ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿದ್ದ ಕರ್ನಾಟಕ ಸರ್ಕಾರ ಈಗ ಮತ್ತೊಂದು ಘೋಷಣೆ ಮಾಡಿದೆ. ರಾಜ್ಯ ಸರ್ಕಾರ ನಿರ್ಮಿಸಲಿರುವ ಭಾರತದ ಮೊದಲ ಇಂಟ್ರಿಗ್ರೇಟೆಡ್ ಕೃತಕ ಬುದ್ಧಿಮತ್ತೆ (ಎಐ) ನಗರವನ್ನು ರಾಮನಗರ ತಾಲೂಕಿನ ಬಿಡದಿಯಲ್ಲಿ ನಿರ್ಮಿಸಲು ಮುಂದಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಎಐ ನಗರದ ಲಾಂಛನ ಹಾಗೂ ವಿಡಿಯೋವನ್ನು ಅನಾವರಣಗೊಳಿಸಿದರು. “ದೇಶದ ಮೊದಲ ಎಐ ನಗರವಾಗಿದ್ದು, ಗ್ರೇಟರ್ ಬೆಂಗಳೂರು ಇಂಟಿಗ್ರೇಟಡ್ ಟೌನ್‍ಶಿಪ್ ಆಗಿದೆ. ಇದನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲಾಗುತ್ತಿದೆ. ಈ ನಗರವೂ ಬೆಂಗಳೂರಿನ ಮುಂದಿನ ಕೇಂದ್ರ ವ್ಯವಾಹಾರದ ಜಿಲ್ಲೆಯಾಗಲಿದೆ. ಈ ನಗರವನ್ನು ಕೆಲಸ-ವಾಸ- ಉಲ್ಲಾಸದ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ” ಎಂದರು.
“ವ್ಯಾಪಾರ ಮತ್ತು ಆರ್ಥಿಕತೆ, ಉದ್ಯೋಗವಕಾಶಗಳು, ಸಿದ್ಧ ಉದ್ಯಮಗಳು, ಬೆಂಗಳೂರು ಸಂಚಾರ ದಟ್ಟಣೆಕಡಿಮೆ ಮಾಡುವುದು, ಕೌಶಲ ಕೇಂದ್ರ, ಜೀವನಮಟ್ಟ ಸುಧಾರಣೆ, ಆರೋಗ್ಯ ಕೇಂದ್ರದ ಸುಧಾರಣೆಯನ್ನು ಈ ನಗರ ಒಳಗೊಂಡಿದೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
“ಒಟ್ಟು 25ಸಾವಿರ ಕೋಟಿ ವೆಚ್ಚದಲ್ಲಿಈ ನಗರವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ 10 ಸಾವಿರ ಕೋಟಿ ಭೂ ಸ್ವಾಧೀನಾ ಪ್ರಕ್ರಿಯೆಗೆ ಬಳಸಿಕೊಳ್ಳಲಾಗುತ್ತದೆ. ಜೊತೆಗೆ, 15ಸಾವಿರ ಕೋಟಿ ವೆಚ್ಚದಲ್ಲಿ ಸುಸಜ್ಜಿತ ನಗರ ನಿರ್ಮಿಸಲಾಗುತ್ತದೆ” ಎಂದು ಯೋಜನೆಯ ವಿವರ ನೀಡಿದರು.
“ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಈ ಯೋಜನೆಯನ್ನು 2006ರಲ್ಲಿ ಜಾರಿಗೆ ತಂದಿದ್ದರು. 2010ರಲ್ಲಿ ಬಿ.ಎಸ್.ಯಡಿಯೂರಪ್ಪ ಸಮಗ್ರ ಪಟ್ಟಣ ಯೋಜನೆ ಜಾರಿಗೆ ತಂದರು. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ 2023ರಲ್ಲಿ ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಜತೆಗೆ, ಡಿನೋಟಿಫಿಕೇಷನ್ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ನನ್ನ ಅವಧಿಯಲ್ಲಿ ಇದನ್ನು ವಾಪಸ್ಸು ಪಡೆಯಲಾಗುವುದಿಲ್ಲ” ಎಂದು ಘೋಷಣೆ ಮಾಡಿದರು.
