ಕನ್ನಡ ಸಾಹಿತ್ಯ-ಸಂಸ್ಕೃತಿ-ಚಿಂತನೆಗಳಿಗೆ ಹೊಸ ಬಾಗಿಲುಗಳನ್ನು ತೆರೆಸಿದ ಲೇಖಕ ಕೆ. ಪಿ. ಪೂರ್ಣಚಂದ್ರ ತೇಜಸ್ವಿ. ತಮ್ಮ ಅನುಭವಗಳನ್ನೇ ಕಥನಗಳನ್ನಾಗಿಸಿದ, ವೈಚಾರಿಕತೆ-ದಾರ್ಶನಿಕತೆಗಳ ಉಜ್ವಲ ಹೊಳಪನ್ನು ಕೊಟ್ಟ ಈ ಲೇಖಕರ ಜನ್ಮದಿನದ ಸಂದರ್ಭದಲ್ಲಿ (ಸೆ. 08) ಅವರ ಕಥಾದೃಷ್ಟಿಯ ಪರಿಶೋಧ ಇಲ್ಲಿದೆ.
ನರೇಂದ್ರ ರೈ ದೇರ್ಲ (ಲೇಖಕರು ಖ್ಯಾತ ಬರಹಗಾರರು, ನಿವೃತ್ತ ಕನ್ನಡ ಪ್ರಾಧ್ಯಾಪಕರು, ತೇಜಸ್ವಿಯವರ ಒಡನಾಡಿ)
ಕನ್ನಡದಲ್ಲಿ ಲಂಕೇಶ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಮೊದಲಾದವರೆಲ್ಲ ನವ್ಯ ಚಳವಳಿಯ ಮುಖ್ಯ ಆಯಕಟ್ಟಿನಲ್ಲಿ ಕಾಣಿಸಿಕೊಂಡು ಮನುಷ್ಯ ಮತ್ತು ಸಾಮಾಜಿಕ ಸಂಘರ್ಷಗಳನ್ನು ಕುರಿತು ಬರೆಯುತ್ತಿದ್ದಾಗ ಪೂರ್ಣಚಂದ್ರ ತೇಜಸ್ವಿ ಮಾತ್ರ ಅವರಿಗಿಂತ ಭಿನ್ನವಾಗಿ ಬರೆಯಲಾರಂಭಿಸಿದರು. ಅವರ ಮೊದಲ ಕಥೆ ಲಿಂಗ ಬಂದ ಪ್ರಜಾವಾಣಿಯ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯುತ್ತದೆ. ನವ್ಯಕ್ಕಿಂತ ಭಿನ್ನವಾಗಿದ್ದ ಆ ಕಥೆಯ ಹೊಸತನಕ್ಕಾಗಿ ಅನೇಕರು ಕಥೆಗಾರರನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಾರೆ. ನವ್ಯದ ಪ್ರವರ್ತಕರೇ ಆಗಿದ್ದ ಗೋಪಾಲಕೃಷ್ಣ ಅಡಿಗರು ಲಿಂಗ ಬಂದ ಕಥೆಯನ್ನು ಮೆಚ್ಚಿ ತೇಜಸ್ವಿಯವರಿಗೊಂದು ಪತ್ರವನ್ನೇ ಬರೆಯುತ್ತಾರೆ.
