ಬೆಳಗಾವಿ: ಪ್ರವಾಸಿಗರನ್ನು ಸೆಳೆಯುತ್ತಿರುವ ರಾಜಹಂಸಗಡದ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಮೂರ್ತಿ ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರವಾಗಿ ಬೆಳೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.
ರಾಜಹಂಸಗಡ ಗ್ರಾಮದಲ್ಲಿ ನೂತನ ಶ್ರೀ ಮರಗಾಯಿ ದೇವಿಯ ಪ್ರತಿಷ್ಠಾಪನೆ ಹಾಗೂ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ಮಹಾರಾಷ್ಟ್ರದಿಂದ ಬರುವ ನಾಯಕರು ಸಹ ಇಲ್ಲಿ ನಿರ್ಮಿಸಲಾದ ಶಿವಾಜಿ ಮಹಾರಾಜರ ಮೂರ್ತಿಯ ಮಾದರಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಕೋಟೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರೊಂದಿಗೆ ಸ್ಥಳೀಯ ಭೂಮಿಗೆ ಭಾರೀ ಬೆಲೆ ಬರುತ್ತಿದೆ. ಜೊತೆಗೆ ಉದ್ಯೋಗಾವಕಾಶಗಳು ಬೆಳೆಯುತ್ತಿವೆ. ವ್ಯಾಪಾರ ವಹಿವಾಟು ಚುರುಕುಗೊಂಡಿದೆ. ಸಮಗ್ರವಾಗಿ ಗ್ರಾಮೀಣಾಭಿವೃದ್ಧಿ ದಿಕ್ಕಿನಲ್ಲಿ ಹೊಸ ಅಲೆ ಎದ್ದಿದೆ ಎಂದರು.
ಹಿಂದೆ ಬೆಳಗಾವಿ ಗ್ರಾಮೀಣ ಕ್ಷೇತ್ರ ರಾಜ್ಯದವರಿಗೆ ಅಷ್ಟು ಪರಿಚಿತವಾಗಿರಲಿಲ್ಲ. ಆದರೆ ಈಗ ಎಲ್ಲೆಡೆ ಈ ಕ್ಷೇತ್ರದ ಹೆಸರು ಕೇಳಿಬರುತ್ತಿದೆ. ಬಾರಾಮತಿಯ ಮಾದರಿಯಲ್ಲಿ ಗ್ರಾಮೀಣಾಭಿವೃದ್ಧಿ ಮಾಡಲು ನನ್ನ ಕನಸು. ಚುನಾವಣೆಯ ನಂತರ ರಾಜಕೀಯ ಮೀರಿಸಿ ಎಲ್ಲರನ್ನೂ ಒಟ್ಟಾಗಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ 140ಕ್ಕೂ ಹೆಚ್ಚು ಮಂದಿರಗಳನ್ನು ನಿರ್ಮಿಸಿರುವುದು ನಮ್ಮ ಕಾರ್ಯದ ಸಾಕ್ಷಿ” ಎಂದು ಹೆಬ್ಬಾಳಕರ್ ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ ಮಾತನಾಡಿದರು, ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಮಹಿಳೆಯರಿಗೆ ವಿವಿಧ ಮಾಸಾಶನಗಳ ಆದೇಶ ಪತ್ರಗಳನ್ನು ಸಚಿವೆ ಹಸ್ತಾಂತರಿಸಿದರು.






















