್ಲಿ ಶಾಂತಿ ತಾನೇ ತಾನಾಗಿ ನೆಲೆಸುತ್ತದೆ. ಸಾಮಾನ್ಯವಾಗಿ ಸ್ಥಳೀಯರು ಯಾರೂ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಏಕೆಂದರೆ ಮಾರನೇ ದಿನ ಅವರವರೇ ಮುಖಗಳನ್ನು ನೋಡಬೇಕಾಗುತ್ತದೆ. ಇಂಥ ಕೃತ್ಯಗಳನ್ನು ನಡೆದಾಗ ಹೊರಗಿನವರ ಕೈವಾಡ ಇರುವುದು ಸ್ಪಷ್ಟ. ಅದರಿಂದ ಸ್ಥಳೀಯ ಪೊಲೀಸರಿಗೆ ಹೊರಗಿನ ಶಕ್ತಿಗಳು ಯಾವುದು ಎಂಬುದು ತಿಳಿದಿರುತ್ತದೆ. ಅವರ ಮೂಲಕ ಹೊರಹಾಕುವ ಕೆಲಸ ನಡೆದರೆ ಎಲ್ಲವೂ ಸಹಜ ಸ್ಥಿತಿಗೆ ಬರುತ್ತದೆ.

ಗಣೇಶದ ಉತ್ಸವದ ಸಮಯದಲ್ಲಿ ಗಲಭೆ ನಡೆಯುವುದು ಇಂದು ನಿನ್ನೆಯದಲ್ಲ. ಸ್ವಾತಂತ್ರ್ಯ ಪೂರ್ವದಲ್ಲೂ ನಡೆಯುತ್ತಿತ್ತು. ಆ ಚಾಳಿ ಇನ್ನೂ ಹೋಗಿಲ್ಲ. ಅವತ್ತಿನ ದಿನ ಇದ್ದಕ್ಕಿದ್ದಂತೆ ಮೂಲಭೂತವಾದಿಗಳು ಹುಟ್ಟಿಕೊಂಡು ಬಿಡುತ್ತಾರೆ. ಹೊಡೆದಾಟಕ್ಕೆ ಕಾರಣರಾಗಿ ಅಪಾಯದಿಂದ ಪಾರಾಗುತ್ತಾರೆ. ಸ್ಥಳೀಯ ಅಮಾಯಕರು ಉದ್ವೇಗಕ್ಕೆ ಒಳಗಾಗಿ ಸಾವು-ನೋವು ಅನುಭವಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ವಿಷಯದಲ್ಲಿ ಸ್ಥಳೀಯ ನಾಯಕರು ಎಚ್ಚರವಹಿಸಿದರೆ ಅನಾಹುತಗಳನ್ನು ತಪ್ಪಿಸಬಹುದು.

ಗಣೇಶನ ಮೆರವಣಿಗೆ ಮಸೀದಿ ಮುಂದೆ ಹೋಗುವುದು ಸಾಮಾನ್ಯ. ಎರಡು ಕೋಮಿನವರು ಎಲ್ಲಿಲ್ಲದ ಧಾರ್ಮಿಕ ಉನ್ಮಾದಕ್ಕೆ ಒಳಗಾಗುವುದು ಹಿಂದಿನಿಂದಲೂ ನಡೆಯುತ್ತ ಬಂದಿರುವ ನಾಟಕ. ಇದಕ್ಕೆ ಎರಡೂ ಕೋಮಿನ ನಾಯಕರು ಉತ್ತೇಜನ ನೀಡದೆ ಹೋದಲ್ಲಿ ಎಲ್ಲವೂ ತಣ್ಣಗಾಗುತ್ತದೆ. ರಾಜ್ಯದಲ್ಲಿ ಹಲವು ಕಡೆ ಗಣೇಶನ ಉತ್ಸವದ ಕಾಲದಲ್ಲಿ ಘರ್ಷಣೆಗಳು ನಡೆಯುತ್ತಿದ್ದವು. ಈಗ ಇವುಗಳು ಕಡಿಮೆಯಾಗಿವೆ. ಜನರ ತಿಳವಳಿಕೆ ಅಧಿಕಗೊಂಡಿದೆ. ಅವರು ಕೋಮುಭಾವನೆ ಕೆದಕುವ ಕೆಲಸಗಳಿಗೆ ಉತ್ತೇಜನ ನೀಡುವುದಿಲ್ಲ.