ಮೊದಲ ಕಥೆಯೇ ತೇಜಸ್ವಿ ಅವರಿಗೆ ಮುಂದೆ ತಾನು ಚೆನ್ನಾಗಿ ಬರೆಯಬಲ್ಲೆನೆಂಬ ಭರವಸೆಯನ್ನು ಉಂಟುಮಾಡುತ್ತದೆ. ನವ್ಯದಲ್ಲಿ ಗುರುತಿಸಿಕೊಂಡ ತೇಜಸ್ವಿ ಅವರಿಗೆ ನವ್ಯದ ಬಹುಮುಖ್ಯ ಕೃತಿಗಳು ಬರಹಗಾರನ ಸ್ವ ಆರಾಧನೆಯಂತೆ ಕಾಣುತ್ತವೆ. ತೇಜಸ್ವಿ ಇದನ್ನು ಸಂದರ್ಶನವೊಂದರಲ್ಲಿ ಬರಹಗಾರನ `ರೋಗಗ್ರಸ್ತ ಮನಃಸ್ಥಿತಿ’ ಎಂದೇ ಕರೆಯುತ್ತಾರೆ. ಬರಹಗಾರರಲ್ಲಿ ಇರಬೇಕಾದ ಜೀವನೋತ್ಸಾಹ, ಲವಲವಿಕೆ, ಹಾಸ್ಯ ಇವೆಲ್ಲ ಅವನ ಬರಹದಲ್ಲೂ ಇರಬೇಕು. ಯುದ್ಧ ನಂತರದ ಯುರೋಪಿನ ಭ್ರಮನಿರಸನದ ಹತಾಶೆಯ ಮನಃಸ್ಥಿತಿ ನಮ್ಮ ಬರಹಗಳಲ್ಲಿ ಇರಬಾರದು ಎಂಬುದು ಅವರ ಮೊದಲ ಕಾಲದ ಬರವಣಿಗೆಯ ಆಶಯವಾಗಿತ್ತು.
ತೇಜಸ್ವಿಯವರು ಮುಂದೆ ಬರೆಯುತ್ತ ಹೋದಂತೆ – ತಮ್ಮ ಮೇಲೆ ಪ್ರಭಾವ ಬೀರಿದ, ತನ್ನ ವ್ಯಕ್ತಿತ್ವವನ್ನು ರೂಪಿಸಿದ ಶಕ್ತಿಗಳ ಬಗ್ಗೆ ಹೇಳಲಾರಂಭಿಸಿದರು. ಕುವೆಂಪು ಅವರ ಕಲಾತ್ಮಕತೆ, ಕಾರಂತರ ಪ್ರಯೋಗಶೀಲತೆ ಮತ್ತು ಲೋಹಿಯಾ ಅವರ ಸಮಾಜವಾದವೇ ತನ್ನನ್ನು ರೂಪಿಸಿದ್ದು ಎಂದರು. ರಾಮನೋಹರ ಲೋಹಿಯಾ ಅವರೊಂದಿಗೆ ಶಾಂತವೇರಿ ಗೋಪಾಲಗೌಡರ ವ್ಯಕ್ತಿತ್ವದ ಪ್ರಭಾವ ಇದ್ದುದರಿಂದಲೇ ತೇಜಸ್ವಿಯವರು ಸಮಾಜವಾದಿ ಚಳವಳಿಯಲ್ಲಿ ಸಕ್ರಿಯವಾಗಿದ್ದರು. ಮುಂದುವರಿದಂತೆ ತನ್ನ ಕಾಲದ ಸಾಹಿತ್ಯ ಧೋರಣೆಗಳಿಗೂ ಮತ್ತು ತನ್ನ ಕಾಲದ ಸಮಾಜವಾದಿ ಚಿಂತನೆಗಳಿಗೂ ನಡುವೆ ಮುಚ್ಚಲಾರದ ಬಿರುಕುಗಳು ಗೋಚರವಾಗತೊಡಗಿತು.
