Home Advertisement
Home ಕ್ರೀಡೆ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌: 3ನೇ ಸುತ್ತು ಗೆದ್ದ ಮುಂಬೈನ ಕಿಯಾನ್ ಶಾ – ಬೆಂಗಳೂರಿನ ರಿಷಿಕ್‌...

ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌: 3ನೇ ಸುತ್ತು ಗೆದ್ದ ಮುಂಬೈನ ಕಿಯಾನ್ ಶಾ – ಬೆಂಗಳೂರಿನ ರಿಷಿಕ್‌ ರೆಡ್ಡಿಗೆ 2ನೇ ಸ್ಥಾನ

0
131

ಚೆನ್ನೈ : ಮುಂಬೈನ 14 ವರ್ಷದ ಕಿಯಾನ್ ಶಾ ಅವರು ಮೆಕೊ FMSCI ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌ನ ಮೂರನೇ ಸುತ್ತಿನಲ್ಲಿ ಜಯಗಳಿಸಿದ್ದಾರೆ. ಇದು ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಅವರ ಮೊದಲ ಗೆಲುವು. ಮದ್ರಾಸ್ ಇಂಟರ್ನ್ಯಾಷನಲ್ ಕಾರ್ಟಿಂಗ್ ಅರೆನಾ (MIKA)ದಲ್ಲಿ ನಡೆದ ಸ್ಪರ್ಧೆಯಲ್ಲಿ ಟೀಮ್ ರಾಯೊ ರೇಸಿಂಗ್‌ನ ಪರ ಸ್ಪರ್ಧಿಸಿದ ಕಿಯಾನ್ ಅವರು ರೇಸ್‌ನುದ್ದಕ್ಕೂ ಪ್ರಾಬಲ್ಯ ಮೆರೆದು ಜೂನಿಯರ್‌ ರೊಟಾಕ್ಸ್‌ ವಿಭಾಗದ ಫೈನಲ್‌ನಲ್ಲಿ ಗೆಲುವು ಸಾಧಿಸಿದರು.

ಕಿಯಾನ್‌ ರೇಸ್‌ ವಾರವನ್ನು ಉತ್ತಮವಾಗಿ ಆರಂಭಿಸಿದರು. ಅವರು ಎರಡೂ ಅಧಿಕೃತ ಅಭ್ಯಾಸ ಅವಧಿಗಳಲ್ಲಿ ಅಗ್ರಸ್ಥಾನ ಪಡೆದಿದ್ದಲ್ಲೇ, ಅತಿವೇಗದ ರೇಸರ್ ಆಗಿ ಹೊರಹೊಮ್ಮಿ ಪೋಲ್‌ ಪೊಸಿಷನ್‌ ಸಹ ಗಳಿಸಿದರು. ಅರ್ಹತಾ ಲ್ಯಾಪ್‌ ಅನ್ನು 50.530 ಸೆಕೆಂಡ್‌ಗಳಲ್ಲಿ ಮುಕ್ತಾಯಗೊಳಿಸಿದರು. 18 ರೇಸರ್‌ಗಳ ಪೈಕಿ 8 ಮಂದಿಯನ್ನು ಕಿಯಾನ್‌ ಕೇವಲ ಅರ್ಧ ಸೆಕೆಂಡ್‌ ಕಡಿಮೆ ಸಮಯದಲ್ಲಿ ಹಿಂದಿಕ್ಕಿದರು.

ಕಿಯಾನ್‌ಗೆ ಭಾರೀ ಪೈಪೋಟಿ ನೀಡಿದ ಚೆನ್ನೈನ ಶಿವಾನ್‌ ಕಾರ್ತಿಕ್‌ (50.672 ಸಕೆಂಡ್‌) ಹಾಗೂ ಎಶಾಂತ್‌ ವೆಂಕಟೇಶನ್‌ (50.731 ಸೆಕೆಂಡ್‌) ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು. ರೇಸ್‌, ಇಲ್ಲಿನ 1.2 ಕಿ.ಮೀ. ಉದ್ದದ ಎಫ್‌ಐಎ ಗ್ರೇಡ್‌ 1 ಅಂತಾರಾಷ್ಟ್ರೀಯ ಕಾರ್ಟಿಂಗ್‌ ಸರ್ಕ್ಯೂಟ್‌ನಲ್ಲಿ ನಡೆಯಿತು.