ಮೆರವಣಿಗೆಯಲ್ಲಿರುವ ದುಷ್ಟಶಕ್ತಿಗಳನ್ನು ಸ್ಥಳೀಯ ಪೊಲೀಸರು ಗುರುತಿಸುವುದು ಕಷ್ಟದ ಕೆಲಸವೇನಲ್ಲ. ಆದರೆ ಅವರು ಅಮಾಯಕರೊಂದಿಗೆ ಸೇರಿಕೊಂಡಿರುತ್ತಾರೆ. ಪೊಲೀಸರು ಲಾಠಿ ಬೀಸಿದಾಗ ದುಷ್ಟಶಕ್ತಿಗಳು ಪಾರಾಗಿ ಅಮಾಯಕರು ಹೊಡೆತ ತಿನ್ನುತ್ತಾರೆ. ಏಟು ತಿಂದವನು ಹಿಂದೂ ಆಗಿದ್ದರೆ ಹಿಂದೂ ಸಂಘಟನೆಗಳು ಸರ್ಕಾರವನ್ನು ದೂಷಿಸುತ್ತವೆ. ಅಲ್ಪಸಂಖ್ಯಾತರಿಗೆ ಏಟು ಬಿದ್ದಲ್ಲಿ ರಕ್ಷಣೆ ಇಲ್ಲ ಎಂಬ ಕೂಗು ಕೇಳಿ ಬರುತ್ತದೆ. ಎರಡೂ ಘೋಷಣೆಗಳು ಅಕ್ಷರಶಃ ಸುಳ್ಳು ಎಂಬುದು ಅಲ್ಲಿಯ ಜನರಿಗೆ ಗೊತ್ತಿರುತ್ತದೆ.

ಇಂಥ ಘರ್ಷಣೆಗಳಿಂದ ನಷ್ಟಕ್ಕೆ ಒಳಗಾಗುವವರು ಸ್ಥಳೀಯರು. ಮಾರನೇ ದಿನ ದೈನಂದಿನ ಚಟುವಟಿಕೆಗಳಲ್ಲಿ ಸ್ಥಳೀಯರು ತೊಡಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಯಾವುದೇ ಆರ್ಥಿಕ ಪ್ರಗತಿಯಾಗಬೇಕು ಎಂದರೆ ಕೋಮು ಸೌಹಾರ್ದ ಅಗತ್ಯ. ಈಗಲೂ ದೇಶದಲ್ಲಿ ಬೆಂಗಳೂರು ನಗರಕ್ಕೆ ಎಲ್ಲ ಭಾಷೆಗಳ ಜನ ಬಂದು ನೆಲೆಸಲು ಬಯಸುವುದು ಇಲ್ಲಿಯ ಕೋಮುಸೌಹಾರ್ದಕ್ಕೆ ಎಂಬುದನ್ನು ಮರೆಯಬಾರದು.

ಕೋಮು ಭಾವನೆಗೆ ಧಕ್ಕೆ ಬಂದಾಗ ಅವರು ತಪ್ಪು ಮಾಡಿದರು, ಇವರು ತಪ್ಪು ಮಾಡಿದರು ಎಂದು ಹೇಳುವುದು ಸುಲಭ. ತಪ್ಪು ಮಾಡುವುದನ್ನು ತಪ್ಪಿಸಲು ಎಲ್ಲ ಕೋಮಿನ ನಾಯಕರಲ್ಲಿ ಉದಾರ ಮನೋಭಾವ ಬೇಕು. ಎಲ್ಲಿ ನಾಯಕರು ದಕ್ಷರಾಗಿರುತ್ತಾರೋ ಅಲ್ಲಿ ಇಂಥ ಗಲಭೆಗೆ ಅವಕಾಶ ಇರುವುದಿಲ್ಲ. ಇಂದಿನ ಯುಗದಲ್ಲಿ ಶಿಕ್ಷಣವೂ ಸೇರಿದಂತೆ ಎಲ್ಲ ರಂಗದಲ್ಲೂ ಸಮಾನ ಅವಕಾಶಗಳಿರುವಾಗ ಕೋಮು ಭಾವನೆಯ ಅವಶ್ಯಕತೆಯೇ ಇಲ್ಲ.