ಕೆಲವು ಖ್ಯಾತ ನವ್ಯ ಬರಹಗಾರರು ತಮ್ಮ ಕಾವ್ಯದ ಉದ್ದೇಶ ಆಶಯ ಬಡವರಿಗಲ್ಲ ಎಂದು ನೇರವಾಗಿ ಹೇಳತೊಡಗಿದರು. ಅಡಿಗರು ನೇರವಾಗಿ ಬಲಪಂಥೀಯ ಜನಸಂಘದ ಅಭ್ಯರ್ಥಿಯಾಗಿ ಓಟಿಗೆ ನಿಂತರು. ಸನಾತನ ಹಿಂದೂಧರ್ಮದ ಕಟು ಪ್ರತಿಪಾದಕರಾದರು. ಇದೆಲ್ಲ ತೇಜಸ್ವಿ ಅವರಿಗೆ ಹಿತವಾಗಲಿಲ್ಲ. ತತ್ವ-ಸಿದ್ಧಾಂತಗಳನ್ನು ಬದಲಾಯಿಸಲು ತಯಾರಿಲ್ಲದ ತೇಜಸ್ವಿ ತಮ್ಮ ಎರಡನೆಯ ಕಥಾ ಸಂಕಲನ ಅಬಚೂರಿನ ಪೋಸ್ಟ್ ಆಫೀಸ್ ಕೃತಿಗೆ ಬರೆಯುವ ಹೊಸದಿಗಂತದೆಡೆಗೆ ಎಂಬ ಮುನ್ನುಡಿಯಲ್ಲಿ ತಮ್ಮ ಬದಲಾದ ನಿಲುವನ್ನು ಸಮರ್ಥಿಸಿ ಬರೆಯುತ್ತಾರೆ.
ನವ್ಯಪಂಥವನ್ನು ತ್ಯಜಿಸಿ ಹೊಸ ಪಂಥ ಸ್ವೀಕಾರದ ಸ್ಪಷ್ಟ ಕಾರಣಗಳನ್ನು ಕೊಟ್ಟು ಸಮರ್ಥಿಸುತ್ತಾರೆ. ಇಷ್ಟೇ ಅಲ್ಲ, ತೇಜಸ್ವಿಯವರು ನವ್ಯಕಾವ್ಯ ಚಳವಳಿಯಿಂದ ದೂರವಾಗುವುದಕ್ಕೆ ಸಾಹಿತ್ಯೇತರ ಕಾರಣಗಳೂ ಇವೆ. ಮುಖ್ಯವಾಗಿ ಅವರಿಗೆ ತಾನು ಓದಿದ ಪದವಿ, ತಂದೆಯವರ ಹೆಸರು ಪದನಾಮದ ಪ್ರಭಾವದಿಂದ ಯಾವುದಾದರೂ ಸರ್ಕಾರಿ, ಅದರಲ್ಲೂ ಆಯಕಟ್ಟಿನ ಪ್ರಾಧ್ಯಾಪಕ ಹುದ್ದೆಗೆ ಸೇರಬಹುದಿತ್ತು. ಆದರೆ ಅವರು ಮೈಸೂರು ತೊರೆದು ಮೂಡಿಗೆರೆಗೆ ಬಂದು ಕೃಷಿಯಲ್ಲಿ ತೊಡಗುತ್ತಾರೆ. ಭಾರತದ ಆತ್ಮಭಾಗವಾದ ಗ್ರಾಮದ ಬದುಕಿಗೆ ಸರಿಯುತ್ತಾರೆ. ಅವರೇ ಹೇಳುವಂತೆ ಮಾರ, ಪ್ಯಾರಾ, ಮಂದಣ್ಣ, ಬಿರಿಯಾನಿ ಕರಿಯಪ್ಪ, ಮಾಸ್ತಿ ಮುಂತಾದವರಿದ್ದ ಗ್ರಾಮಲೋಕಕ್ಕೆ ಬಂದು ಸೇರುತ್ತಾರೆ.
ಬುದ್ಧಿಗಿಂತ ಕೈ-ಕಾಲು ಹೆಚ್ಚು ದಂಡಿಸಿ ದುಡಿಯಬೇಕಾದ ಕೃಷಿ ಜಾಗವದು. ನವ್ಯ ಬರಹಗಾರರು ನಗರ ಮಧ್ಯಮ ವರ್ಗದ ಬದುಕು, ಅಂತರಂಗದ ಗೊಂದಲಗಳ ಕಡೆ ಹೆಚ್ಚು ಗಮನ ಕೊಟ್ಟರೆ; ತೇಜಸ್ವಿ ಹಳ್ಳಿ, ಅರಣ್ಯ, ಮಲೆನಾಡು, ರೈತ ಮನೆತನಗಳ ಬದುಕನ್ನು ಕಥೆಯ ಹೃದಯವನ್ನಾಗಿಸಿದರು.
