ಗ್ರೇಟರ್ ಬೆಂಗಳೂರು. ಬೆಂಗಳೂರು ನಗರವನ್ನು ಸುಗಮವಾಗಿ ನಿರ್ವಹಿಸಲು ಸರ್ಕಾರವು ಬಿಬಿಎಂಪಿಯನ್ನು 5 ಹೊಸ ನಗರ ಪಾಲಿಕೆಗಳಾಗಿ ವಿಂಗಡಿಸಿದ್ದು, ಸೆ.2ರಿಂದ ಗ್ರೇಟರ್ ಬೆಂಗಳೂರು ಜಾರಿಗೆ ಬರಲಿದೆ. ಆದರೆ, ಹೊಸ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲು ಅಗತ್ಯವಿರುವಷ್ಟು ಸಿಬ್ಬಂದಿ ಇಲ್ಲದಿರುವುದು ಈಗ ಪ್ರಮುಖ ಸಮಸ್ಯೆಯಾಗಿದೆ.
ಈ ಹಿಂದೆ, 198 ವಾರ್ಡ್‌ಗಳನ್ನು ಹೊಂದಿದ್ದ ಬಿಬಿಎಂಪಿ ಒಂದೇ ಸಂಸ್ಥೆಯಾಗಿ ಕೆಲಸ ಮಾಡುತ್ತಿತ್ತು. ಆದರೂ, ಪೌರ ಕಾರ್ಮಿಕರನ್ನು ಹೊರತುಪಡಿಸಿ, ಕನಿಷ್ಠ 5,000 ಸಿಬ್ಬಂದಿಯ ಕೊರತೆಯನ್ನು ಎದುರಿಸುತ್ತಿತ್ತು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಅವರ ಪ್ರಕಾರ, ಬಿಬಿಎಂಪಿ 22,000 ಸಿಬ್ಬಂದಿಯನ್ನು ಹೊಂದಿರಬೇಕಾಗಿದ್ದರೂ, ಸದ್ಯ ಕೇವಲ 17,000 ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಇದೀಗ, ನಗರವನ್ನು 450 ವಾರ್ಡ್‌ಗಳನ್ನು ಹೊಂದಿರುವ 5 ನಗರ ಪಾಲಿಕೆಗಳಾಗಿ ವಿಭಜಿಸಲಾಗಿದೆ.
ಪ್ರತಿಯೊಂದು ನಿಗಮವು ಪ್ರತ್ಯೇಕ ಮೇಯರ್, ಉಪ ಮೇಯರ್, ಆಯುಕ್ತರು, ಮುಖ್ಯ ಇಂಜಿನಿಯರ್‌ಗಳು, ಹಾಗೂ ಸ್ಥಾಯಿ ಸಮಿತಿ ಮುಖ್ಯಸ್ಥರನ್ನು ಹೊಂದಿರುತ್ತದೆ. ಈ ಎಲ್ಲಾ ಹುದ್ದೆಗಳಿಗೆ ಪ್ರತ್ಯೇಕ ಸಿಬ್ಬಂದಿ ಅಗತ್ಯವಿರುತ್ತದೆ. ಇದರಿಂದ ಸಿಬ್ಬಂದಿ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ. ಈ ಹೊಸ ರಚನೆಗೆ ಹೆಚ್ಚಿನ ಎಂಜಿನಿಯರ್‌ಗಳು, ಪ್ಯೂನ್‌ಗಳು, ಟೈಪಿಸ್ಟ್‌ಗಳು, ಗುಮಾಸ್ತರು, ಚಾಲಕರು ಮತ್ತು ಸಹಾಯಕರು ಬೇಕಾಗುತ್ತಾರೆ ಎಂದು ಅಮೃತ್ ರಾಜ್ ಹೇಳಿದ್ದಾರೆ.
ಪ್ರಸ್ತುತ ಇರುವ ಹೆಚ್ಚಿನ ಸಿಬ್ಬಂದಿ ಡೆಪ್ಯುಟೇಷನ್ (ಬೇರೆ ಇಲಾಖೆಗಳಿಂದ ಎರವಲು) ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ವ್ಯವಸ್ಥೆಯಿಂದ ಕೆಲಸದ ಗುಣಮಟ್ಟ ಕಡಿಮೆಯಾಗುತ್ತಿದೆ. ಏಕೆಂದರೆ, ಡೆಪ್ಯುಟೇಷನ್ ಮೇಲೆ ಬರುವ ನೌಕರರು ತಾತ್ಕಾಲಿಕವಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ಏನಾದರೂ ತಪ್ಪುಗಳಾದಾಗ ಅವರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ.
ಈ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ನೇರ ನೇಮಕಾತಿಯನ್ನು ಮಾಡಬೇಕು ಎಂದು ನೌಕರರ ಸಂಘ ಒತ್ತಾಯಿಸಿದೆ. ನೇರ ನೇಮಕಾತಿ ಸಿಬ್ಬಂದಿಗಳಲ್ಲಿ ಜವಾಬ್ದಾರಿಯನ್ನು ಹೆಚ್ಚಿಸಿ, ಕೆಲಸದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳಿದ್ದಾರೆ.
ಡಿಲಿಮಿಟೇಶನ್ ಆಯೋಗ ರಚನೆ: ಹೊಸ ನಿಗಮಗಳಿಗೆ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ ನಂತರ ಸಿಬ್ಬಂದಿ ಸಂಖ್ಯೆ ಮತ್ತು ಆಡಳಿತಕ್ಕೆ ಬೇಕಾದ ಬಜೆಟ್ ಅನ್ನು ಗುರುತಿಸುವ ಪ್ರಕ್ರಿಯೆ ನಡೆಯಲಿದೆ. ನಿಗಮಗಳು ರಚನೆಯಾದ ನಂತರ, ಪ್ರತಿ ನಿಗಮದ ಗಡಿಗಳು ಮತ್ತು ವಾರ್ಡ್‌ಗಳ ಸಂಖ್ಯೆಯನ್ನು ನಿರ್ಧರಿಸಲು ಡಿಲಿಮಿಟೇಶನ್ ಆಯೋಗವನ್ನು ರಚಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಹೇಶ್ವರ ರಾವ್ ಹೇಳಿದ್ದಾರೆ.
ಸಿಬ್ಬಂದಿ ಕೊರತೆಯಿಂದಾಗಿ ಈಗಾಗಲೇ ಇರುವ ನೌಕರರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಸರ್ಕಾರ ತಕ್ಷಣ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸುಗಮ ಕಾರ್ಯಾಚರಣೆ ಕಷ್ಟವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.