ಆದರೂ ಪ್ರಾರ್ಥನಾ ಮಂದಿರಗಳಲ್ಲಿ ವಿಷಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಇದನ್ನು ದಮನ ಮಾಡುವುದು ಅಗತ್ಯ. ಅದನ್ನು ಆಯಾ ಧಾರ್ಮಿಕ ಮುಖಂಡರೇ ಮಾಡಬೇಕು. ಅದಕ್ಕೆ ಸರ್ಕಾರವನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಸಮಾನ ಅವಕಾಶ ಕಲ್ಪಿಸಿಕೊಡುವುದಷ್ಟೇ ಸರ್ಕಾರದ ಕೆಲಸ. ಕೋಮುಸೌಹಾರ್ದ ಭಾವನೆ ಉಳಿಸಿಕೊಂಡು ಹೋಗುವುದು ಅಲ್ಲಿಯ ಸಮಾಜದ ಕೆಲಸ. ಅದನ್ನು ಹೇಗೆ ಸಾಧಿಸಬೇಕು ಎಂಬುದನ್ನು ಅವರ ಪೂರ್ವಜರು ತೋರಿಸಿಕೊಟ್ಟು ಹೋಗಿರುತ್ತಾರೆ. ಅದನ್ನು ಅನುಸರಿಸಿದರೆ ಸಾಕು.

ಶಾಂತಿ ಕದಡಿದಾಗಲೇ ಶಾಂತಿ ಸಮಿತಿ ರಚನೆಯಾಗುವುದು. ಶಾಂತಿ ಇದ್ದಲ್ಲಿ ಸಮಿತಿ ಅಗತ್ಯವಿರುವುದಿಲ್ಲ. ಮದ್ದೂರಿನ ಯುವ ಪೀಳಿಗೆ ಈ ವಿಷಯದಲ್ಲಿ ಮುಕ್ತ ಚರ್ಚೆ ನಡೆಸಿ ಶಾಂತಿ ನೆಲೆಸುವಂತೆ ಮಾಡುವುದು ಇಂದಿನ ಅಗತ್ಯ. ಬೆಂಗಳೂರು – ಮೈಸೂರು ನಡುವೆ ಇರುವ ಮದ್ದೂರು ಪ್ರಗತಿ ಕಾಣಬೇಕು ಎಂದರೆ ಈಗ ನಡೆದ ಘಟನೆ ಮತ್ತೆ ಮರುಕಳಿಸದಂತೆ ಎಚ್ಚರವಹಿಸಬೇಕು. ಪ್ರತಿಯೊಂದು ಕಡೆ ಎಲ್ಲ ಕೋಮಿನಲ್ಲೂ ದುಷ್ಟಶಕ್ತಿಗಳು ಇದ್ದೇ ಇರುತ್ತವೆ. ಅವುಗಳನ್ನು ನಿಯಂತ್ರಿಸುವುದು ಅಲ್ಲಿಯ ಸಮಾಜದ ಕರ್ತವ್ಯ.

ಪೊಲೀಸರಿಗೆ ಒಪ್ಪಿಸುವ ಹಾಗಿದ್ದರೆ ರಾಜಕೀಯ ಹಸ್ತಕ್ಷೇಪ ಇರಬಾರದು. ದುಷ್ಟಶಕ್ತಿಗಳಿಗೆ ರಾಜಕೀಯ ಆಶ್ರಯ ಇಲ್ಲ ಎಂದಾದಲ್ಲಿ ಅಲ್ಲಿಂದ ಜಾಗ ಖಾಲಿ ಮಾಡುವುದು ಖಂಡಿತ. ಕಷ್ಟ ಪಟ್ಟು ದುಡಿದು ಸಂಪಾದಿಸುವ ಜನಸಾಮಾನ್ಯರಿಗೆ ಇವರಿಂದ ತುಂಬ ತೊಂದರೆ. ಬಹಿರಂಗವಾಗಿನ ವಿರೋಧಿಸುವ ಹಾಗಿಲ್ಲ. ಒಂದು ವೇಳೆ ಈ ಶಕ್ತಿಗಳ ಉಪಟಳ ಸಹಿಸಿಕೊಂಡರೆ ಸೆರಗಿನಲ್ಲಿ ಬೆಂಕಿ ಕಟ್ಟುಕೊಂಡಂತೆ ಅಪಾಯ ತಪ್ಪಿದ್ದಲ್ಲ.

Previous articleಚಿತ್ರದುರ್ಗ: ಹಿಂದೂ ಮಹಾಗಣಪತಿ ವಿಸರ್ಜನೆ, ಸಂಚಾರ ಮಾರ್ಗ ಬದಲು
Next articleಕಲಬುರಗಿ: ಮುಂಗಾರು ಹಂಗಾಮು ಬೆಳೆ ವಿಮೆ ಪರಿಹಾರ ಬಿಡುಗಡೆ

LEAVE A REPLY

Please enter your comment!
Please enter your name here