ಆಗಲೇ ತೇಜಸ್ವಿಯ ಬರಹದಲ್ಲಿ ಪ್ರಕೃತಿ, ಪರಿಸರ, ಕೀಟ, ಹಕ್ಕಿ, ಮಳೆ, ನದಿ ಎಲ್ಲವೂ ಜೀವಂತ ಪಾತ್ರಗಳಂತೆ ಕಾಣಲಾರಂಭಿಸುತ್ತವೆ. ಅಲ್ಲಿ ಬಯಾಲಜಿ, ಪರಿಸರಶಾಸ್ತ್ರದ ಕುತೂಹಲ ತುಂಬಿತ್ತು. ಇತರ ನವ್ಯಕಾರರಲ್ಲಿ ಇದು ಇರಲಿಲ್ಲ ಅಥವಾ ಕಡಿಮೆ ಇತ್ತು. ನವ್ಯ ಸಾಹಿತ್ಯಕ್ಕೆ ಕೆಲವೊಮ್ಮೆ ಅತಿಯಾದ ಮನೋವೈಜ್ಞಾನಿಕ ಕಳಕಳಿ ಎಂಬ ಟೀಕೆ ಬಂದಿತ್ತು. ತೇಜಸ್ವಿಯ ಭಾಷೆ ಹಳ್ಳಿಯ ಹೊಲದಂತೆ ಸರಳ, ಗಾಳಿ-ಮಳೆಯಂತೆ ಜೀವಂತ. ಓದುಗನಿಗೆ ಹತ್ತಿರವಾಗಿತ್ತು. ಆಗ ಅವರಿಂದ ಸೃಷ್ಟಿಯಾಗುವುದೇ ಸ್ವರೂಪ, ನಿಗೂಢ ಮನುಷ್ಯರು ಮುಂತಾದ ಕೃತಿಗಳು.
ನಾಗರಿಕ ಜಗತ್ತಿನಿಂದ ದೂರವಾದ ತೋಟದಲ್ಲಿ ಹಳ್ಳಿ ಮನಸ್ಸಿನ ಅವರು ಫೋಟೋಗ್ರಫಿ ಚಿತ್ರಕಲೆ ಸಂಗೀತದ ಬಗ್ಗೆಯೂ ಆಸಕ್ತಿ ಮುಂದುವರಿಸಿದರು.
ಕ್ಯಾಮರ ಕೋವಿ ಗಾಳದ ಹಿಂದೆ ಉಳಿಯಬೇಕಾದ, ನಿಲ್ಲಬೇಕಾದ ಕಾಯಬೇಕಾದ ಧ್ಯಾನಾಸಕ್ತತೆಯು ಮುಂದೆ ಅವರ ಬರವಣಿಗೆಗೂ ಅನ್ವಯಿಸುತ್ತದೆ. ತೇಜಸ್ವಿಯವರ ಕೃತಿಗಳಲ್ಲಿ ಬರಹಗಾರ ಪಾತ್ರವಾಗಿ ಕಾಣಿಸಿಕೊಳ್ಳುವುದಕ್ಕಿಂತ ಘಟನಾವಳಿಗಳ ನಿರ್ವಚನಕಾರನಾಗಿ ಕೃತಿಯುದ್ದಕ್ಕೂ ಆವರಿಸಿಕೊಳ್ಳುತ್ತಾರೆ.