ನೂತನ ಸಿಟಿಗೆ ಮೆಟ್ರೋ: “ನೂತನ ಸಿಟಿಗೆ ಮೆಟ್ರೋ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. ಎಸ್‍ಟಿಆರ್‍ಆರ್ ರಸ್ತೆಯಿಂದ 9 ಕಿ.ಮೀ, ನೈಸ್ ರಸ್ತೆಯಿಂದ 11 ಕಿ.ಮೀ, ಮೈಸೂರು ಬೆಂಗಳೂರು ಹೆದ್ದಾರಿಯಿಂದ 5 ಕಿ.ಮೀ. ಹಾಗೂ ಬೆಂಗಳೂರು ದಿಂಡಿಗಲ್ ಹೆದ್ದಾರಿಯಿಂದ 2.2 ಕಿ.ಮೀ. ಇದ್ದು ಅದನ್ನು ಜೋಡಿಸುವ ಕೆಲಸ ಮಾಡಲಾಗುತ್ತಿದೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
“ಅಂತಿಮ ಅಧಿಸೂಚನೆಯಿಂದ ಹಿಡಿದು ಹಣಕಾಸು ಪರಿಹಾರ ನೀಡುವರೆಗೆ ಜಾಗ ಹಸ್ತಾಂತರಿಸಿದವರಿಗೆ ಭೂ ಮಾಲೀಕರಿಗೆ ಜೀವನೋಪಾಯ ಬೆಂಬಲಕ್ಕೆ ವಾರ್ಷಿಕ ಅನುದಾನ ನೀಡಲಾಗುತ್ತದೆ. ಖುಷ್ಕಿ ಭೂಮಿ ಹೊಂದಿರುವ ರೈತರಿಗೆ ವಾರ್ಷಿಕ ಒಂದು ಎಕರೆಗೆ 30ಸಾವಿರ, ತರಿ ಭೂಮಿ ಹೊಂದಿರುವವರಿಗೆ ವಾರ್ಷಿಕ 40ಸಾವಿರ, ಭಾಗಾಯ್ತು ಭೂಮಿಗೆ 50ಸಾವಿರ ಹಾಘೂ ಭೂ ರಹಿತರಿಗೆ 25ಸಾವಿರ ಹಣ ನೀಡಲಾಗುತ್ತದೆ” ಎಂದರು.
“ಜನ ಸಾಮಾನ್ಯರ ಬದುಕು ಏಳಿಗೆಯಾಗಬೇಕು, ಎಲ್ಲರ ಬದುಕಿನಲ್ಲಿ ಹೊಸ ರೂಪ ಕಾಣಬೇಕು, ಎಲ್ಲರ ಆಸ್ತಿ ಮೌಲ್ಯ ಹೆಚ್ಚಳವಾಗಬೇಕು ಎನ್ನುವ ಕಾರಣಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿದ್ದೇವೆ. ಕೆಲವರು ರಾಮನಗರ ಜಿಲ್ಲೆ ಎಂದು ಹೇಳುತ್ತಿದ್ದರು. ಇದು ಬೆಂಗಳೂರು ದಕ್ಷಿಣ ಜಿಲ್ಲೆ. ಶಾಸಕರಾದ ಹುಲಿಕಟ್ಟೆ ಬಾಲಕೃಷ್ಣ, ದೊಡ್ಡ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಹೀಗೆ ನಮ್ಮ ಗುರುತನ್ನು ಅಳಿಸಲು ಸಾಧ್ಯವಿಲ್ಲ. ಅದೇ ರೀತಿ ನಾವು ಬೆಂಗಳೂರು ಜಿಲ್ಲೆಯವರಾದ ನಮ್ಮ ಅಸ್ಮಿತೆಯನ್ನು ಬಿಟ್ಟು ಕೊಡಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್, “ಕುಮಾರಸ್ವಾಮಿ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಶೇ.78 ರಷ್ಟು ಮಂದಿ ಪರಿಹಾರ ನೀಡಿ ಎಂದು ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಶೇ.18 ರಷ್ಟು ಮಂದಿ ಮಾತ್ರ ಒಪ್ಪಿಗೆ ನೀಡಿಲ್ಲ. ಕಾನೂನಾತ್ಮಕವಾಗಿ ನ್ಯಾಯ ಒದಗಿಸಿಕೊಡಲಾಗುತ್ತದೆ. ಜತೆಗೆ, ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೆ ಭೂ ಪರಿಹಾರದ ಮೊದಲ ಚೆಕ್ ವಿತರಣೆ ಮಾಡಲಾಗುತ್ತದೆ” ಎಂದು ಹೇಳಿದರು.