‘ನಾನು ಈ ರೇಸ್‌ಗೆ ಸಾಕಷ್ಟು ಸಿದ್ಧತೆ ನಡೆಸಿದ್ದೆ. ನನ್ನ ಸಂಪೂರ್ಣ ಗಮನ ಗೆಲ್ಲುವುದರ ಮೇಲೆಯೇ ಇತ್ತು. ನನಗೆ ಅತ್ಯುತ್ತಮ ಗುಣಮಟ್ಟದ ಕಾರ್ಟ್‌ ಸಿದ್ಧಪಡಿಸಿ ಕೊಟ್ಟ ನನ್ನ ತಂಡಕ್ಕೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ನನ್ನ ಪೋಷಕರೇ ನನ್ನ ಅತಿದೊಡ್ಡ ಶಕ್ತಿ. ಅವರ ಬೆಂಬಲವಿಲ್ಲದೆ, ನನಗೆ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಅವರಿಗೂ ನಾನು ಧನ್ಯವಾದ ಹೇಳುತ್ತೇನೆ’ ಎಂದು ಗೆಲುವಿನ ಬಳಿಕ ಕಿಯಾನ್‌ ನುಡಿದರು.

8 ಬಾರಿ ರಾಷ್ಟ್ರೀಯ ಚಾಂಪಿಯನ್‌ ಹಾಗೂ ರಾಯೋ ರೇಸಿಂಗ್‌ನ ಸ್ಥಾಪನ ರಾಯೋ ‘ನಾನು ನೋಡಿದ ಕೆಲವು ಉತ್ತಮ ರೇಸ್‌ಕ್ರಾಫ್ಟ್ ಕಿಯಾನ್‌ನಲ್ಲಿದೆ. ಈ ಗೆಲುವು ಹಲವು ದಿನಗಳಿಂದ ಬಾಕಿ ಇತ್ತು. ಆತನಲ್ಲಿ ವೇಗವಿದೆ ಮತ್ತು ಸಾಕಷ್ಟು ಪರಿಶ್ರಮ ವಹಿಸುತ್ತಿದ್ದಾನೆ. ಇದು ಬಹಳ ಅರ್ಹವಾದ ಗೆಲುವು ಮತ್ತು ಇದು ಕೇವಲ ಪ್ರಾರಂಭವಷ್ಟೇ ಎಂದು ನಾನು ವಿಶ್ವಾಸದಿಂದ ಹೇಳುಬಲ್ಲೆ’ ಎಂದರು.

ಹೀಟ್ 1 ಕಿಯಾನ್ ಪೋಲ್‌ನಿಂದ ಉತ್ತಮ ಆರಂಭ ಮಾಡುವುದರೊಂದಿಗೆ ಪ್ರಾರಂಭವಾಯಿತು. ಅವರು ಬಹಳ ಬೇಗ ಎಲ್ಲರನ್ನು ಹಿಂದಿಕ್ಕಿ ಮುನ್ನುಗ್ಗಿದರು. ಅವರ ಹಿಂದೆ, ಪುಣೆಯ ಕ್ರೆಸ್ಟ್ ಮೋಟರ್‌ಸ್ಪೋರ್ಟ್ಸ್‌ನ ಆರಫಾತ್ ಶೇಖ್ ಮತ್ತು ಸ್ವರ್ಣವ್ ದಾಸ್ ಇಬ್ಬರೂ, ಚೆನ್ನೈನ ರೇಸ್‌ಗಳನ್ನು ಹಿಂದಕ್ಕೆ ಹಾಕಿ ಕಿಯಾನ್‌ ಜೊತೆ ನೇರಾನೇರ ಸ್ಪರ್ಧೆ ನಡೆಸಿದರು. ಆದರೆ, ಕಿಯಾನ್‌ 2.5 ಸೆಕೆಂಡ್ ಅಂತರ ಕಾಯ್ದುಕೊಂಡು ಆರಾಮದಾಯಕ ಗೆಲುವು ಸಾಧಿಸಿದರು.