ಅಭಿವ್ಯಕ್ತಿಯ ದಾರಿಯಲ್ಲಿ ತೇಜಸ್ವಿ ಬಳಸಿದ ಅಭಿಜಾತ ಹಾಸ್ಯ, ಸರಳ ಶೈಲಿ, ಭಾಷೆ, ಕುತೂಹಲ, ಲವಲವಿಕೆ ಇವೆಲ್ಲ ನವ್ಯಪಂಥಕ್ಕಿಂತ ಭಿನ್ನವಾಗಿ ಜನರಿಗೆ ಹಿಡಿಸಿತು. ಇದರ ಹೊರತಾಗಿ ಅಭಿವ್ಯಕ್ತಿ ಬರವಣಿಗೆಗಾಗಿ ತೇಜಸ್ವಿ ರೂಪಿಸಿಕೊಂಡ ವಿಶಿಷ್ಟ ನಿರೂಪಣಾ ತಂತ್ರ ಶೈಲಿ ನಮಗೆ ಗೋಚರಿಸುವುದಿಲ್ಲ. ಆವರೆಗೆ ನುಡಿಚಿತ್ರಗಳನ್ನಷ್ಟೇ ಪತ್ರಿಕೆಗಳಿಗೆ ಬರೆಯುತ್ತಿದ್ದ ತೇಜಸ್ವಿಯವರು ಮೊದಲ ಬಾರಿಗೆ ತಾನು ಬರೆದ ಕರ್ವಾಲೋ ಕಾದಂಬರಿಯನ್ನು ಪ್ರಕಟಣೆಗಾಗಿ `ತುಷಾರ’ ಪತ್ರಿಕೆಗೆ ಕಳಿಸುತ್ತಾರೆ. ಆವರೆಗೆ ಅವರು ಅದೇ ಪತ್ರಿಕೆಗೆ ಪ್ರಕೃತಿ ಸಂಬಂಧಿತ ಚಿತ್ರಬರಹ-ನುಡಿ ಚಿತ್ರಗಳನ್ನು ಬರೆಯುತ್ತಿದ್ದರು.
ಪತ್ರಿಕೆಯ ಸಂಪಾದಕರಿಗೆ ತೇಜಸ್ವಿಯವರ ಹೊಸ ಬರವಣಿಗೆ ಕರ್ವಾಲೋ ಯಾವುದೇ ಕಾರಣಕ್ಕೂ ಕಾದಂಬರಿಯ ರೂಪದಲ್ಲಿ ಕಾಣಿಸಲೇ ಇಲ್ಲ. ಅದನ್ನು ಪ್ರಕಟಿಸಲು ಸಾಧ್ಯವೇ ಇಲ್ಲ ಎಂದು ತಿರಸ್ಕರಿಸುವ ಹಂತದಲ್ಲಿತ್ತು. ಇದರಿಂದ ತೇಜಸ್ವಿಯವರಿಗೆ ಬರವಣಿಗೆಯಲ್ಲಿ ಭಾಗಶಃ ನಿರಾಸಕ್ತಿ ಬಂದಿರಲೂಬಹುದು. ಆದರೆ ನವ್ಯಪಂಥವನ್ನು ಗಂಭೀರವಾಗಿ ಓದಿಕೊಂಡಿದ್ದ ಫೋಟೋಗ್ರಫಿಯಲ್ಲೂ ಆಸಕ್ತಿ ಇದ್ದ ಆಗಿನ ತುಷಾರದ ಸಂಪಾದಕರಾಗಿದ್ದ ಈಶ್ವರಯ್ಯನವರು ಆಡಳಿತ ಮಂಡಳಿಯನ್ನು ಒಪ್ಪಿಸಿ ಆ ಕಾದಂಬರಿಯನ್ನು ಧಾರಾವಾಹಿಯಾಗಿ ಪ್ರಕಟಿಸುತ್ತಾರೆ. ಕಳೆದ 50 ವರ್ಷಗಳಲ್ಲಿ ಕರ್ವಾಲೋ 85ಕ್ಕಿಂತ ಹೆಚ್ಚು ಬಾರಿ ಮರುಮುದ್ರಣಗೊಂಡಿದೆ!
