ಹುಬ್ಬಳ್ಳಿ: ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಆಗಿದ್ದು, ಸಮಾಜದಲ್ಲಿ ಮೂಡಿರುವ ಗೊಂದಲವನ್ನು ಬಗೆಹರಿಸಲು ಸೆ.19 ರಂದು ಹುಬ್ಬಳ್ಳಿ ನಗರದ ನೆಹರು ಮೈದಾನದಲ್ಲಿ ವೀರಶೈವ-ಲಿಂಗಾಯತ ಏಕತಾ ಸಮಾವೇಶ ಆಯೋಜಿಸಲಾಗಿದೆ ಎಂದು ಶಿರಹಟ್ಟಿಯ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
32 ಕ್ಕೂ ಹೆಚ್ಚು ಸ್ವಾಮೀಜಿಗಳ ಸಮ್ಮುಖದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಮತ್ತು ವೀರಶೈವವನ್ನು ಕೆಲವರು ಇಬ್ಭಾಗ ಮಾಡುವ ಷಡ್ಯಂತ್ರ ನಡೆಸುತ್ತಿದ್ದಾರೆ. ಇದನ್ನು ಖಂಡಿಸಿ ಹಾಗೂ ಉಂಟಾಗಿರುವ ಗೊಂದಲ ನಿವಾರಿಸಲು ಸಮಾವೇಶ ಆಯೋಜಿಸಲಾಗಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಹಾಗೂ ರಾಜ್ಯದ ವಿವಿಧ ಭಾಗಗಳ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸರ್ಕಾರ ನಡೆಸಲಿರುವ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತ ಎಂದೇ ನಮೂದಿಸಬೇಕು. 1904 ರಲ್ಲಿ ಸ್ಥಾಪನೆಯಾದ ವೀರಶೈವ ಲಿಂಗಾಯತ ಮಹಾಸಭಾದ ಅಂದಿನ ನಿಲುವು ಏನಿತ್ತೋ, ಈಗಲೂ, ಮುಂದೂ ಸಹ ಅದೇ ಆಗಿರಲಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕೆಂಬುದು ಕೆಲವರ ಹುನ್ನಾರ. ಇಬ್ಭಾಗ ಮಾಡುವ ಕೆಲವರ ಕಾರ್ಯಕ್ಕೆ ನಾವು ಖಂಡಿಸುತ್ತೇವೆ.
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಡೆದಾಗಲೂ ಕೂಡ ನಾವು ಖಂಡಿಸಿದ್ದೇವೆ. ಬಸವ ಸಂಸ್ಕೃತಿ ಯಾತ್ರೆ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆಯುತ್ತಿರುವುದು ಖಂಡನೀಯ. ಬಸವಣ್ಣನವರ ಹೆಸರು ಬಳಕೆ ಮಾಡಿಕೊಂಡು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವ್ಯಕ್ತಿ ಪ್ರಧಾನ ಧರ್ಮವಲ್ಲ: ವೀರಶೈವ ಲಿಂಗಾಯತ ತತ್ವ ಪ್ರಧಾನ ಧರ್ಮವೇ ಹೊರತು, ವ್ಯಕ್ತಿ ಪ್ರಧಾನ ಧರ್ಮವಲ್ಲ. ಬಸವ ಸಂಸ್ಕೃತಿ ಯಾತ್ರೆ ಹೆಸರಲ್ಲಿ ವೈದಿಕ ಸಂಸ್ಕೃತಿಯನ್ನು ವಿರೋಧಿಸುತ್ತಿದ್ದಾರೆ. ಆ ಯಾತ್ರೆಯ ನೇತೃತ್ವ ವಹಿಸಿದವರೇ ವೈದಿಕ ಪಾಠಶಾಲೆ ನಡೆಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಿಂದಗಿಯ ಪ್ರಭು ಸಾರಂಗಧರ ಶಿವಾಚಾರ್ಯ ಸ್ವಾಮೀಜಿ, ಮುಕ್ತಿಮಂದಿರ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠ ಸ್ವಾಮೀಜಿ, ಉಪ್ಪಿನಬೆಟಗೇರಿ ಮಠದ ಸ್ವಾಮೀಜಿ, ಜಯಶಾಂತ ಲಿಂಗೇಶ್ವರ ಸ್ವಾಮೀಜಿ ಸೇರಿದಂತೆ 32 ಕ್ಕೂ ಹೆಚ್ಚು ಸ್ವಾಮೀಜಿಗಳು ಉಪಸ್ಥಿತರಿದ್ದರು.