ಹೀಟ್ 2ನಲ್ಲೂ ಕಿಯಾನ್‌ ಆರಂಭಿಕ ಮುನ್ನಡೆ ಪಡದರು. ಆದರೆ ಶೇಖ್‌ ಅತ್ಯುತ್ತಮ ಚಾಲನೆಯೊಂದಿಗೆ ರೇಸ್‌ ಗೆದ್ದರು. ವೆಂಕಟೇಶನ್ ಮೂರನೇ ಸ್ಥಾನ ಪಡೆದರು. ಪ್ರಮುಖ ಪ್ರಿ-ಫೈನಲ್‌ನಲ್ಲಿ ಕಿಯಾನ್ ಮತ್ತೊಮ್ಮೆ ಪೋಲ್ ಪೊಸಿಷನ್‌ನಿಂದ ಆರಂಭಿಸಿದರು. ಅವರು ಅದ್ಭುತವಾದ ಆರಂಭ ಮಾಡಿದರು, ಆದರೆ ಲ್ಯಾಪ್ 2 ರಲ್ಲಿ ಅಪಘಾತವಾಯಿತು, ಹೀಗಾಗಿ ರೇಸ್ ಅನ್ನು ಪುನರಾರಂಭಿಸಲಾಯಿತು ಮತ್ತು ಮತ್ತೊಮ್ಮೆ ಕಿಯಾನ್ ಅತ್ಯುತ್ತಮ ಆರಂಭವನ್ನು ಮಾಡಿದರು. ಪ್ರತಿ ಲ್ಯಾಪ್‌ನಲ್ಲೂ ಅಂತರ ಹೆಚ್ಚಿಸಿಕೊಳ್ಳುತ್ತಾ ಸಾಗಿದ ಕಿಯಾನ್‌ 14 ಲ್ಯಾಪ್‌ಗಳ ಪ್ರಿ ಫೈನಲ್‌ ಅನ್ನು ಗೆದ್ದರು.

ಫೈನಲ್‌ನಲ್ಲಿ ಮತ್ತೊಮ್ಮೆ ಪೋಲ್‌ ಪೊಸಿಷನ್‌ನಿಂದ ರೇಸ್‌ ಆರಂಭಿಸಿದ ಕಿಯಾನ್‌, ಆಕರ್ಷಕ ರೇಸ್‌ ಮೂಲಕ ಗೆಲುವು ಸಾಧಿಸಿದರು. ಬೆಂಗಳೂರಿನ ರಿಷಿಕ್‌ ರೆಡ್ಡಿ 2ನೇ ಹಾಗೂ ಚೆನ್ನೈನ ಎಶಾಂತ್‌ ವೆಂಕಟೇಶನ್‌ 3ನೇ ಸ್ಥಾನ ಪಡೆದರು. ಕಿಯಾನ್ ಎರಡು ವರ್ಷಗಳ ಹಿಂದೆ ರಾಯೊ ರೇಸಿಂಗ್‌ನೊಂದಿಗೆ 2-ಸ್ಟ್ರೋಕ್ ಕಾರ್ಟಿಂಗ್ ಪ್ರಾರಂಭಿಸಿದರು. ಈ ವರ್ಷ ಅವರು ಏಷ್ಯನ್ ರೊಟಾಕ್ಸ್ ಚಾಂಪಿಯನ್‌ಶಿಪ್‌ನಲ್ಲೂ ಪಾಲ್ಗೊಂಡಿರುವ ಅವರು, ಸದ್ಯ ಎರಡು ಪೋಡಿಯಂ ಫಿನಿಶ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

Previous articleಚಿತ್ರದುರ್ಗ-ಬೆಂಗಳೂರು ಹೆದ್ದಾರಿ ಟೋಲ್ ಸಂಗ್ರಹ ಡಿಸಿ ಗರಂ!
Next articleಮುಂದಿನ ವರ್ಷಾಂತ್ಯಕ್ಕೆ BRB ಎಂಟ್ರಿ

LEAVE A REPLY

Please enter your comment!
Please enter your name here