ತೇಜಸ್ವಿ ಅವರ ಬದುಕು ಮತ್ತು ಬರಹಗಳಲ್ಲಿ ಅಸಾಧ್ಯವಾದ ಬೆರಗು ಸ್ವಚ್ಛಂದತೆ ಸ್ವಾತಂತ್ರ್ಯ ಇದೆ ಎಂದೆಲ್ಲ ಭ್ರಮಿಸುವ ನಾವು ಈಗ ಅವರ ಗೈರುಹಾಜರಿಯಲ್ಲಿ ನಮಗೆ ನಾವೇ ಕೇಳಬೇಕಾದ ಬಹುಮುಖ್ಯ ಪ್ರಶ್ನೆಯೂ ಇದೇ ಆಗಿದೆ. ಇದಕ್ಕೆ ಉತ್ತರವಾಗಿ ತೇಜಸ್ವಿಯವರ ಜೀವನದ ಉದ್ದೇಶ ನಮ್ಮ ಉದ್ದೇಶಕ್ಕಿಂತ ಹೇಗೆ ಭಿನ್ನ ಎಂಬುದನ್ನು ಮೊದಲು ಗಮನಿಸಬೇಕು.
ನಮ್ಮೆಲ್ಲರ ಬದುಕಿಗೆ ಒಂದು ಸಿದ್ಧನಕ್ಷೆ ಇರುತ್ತದೆ. ಆದರೆ ತೇಜಸ್ವಿ ಹಾಗಲ್ಲ. ಅವರು ಎಂದಿಗೂ ಬದುಕಲ್ಲಿ ತಾನು ಹೀಗೆ ಇರಬೇಕು ಎಂದು ಚೌಕಟ್ಟನ್ನು ಕಟ್ಟಿಕೊಂಡೇ ಇಲ್ಲ. ಅದನ್ನು ಮುರಿದು ಬದುಕುವ ಒಂದು ಮಾದರಿಯನ್ನು ದಕ್ಕಿಸಿಕೊಂಡದ್ದು ಅವರು ಅಗಾಧವಾಗಿ ಪ್ರೀತಿಸಿದ ಮತ್ತು ಬದುಕಿದ ಪ್ರಕೃತಿಯಿಂದಲೇ. ಅದೇ ನೈಜ ಬದುಕಿನ ಸರ್ವೇಸಾಧಾರಣ ದೃಶ್ಯಗಳನ್ನು ಆಗುಹೋಗುಗಳನ್ನು ತನ್ನ ಮತ್ತು ಪರಿಸರದ ಸಂಬಂಧಗಳನ್ನು ವಿಶಿಷ್ಟ ದೃಷ್ಟಿಕೋನದ ಚೌಕಟ್ಟಿನೊಳಗೆ ತಂದು ಬರೆಯಲಾರಂಭಿಸಿದರು. ಪರಿಸರದ ಕಥೆ, ಅಣ್ಣನ ನೆನಪು, ಕಿರಗೂರಿನ ಗಯ್ಯಾಳಿ ಇತ್ಯಾದಿಗಳಲ್ಲಿ ಇಂತಹ ಕ್ರಮಗಳನ್ನು ಗಮನಿಸಬಹುದು.
ತೇಜಸ್ವಿ ಅವರಿಂದ ಅನಂತರದ ಈವರೆಗಿನ ಓದುಗರು ಕಲಿಯಬೇಕಾದ ಅಂಶಗಳು, ಒಂದು: ಬದುಕಿನ ತಲ್ಲೀನತೆ, ಕುತೂಹಲ ಮತ್ತು ನಾವು ಬದುಕುವ ಪರಿಸರದೊಂದಿಗೆ ನಮ್ಮ ಸೂಕ್ಷ್ಮತೆ. ವರ್ತಮಾನದ ಯಂತ್ರಪ್ರೀತಿಯ ಮನಸ್ಸುಗಳಿಗೆ ಅಥವಾ ನಾವು ಬೆರಳಿಟ್ಟು ಆರೋಪ ಮಾಡುವ ಹೊಸ ತಲೆಮಾರಿಗೆ ಈ ಮೇಲಿನ ಮೂರು ಅಂಶಗಳು ತೇಜಸ್ವಿ ಬದುಕು ಮತ್ತು ಸಾಹಿತ್ಯದಿಂದ ದಕ್ಕುವ ಪರಿಣಾಮಕಾರಿ ಔಷಧಿಗಳು.