ಚಿಕ್ಕಜಾಲ ಬಳಿ ನಮ್ಮ ಮೆಟ್ರೋ ನಿಲ್ದಾಣ, ಜನರಿಗೆ ನಿರಾಸೆ

0
47

ಚಿಕ್ಕಜಾಲ ಬಳಿ ನಮ್ಮ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದ ಜನರಿಗೆ ಕಹಿಸುದ್ದಿ. ಕೆ.ಆರ್.ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ನೀಲಿ ಮಾರ್ಗದಲ್ಲಿ (ಫೇಸ್-2ಬಿ) ಚಿಕ್ಕಜಾಲ ಬರುತ್ತದೆ.

ಚಿಕ್ಕಜಾಲ ಬಳಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಕೋರಿ ಚಿಕ್ಕಜಾಲ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾ.ಸಿ.ಎಂ.ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಕುರಿತು ಆದೇಶ ನೀಡಿದೆ.

ಸಂವಿಧಾನದ ಆರ್ಟಿಕಲ್ 226ರ ಅಡಿಯಲ್ಲಿ ಮೆಟ್ರೋ ನಿಲ್ದಾಣ ಎಲ್ಲಿ ನಿರ್ಮಿಸಬೇಕು? ಎಂಬ ನಿರ್ದಿಷ್ಟ ಸ್ಥಳ ಗುರುತಿಸುವ ಬಗ್ಗೆ ಪರಿಶೀಲಿಸುವ ಅಗತ್ಯತೆ ನ್ಯಾಯಾಲಯಕ್ಕಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು. ಮುಂದುವರಿದು, ಮೆಟ್ರೋ ಮಾರ್ಗದ ಪಥದನಕಾಶೆ ಹಾಗೂ ನಿಲುಗಡೆಗಳ ತೀರ್ಮಾನವನ್ನು ಸಂಬಂಧಪಟ್ಟ ಪ್ರಾಧಿಕಾರಗಳೇ ತೆಗೆದುಕೊಳ್ಳಬೇಕಾಗುತ್ತದೆ ಹಾಗೂ ಇದು ನ್ಯಾಯಾಂಗದ ವ್ಯಾಪ್ತಿಗೆ ಒಳಪಡುವುದಿಲ್ಲ.

ಅಲ್ಲದೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರವನ್ನು ಸಂಪರ್ಕಿಸುವ ಮಾರ್ಗದಲ್ಲಿ ಎಷ್ಟು ಸಂಖ್ಯೆಯ ನಿಲುಗಡೆ ಇರಬೇಕೆಂಬುದನ್ನು ಸಂಬಂಧಪಟ್ಟ ಪ್ರಾಧಿಕಾರವೇ ನಿರ್ಧರಿಸಬೇಕಾಗುತ್ತದೆ ಎಂದು ವಿಭಾಗೀಯ ಪೀಠ ಹೇಳಿತು.

ವಿಮಾನ ನಿಲ್ದಾಣದ ಮೆಟ್ರೋ ಮಾರ್ಗದಲ್ಲಿ ಚಿಕ್ಕಜಾಲ ಬಳಿ ಮೆಟ್ರೋ ನಿಲ್ದಾಣ ನಿರ್ಮಿಸಲು ರಾಜ್ಯ ಸರಕಾರ ರೂಪಿಸಿದ್ದ ಯೋಜನೆಯ ದಾಖಲೆಗಳನ್ನು ಒದಗಿಸುವಂತೆ ನಿರ್ದೇಶನ ನೀಡಬೇಕು. ಅಲ್ಲದೇ 2023-24ರ ಮೆಟ್ರೊ ರೈಲು ಜಾಲದ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದಂತೆ ಚಿಕ್ಕಜಾಲ ಬಳಿಯೇ ಮೆಟ್ರೋ ನಿಲ್ದಾಣದ ಸ್ಥಾಪಿಸುವಂತೆ ಬಿಎಂಆರ್‌ಸಿಎಲ್ ಯಥಾವತ್ತಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

ಬಿಎಂಆರ್‌ಸಿಎಲ್‌ನ ನಮ್ಮ ಮೆಟ್ರೋ ಯೋಜನೆಯ ನೀಲಿ ಮಾರ್ಗ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ಇನ್ನೂ ಒಂದೂವರೆ ವರ್ಷದಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ಅಂದಾಜಿಸಲಾಗಿದೆ. ನೀಲಿ ಮಾರ್ಗ ಒಟ್ಟು 58.19 ಕಿ.ಮೀ.ಉದ್ದವಿದೆ. ಒಟ್ಟು 30 ನಿಲ್ದಾಣಗಳಿದ್ದು, ಈ ಯೋಜನೆಯ ವೆಚ್ಚ ಸುಮಾರು 14,788 ಕೋಟಿ ರೂ.ಗಳು.

2026ರ ಸೆಪ್ಟೆಂಬರ್‌ ಒಳಗೆ ನೀಲಿ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ. ನೀಲಿ ಮಾರ್ಗವನ್ನು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ-ಕೆಆರ್ ಪುರ (ಹಂತ 2-ಎ) ಮತ್ತು ಕೆಆರ್ ಪುರದಿಂದ-ವಿಮಾನ ನಿಲ್ದಾಣ (ಹಂತ 2ಬಿ) ಎಂದು ವಿಭಾಗ ಮಾಡಲಾಗಿದೆ.

ಈ ಮಾರ್ಗದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್, ಎಚ್‌ಎಸ್ಆರ್ ಬಡಾವಣೆ, ಅಗರ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ, ಕೋಡಿಬೀಸನಹಳ್ಳಿ, ಮಾರತ್‌ಹಳ್ಳಿ, ಇಸ್ರೋ, ದೊಡ್ಡನೆಕ್ಕುಂದಿ, ಡಿಆರ್‌ಡಿಓ ಕಾಂಪ್ಲೆಕ್ಸ್, ಸರಸ್ವತಿ ನಗರ, ಕೃಷ್ಣರಾಜಪುರ, ಕಸ್ತೂರಿ ನಗರ, ಹೊರಮಾವು, ಎಚ್‌ಬಿಆರ್‌ ಬಡಾವಣೆ, ಕಲ್ಯಾಣ ನಗರ, ಎಚ್‌ಆರ್‌ಬಿಆರ್ ಬಡಾವಣೆ, ನಾಗವಾರ, ವೀರಣ್ಣಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೆಹಳ್ಳಿ, ಜಕ್ಕೂರು ಕ್ರಾಸ್, ಯಲಹಂಕ, ಬಾಗಲೂರು ಕ್ರಾಸ್, ಬೆಟ್ಟಹಲಸೂರು, ದೊಡ್ಡಜಾಲ, ವಿಮಾನ ನಿಲ್ದಾಣ ನಗರ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿಲ್ದಾಣಗಳಿವೆ.

Previous articleರಾಜಭವನದಲ್ಲಿ ಶೀಘ್ರವೇ ವಾಕಿಂಗ್ ಟೂರ್!
Next articleಚಿತ್ರದುರ್ಗ-ಬೆಂಗಳೂರು ಹೆದ್ದಾರಿ ಟೋಲ್ ಸಂಗ್ರಹ ಡಿಸಿ ಗರಂ!

LEAVE A REPLY

Please enter your comment!
Please enter your name here